ಸಿನಿಲೋಕದಲ್ಲಿ ವೃತ್ತಿಯನ್ನು ರೂಪಿಸಬೇಕು ಅಂದುಕೊಳ್ಳುವವರು ಹಲವರು. ಆದರೆ ಅದರಲ್ಲಿ ಯಶಸ್ಸು ಕಾಣೋರು ಕೇವಲ ಬೆರಳೆಣಿಕೆಯಷ್ಟು ಮಂದಿ. ಅಂತಹವರಲ್ಲಿ ಒಬ್ಬರು ಪಲ್ಲವಿ ಗೌಡ. ಪ್ರಸ್ತುತ ಆ್ಯನಿಮೇಶನ್‌ನಲ್ಲಿ ಡಿಪ್ಲೋಮಾ ಶಿಕ್ಷಣ ಪಡೆಯುತ್ತಿರುವ ಇವರು, ಏಕಕಾಲದಲ್ಲಿ ಎರಡು ಧಾರವಾಹಿಗಳಲ್ಲಿ ಬ್ಯುಸಿ ಆಗಿದ್ದಾರೆ. ಪಲ್ಲವಿ ಗೌಡ ಅವರು ನೀಡಿದ ಸಂದರ್ಶನದ ಒಂದು ಭಾಗ ಇಲ್ಲಿದೆ. ನಾನು ಶಾಲಾ ದಿನಗಳಿಂದಲೂ ಬಹಳ ಸಕ್ರಿಯ ಹುಡುಗಿ. ಕ್ರೀಡೆಯಲ್ಲಿ ರನ್ನಿಂಗ್, ಶಾಟ್‌ಪುಟ್, ಫುಟ್ ಬಾಲ್, ನೆಟ್‌ಬಾಲ್ ಹೀಗೆ ಬೇರೆ ಬೇರೆ ರೀತಿಯ ಆಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದೆ.ನೆಟ್‌ಬಾಲ್‌ನಲ್ಲಿ ರಾಷ್ಟಮಟ್ಟದಲ್ಲಿ ಆಡಿದ್ದು ಬೆಸ್ಟ್ ಫೀಲಿಂಗ್.ಒಂದು ಬಾರಿ ಶ್ರೀಲಂಕಾ ದೇಶಕ್ಕೆ ಹೋಗಿದ್ದೆ. ಅಲ್ಲಿಯವರು ಒಮ್ಮೆ ನನ್ನ ಬಳಿ ಬಂದು, ಕೆನ್ನೆ ಸವರಿ, ಅವರದೇ ಭಾಷೆಯಲ್ಲಿ ಏನೋ ಹೇಳಿದರು.ನನಗೆ ಅವರು ಏನು ಹೇಳಿದರು ಎಂದು ಅರ್ಥವಾಗದೇ, ಅಲ್ಲಿದ್ದ ಶಿಕ್ಷಕರ ಬಳಿ ಅದರ ಅರ್ಥ ಕೇಳಿದೆ ಆಗ ಅವರು, ಆ ಹುಡುಗಿಯರು ಬಂದು ಯು ಆರ್ ಕ್ಯೂಟ್, ಐ ಲವ್ ಯೂ ಅಂತ ಹೇಳಿದ್ದು ಅಂತ ಹೇಳಿದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ.
ಸಿನಿಮಾ ರಂಗದೊಳಕ್ಕೆ ಕಲಾದೇವತೆ ಎಲ್ಲರನ್ನೂ ಕೈಬೀಸಿ ಕರೆಯುತ್ತಾಳೆ. ಆದರೆ ಎತ್ತರದಲ್ಲಿದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಎಲ್ಲವನ್ನೂ ಸಮಾನ ಮನಸ್ಸಿನಿಂದ ಸ್ವೀಕರಿಸಿ ಮುಂದೆ ಸಾಗಿದಾಗ ಯಶಸ್ಸು ಗಳಿಸಲು ಸಾಧ್ಯ. ನಾನು ಧಾರಾವಾಹಿ ನಟಿಯಾಗಿದ್ದರೂ, ಇಂದಿಗೂ ಆಡಿಷನ್‌ನಲ್ಲಿ ಭಾಗವಹಿಸುತ್ತೇನೆ ಎಲ್ಲಾದರಲ್ಲೂ ನೂರು ಪರ್ಸೆಂಟ್ ಶ್ರಮ ಹಾಕಿ ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ.
ಇನ್ನು ಭಾಷೆಯ ವಿಷಯಕ್ಕೆ ಬಂದಾಗ, ಹೆಚ್ಚು ಭಾಷೆ ತಿಳಿದಷ್ಟು ಒಳ್ಳೆಯದು. ನನಗೆ ತೆಲುಗು ಇಂಡಸ್ಟಿ ಯಲ್ಲಿ ಅವಕಾಶ ಸಿಕ್ಕಾಗ ನನಗೆ ಭಾಷೆ ಬರುತ್ತಿರಲಿಲ್ಲ. ಆದರೆ ಉಳಿದವರು ಮಾತನಾಡುವುದನ್ನು ಕೇಳುತ್ತಾ, ನಾನೂ ಆದಷ್ಟು ಅದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡುತ್ತಾ ಸಂವಹನ ನಡೆಸಿದ್ದರಿಂದ ಕೇವಲ 18 ದಿನಗಳಲ್ಲಿ ತೆಲುಗು ಭಾಷೆ ಕಲಿಯುವುದು ಸಾಧ್ಯವಾಯಿತು. ಇಂದು ಓರ್ವ ಅಪ್ಪಟ್ಟ ತೆಲುಗು ಹುಡುಗಿಯಾಗಿ ಮಾತನಾಡಬಲ್ಲೆ. ನಮ್ಮ ಭಾಷೆಯ ಮೇಲೆ ಪ್ರೇಮ ಇರಬೇಕು. ಅದರೊಂದಿಗೆ, ಬೇರೆ ಭಾಷೆಗಳನ್ನೂ ಕಲಿತಾಗ ಹೆಚ್ಚಿನ ಅವಕಾಶಗಳು ತೆರೆಯುತ್ತದೆ. ಅಡುಗೆ ಮಾಡುವುದು ಅಂದರೆ ನನಗೆ ಖುಷಿ. ಸಮಯ ಸಿಕ್ಕಾಗಲೆಲ್ಲ ಏನಾದರೂ ತಿಂಡಿ ಮಾಡುತ್ತೇನೆ. ಚಿಕನ್ ಹಾಗೂ ಎಗ್ ರೆಸಿಪಿ ಬಹಳ ಇಷ್ಟ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವಂತೆ ತೆರೆಯ ಮೇಲೆ ಪ್ರತಿಯೊಬ್ಬ ಕಲಾವಿದ ಚೆನ್ನಾಗಿಯೇ ಕಾಣುತ್ತಾರೆ. ಆದರೆ ತೆರೆಯ ಹಿಂದಿನ ಸತ್ಯ ಬಿಚ್ಚಿಡಲು ಯಾರೂ ಬಯಸುವುದಿಲ್ಲ. ಪರದೆ ಮೇಲೆ, ರಂಗುರಂಗಾಗಿ, ಪ್ರತಿನಿತ್ಯ ಬೇರೆ ಬೇರೆ ಬಟ್ಟೆಗಳನ್ನುಟ್ಟು, ಸುತ್ತಾಡಿಕೊಂಡು ಇರೋ ಸೆಲೆಬ್ರಿಟಿಯವರಿಗೆ ಯಾವುದರಲ್ಲೂ ಕಮ್ಮಿ ಇಲ್ಲ ಅಂತ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ತೆರೆಯ ಹಿಂದಿನ ನಗ್ನ ಸತ್ಯ ಕೆಲವರಿಗಷ್ಟೇ ತಿಳಿದಿರುತ್ತೆ. ಸಾಮಾನ್ಯ ಜನರಂತೆ ನಮಗೂ ನೋವು, ಕಷ್ಟ, ದುಃಖ ಇರುತ್ತೆ. ಇಡೀ ದಿನ ಕೆಲಸ ಮಾಡಿದರೂ, ಸಮಯಕ್ಕೆ ಸರಿಯಾಗಿ ವೇತನ ಸಿಗುವುದಿಲ್ಲ. ಹಲವು ಬಾರಿ ಸತತವಾಗಿ ಹಗಲು ರಾತ್ರಿ ಎನ್ನದೆ ನಟನೆಯಲ್ಲಿರುತ್ತೇವೆ. ನಿದ್ದೆ ಬಿಟ್ಟು, ಕೆಲವೊಮ್ಮೆ ಸಂಬಂದಿಕರಿಂದ ದೂರ ಇದ್ದದ್ದು ಇದೆ. ಕಳೆದ ಒಂದು ವರ್ಷದಿಂದ ಯಾವುದೇ ಟ್ರಿಪ್, ಹ್ಯಾಂಗೌಟ್, ಪಾರ್ಟಿ, ಫ್ಯಾಮಿಲಿ ಗೆಟ್ ಟುಗೇದರ್ ಆಗಿಲ್ಲ. ಕೆಲಸ ಅಂತ ಬಂದಾಗ ಇದೆಲ್ಲವನ್ನೂ ಸ್ವಲ್ಪ ಪಕ್ಕಕ್ಕೆ ಸರಿಸಬೇಕಾಗುತ್ತದೆ. ಎಂದು ಇವರು ತಮ್ಮ ಮನದಾಳದ ಮಾತನ್ನು ಈ ಮೂಲಕ ಹಂಚಿಕೊಂಡಿದ್ದಾರೆ.
ಆನಂದ ಜೇವೂರ್, ಕಲಬುರಗಿ