‘ಪರಾಶಕ್ತಿ’ ಸಕ್ಸಸ್ ಮೀಟ್ ವೇದಿಕೆಯಲ್ಲಿ ನಾಯಕ-ನಿರ್ದೇಶಕಿ ಜಗಳ

Sudha Kongara-Sivakarthikeyan: ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಆಗಿದ್ದು ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ಕಾಣುತ್ತಿಲ್ಲ. ಬಿಗಿಯಲ್ಲದ ಚಿತ್ರಕತೆ ಸೇರಿದಂತೆ ವಿಜಯ್ ಅಭಿಮಾನಿಗಳ ವಿರೋಧ ಇನ್ನಿತರೆ ಕಾರಣಗಳಿಗಾಗಿ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಇದೀಗ ಸಿನಿಮಾದ ನಿರ್ದೇಶಕಿ ಮತ್ತು ನಾಯಕ ನಟ ಬಹಿರಂಗವಾಗಿಯೇ ಪರಸ್ಪರ ಆರೋಪಗಳನ್ನು ಮಾಡಿಕೊಂಡಿದ್ದು, ಚಿತ್ರತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.

‘ಪರಾಶಕ್ತಿ’ ಸಕ್ಸಸ್ ಮೀಟ್ ವೇದಿಕೆಯಲ್ಲಿ ನಾಯಕ-ನಿರ್ದೇಶಕಿ ಜಗಳ
Sudha Kongara Shivakarthikeran

Updated on: Jan 14, 2026 | 1:14 PM

ಭಾರಿ ನಿರೀಕ್ಷೆಯಿಂದ ಬಿಡುಗಡೆ ಆದ ‘ಪರಾಶಕ್ತಿ’ (Parasakthi) ಸಿನಿಮಾ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ‘ಜನ ನಾಯಗನ್’ ಸಿನಿಮಾದ ಎದುರು ಉದ್ದೇಶಪೂರ್ಕವಾಗಿ ಸ್ಪರ್ಧೆಗೆ ಬಿದ್ದ ‘ಪರಾಶಕ್ತಿ’ ಸಿನಿಮಾ ಇದೇ ಕಾರಣಕ್ಕೆ ಹೆಚ್ಚು ಸುದ್ದಿಯಾಗಿತ್ತು. ಹಿಂದಿ ಹೇರಿಕೆ ವಿರುದ್ಧ ವಿಷಯವಿದ್ದ ಈ ಸಿನಿಮಾ ರಾಜಕೀಯ ಕಾರಣಗಳಿಗೂ ಕುತೂಹಲ ಹುಟ್ಟಿಸಿತ್ತು. ‘ಪರಾಶಕ್ತಿ’ ಸಿನಿಮಾ ತಮಿಳುನಾಡಿನ ಡಿಎಂಕೆ ಪಕ್ಷದ ಅಜೆಂಡ ಪ್ರಚಾರಕ್ಕಾಗಿ ಮಾಡಲಾದ ಸಿನಿಮಾ ಎಂಬ ಚರ್ಚೆ ಟ್ರೈಲರ್ ಬಿಡುಗಡೆ ಆದಾಗಿನಿಂದಲೂ ಇತ್ತು. ಇದೀಗ ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಆಗಿದ್ದು ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ಕಾಣುತ್ತಿಲ್ಲ. ಬಿಗಿಯಲ್ಲದ ಚಿತ್ರಕತೆ ಸೇರಿದಂತೆ ವಿಜಯ್ ಅಭಿಮಾನಿಗಳ ವಿರೋಧ ಇನ್ನಿತರೆ ಕಾರಣಗಳಿಗಾಗಿ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಇದೀಗ ಸಿನಿಮಾದ ನಿರ್ದೇಶಕಿ ಮತ್ತು ನಾಯಕ ನಟ ಬಹಿರಂಗವಾಗಿಯೇ ಪರಸ್ಪರ ಆರೋಪಗಳನ್ನು ಮಾಡಿಕೊಂಡಿದ್ದು, ಚಿತ್ರತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.

‘ಪರಾಶಕ್ತಿ’ ಸಿನಿಮಾವನ್ನು ಸುಧಾ ಕೊಂಗರ ನಿರ್ದೇಶನ ಮಾಡಿದ್ದು, ಶಿವಕಾರ್ತಿಕೇಯನ್ ನಾಯಕನಾಗಿ ನಟಿಸಿದ್ದಾರೆ. ಸಿನಿಮಾದ ನಾಯಕಿ ಶ್ರೀಲೀಲಾ. ನಿನ್ನೆಯಷ್ಟೆ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ನಿರ್ದೇಶಕಿ ಸುಧಾ ಕೊಂಗರ, ಶಿವಕಾರ್ತಿಕೇಯನ್ ಅನ್ನು ಗುರಿಯಾಗಿಸಿಕೊಂಡು ಕೆಲವು ಆರೋಪಗಳನ್ನು ಮಾಡಿದರು.

ಚಿತ್ರೀಕರಣದ ವೇಳೆ ನನ್ನ ಶಿಸ್ತಿನಿಂದಾಗಿ ನಟರಿಗೆ ಇಕ್ಕಟ್ಟಾಗಿತ್ತು. ಬೆಳಿಗ್ಗೆ 3 ಗಂಟೆಗೆ ಶಿವಕಾರ್ತಿಕೇಯನ್ ಮತ್ತು ಇತರೆ ನಟರು ಏಳಬೇಕಿತ್ತು. ಅದೆಲ್ಲ ಅವರಿಗೆ ಕಷ್ಟವಾಗಿತ್ತು. ಎಲ್ಲರೂ ಬೇಗ ಬೇಗನೆ ಎದ್ದು ರೆಡಿಯಾಗಿ ಸೆಟ್​​ಗೆ ಬರುತ್ತಿದ್ದರು, ತಡವಾಗಿ ಬಂದರೆ ಏನು ನಡೆಯುತ್ತದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿದ್ದೆ’ ಎಂದರು. ಮುಂದುವರೆದು, ‘ಶಿವಕಾರ್ತಿಕೇಯನ್ ಜೊತೆಗೆ ಆರಂಭದಲ್ಲಿ ನನಗೆ ಸೆಟ್ ಆಗಲಿಲ್ಲ. ಕೊನೆಗೆ ಒಮ್ಮೆ ಖುದ್ದು ಮಾತನಾಡಲು ಕರೆದೆ, ಇಬ್ಬರೂ ಸುಮಾರು ನಾಲ್ಕೈದು ಗಂಟೆ ಮಾತನಾಡಿ ಎಲ್ಲ ಗೊಂದಲ ಪರಿಹಾರ ಮಾಡಿಕೊಂಡೆವು’ ಎಂದರು.

ಇದನ್ನೂ ಓದಿ:‘ಪರಾಶಕ್ತಿ’ ಕಳಪೆ ಪ್ರದರ್ಶನ, ವಿಜಯ್ ಅಭಿಮಾನಿಗಳ ಮೇಲೆ ನಿರ್ದೇಶಕಿ ಆರೋಪ

‘ಶಿವಕಾರ್ತಿಕೇಯನ್ ಮಾನಿಟರ್ ಅನ್ನೇ ನೋಡುತ್ತಿರಲಿಲ್ಲ, ಅದು ಬಹಳ ಎಂದರೆ ಬಹಳ ತಪ್ಪು ಕೆಲಸ. ಒಮ್ಮೆ ಹಾಡೊಂದರ ಚಿತ್ರೀಕರಣ ಮಾಡುವಾಗ ಅವರು ಮಾನಿಟರ್ ಪಕ್ಕದಲ್ಲೇ ಇದ್ದರು ಮಾನಿಟರ್ ನೋಡಲಿಲ್ಲ ನಾನು ಆಗ ಕೇಳಿಯೇ ಬಿಟ್ಟೆ ಯಾಕೆ ನೋಡುವುದಿಲ್ಲ ಎಂದು. ಅದಕ್ಕೆ ಅವರು ನಿಮ್ಮ ಕಣ್ಣು ನೋಡಿದರೆ ಗೊತ್ತಾಗುತ್ತದೆ, ಶಾಟ್ ಓಕೆ ಆಗಿದೆಯೋ ಇಲ್ಲವೊ’ ಎಂದರು. ಹಾಗೆ ನಮ್ಮ ಬಾಂಡ್ ಬೆಳೆಯುತ್ತಾ ಹೋಯ್ತು’ ಎಂದರು.

ಬಳಿಕ ಮಾತಿಗೆ ಆಗಮಿಸಿದ ಶಿವಕಾರ್ತಿಕೇಯನ್, ‘ನನಗೆ ಸೆಟ್​​ಗೆ ಬೆಳಿಗ್ಗೆ ಬೇಗ ಹೋಗುವುದು ಕಷ್ಟವೇನೂ ಅಲ್ಲ. ನಟ ಆದಾಗಿನಿಂದಲೂ ನಾನು ಅದನ್ನೇ ಮಾಡಿಕೊಂಡು ಬಂದಿದ್ದೇನೆ. ಬೆಳಿಗ್ಗೆ ಬೇಗ ಶೂಟ್​​ಗೆ ಹೋಗುವುದು ಕಷ್ಟ ಅಲ್ಲ ನನಗೆ. ಇನ್ನು ಮಾನಿಟರ್ ಅನ್ನು ನಾನು ನೋಡುವುದಿಲ್ಲ. ನನಗೆ ಅದು ಇಷ್ಟ ಆಗುವುದಿಲ್ಲ. ನನಗೆ ಪಾತ್ರದ ಬಗ್ಗೆ ಅನುಮಾನ ಇದ್ದರೆ ಮೊದಲೇ ಕೇಳಿ ಬಿಡುತ್ತೇನೆ. ಶೂಟಿಂಗ್​​ಗೆ ಹೋದ ಮೇಲೆ ನಿರ್ದೇಶಕರು ಹೇಳಿದಂತೆ ನಟಿಸುವುದು ಮಾತ್ರ ನನ್ನ ಕೆಲಸ. ಅವರು ಮಾನಿಟರ್ ನೋಡಿ ನನಗೆ ಹೇಳಿದರೆ ನಾನು ಇನ್ನೊಂದು ಶಾಟ್ ಕೊಡುತ್ತೇನೆ. ಇದರಿಂದ ನನಗೆ ಒಳ್ಳೆಯದೇ ಆಗಿದೆ. ನಾನು ಅದನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗಲಿದ್ದೇನೆ’ ಎಂದು ಅಲ್ಲಿಯೇ ಟಾಂಗ್ ನೀಡಿದರು.

ಸಿನಿಮಾ ಬಗ್ಗೆ ಮಾತನಾಡಿ, ‘ಇದು ನಿಜವಾದ ಕತೆ ಅಲ್ಲ. ಇದು ಫಿಕ್ಷನಲ್ ಕತೆ. ಕೆಲವು ಸಿನಿಮ್ಯಾಟಿಕ್ ಲಿಬರ್ಟಿ ತೆಗೆದುಕೊಂಡು ನಾವು ಸಿನಿಮಾ ಮಾಡಿದ್ದೇವೆ. ಎಲ್ಲವೂ ನಡೆದಂತೆ ನಾವು ತೋರಿಸಿಲ್ಲ’ ಎಂದರು. ಅಸಲಿಗೆ ಇದು ಸಹ ಸುಧಾ ಕೊಂಗರ ಅವರಿಗೆ ನೀಡಿದ ಟಾಂಗ್ ಆಗಿತ್ತು, ಏಕೆಂದರೆ ಸುಧಾ ಕೊಂಗರ ಅವರು ತಮ್ಮ ಸಿನಿಮಾವನ್ನು ‘ಇತಿಹಾಸ’ ಎಂದು ಹೇಳಿಕೊಂಡಿದ್ದರು. ಒಟ್ಟಾರೆ ‘ಪರಾಶಕ್ತಿ’ ಚಿತ್ರತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಖಾತ್ರಿ ಆಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ