ಇತ್ತೀಚೆಗಷ್ಟೆ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧುಲಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗ ಚೈತನ್ಯ ಈ ಹಿಂದೆ ಸಮಂತಾ ಜೊತೆ ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಹಿಂದೆ ನಾಗ ಚೈತನ್ಯ ಹಾಗೂ ಸಮಂತಾ ದೂರಾಗತ್ತಾರೆ ಎಂದು ಭವಿಷ್ಯ ನುಡಿದಿದ್ದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಈಗ ನಾಗ ಚೈತನ್ಯ ಹಾಗೂ ಶೋಭಿತಾರ ದಾಂಪತ್ಯದ ಕುರಿತು ಭವಿಷ್ಯ ನುಡಿದಿದ್ದು, ಈ ಇಬ್ಬರೂ ಮೂರು ವರ್ಷಗಳ ಬಳಿಕ ದೂರಾಗುತ್ತಾರೆ. ಇವರಿಬ್ಬರು ದೂರಾಗಲು ಹೆಣ್ಣೊಬ್ಬಳು ಕಾರಣ ಆಗಲಿದ್ದಾಳೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಈ ಭವಿಷ್ಯವೇ ವೇಣು ಸ್ವಾಮಿಗೆ ಮುಳುವಾಗುವಂತಿದ್ದು ವೇಣು ಸ್ವಾಮಿ ವಿರುದ್ಧ ದೂರು ದಾಖಲಾಗಿದೆ.
ವೇಣು ಸ್ವಾಮಿ ವಿರುದ್ಧ ಅಕ್ಕಿನೇನಿ ಕುಟುಂಬಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ವೇಣು ಸ್ವಾಮಿ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ‘ನಾನು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಜಾತಕ ವಿಶ್ಲೇಷಣೆ ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಈ ಹಿಂದೆ ನಾಗ ಚೈತನ್ಯ-ಸಮಂತಾರ ಜಾತಕ ವಿಶ್ಲೇಷಣೆ ಮಾಡಿದ್ದೆ, ಅದು ಹೇಳಿದ್ದಂತೆ ನಡೆದಿತ್ತು, ಅದೇ ಜಾತಕ ವಿಶ್ಲೇಷಣೆಯ ಮುಂದುವರೆದ ಭಾಗವಾಗಿ ಶೋಭಿತಾ-ನಾಗ ಚೈತನ್ಯ ಜಾತಕ ವಿಶ್ಲೇಷಣೆ ಮಾಡಿದ್ದೇನೆ. ಆದರೆ ಇನ್ನು ಮುಂದೆ ಯಾವುದೇ ಸಿನಿಮಾ ಸೆಲೆಬ್ರಿಟಿಗಳಾಗಲಿ, ರಾಜಕೀಯ ವಿಶ್ಲೇಷಣೆಯನ್ನಾಗಲಿ ನಾನು ಸಾಮಾಜಿಕ ಜಾಲತಾಣದಲ್ಲಿ ಮಾಡುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ನಾಗ ಚೈತನ್ಯ-ಶೋಭಿತ ವೈವಾಹಿಕ ಜೀವನದ ಬಗ್ಗೆ ವೇಣು ಸ್ವಾಮಿ ಭವಿಷ್ಯ
ನಾಗ ಚೈತನ್ಯ ಮತ್ತು ಶೋಭಿತಾ ಅವರುಗಳ ಜಾತಕ ವಿಶ್ಲೇಷಣೆ ಮಾಡಿದ್ದಕ್ಕೆ ತೆಲುಗು ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಸಹ ಬೇಸರ ವ್ಯಕ್ತಪಡಿಸಿದ್ದು, ತಮಗೆ ಕರೆ ಮಾಡಿ, ಈ ಬಗ್ಗೆ ಮಾತನಾಡಿದ್ದಾರೆ ಎಂದಿರುವ ವೇಣು ಸ್ವಾಮಿ, ‘ಮಂಚು ವಿಷ್ಣು ಅವರು ಕರೆ ಮಾಡಿ ಮಾತನಾಡಿದರು. ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ನಾನು ಅವರಿಗೆ ಈ ವಿಷಯವಾಗಿ ಸ್ಪಷ್ಟನೆ ನೀಡಿದ್ದೇನೆ. ನಾನು ಇನ್ನು ಮುಂದೆ ಸೆಲೆಬ್ರಿಟಿ ಜಾತಕ ವಿಶ್ಲೇಷಿಸುವುದಿಲ್ಲ’ ಎಂದಿದ್ದಾರೆ. ಈ ಬಗ್ಗೆ ಮಂಚು ವಿಷ್ಣು ಅವರನ್ನು ಭೇಟಿಯಾಗಿ ನಾನು ಭರವಸೆ ನೀಡಲಿದ್ದೇನೆ’ ಎಂದಿದ್ದಾರೆ.
ವೇಣು ಸ್ವಾಮಿ ಈ ಹಿಂದೆ ನಾಗ ಚೈತನ್ಯ, ಸಮಂತಾ ಮಾತ್ರವೇ ಅಲ್ಲದೆ ಹಲವು ನಟ-ನಟಿಯರ ಜಾತಕ ವಿಶ್ಲೇಷಣೆಯನ್ನು ಮಾಡಿ ಅದರ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಪ್ರಭಾಸ್ಗೆ ಗೆಲುವು ಸಿಗುವುದಿಲ್ಲ, ಅವರಿಗೆ ಮದುವೆ ಆಗುವುದಿಲ್ಲ ಎಂದಿದ್ದರು. ರಾಜಕೀಯ ವಿಶ್ಲೇಷಣೆಯನ್ನೂ ಮಾಡಿದ್ದ ವೇಣು ಸ್ವಾಮಿ, ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜಗನ್ ಮತ್ತೊಮ್ಮೆ ಭಾರಿ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದಿದ್ದರು. ಆದರೆ ಜಗನ್ ಪಕ್ಷ ಹೀನಾಯವಾಗಿ ಸೋತಿತು. ಬಳಿಕ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದ ವೇಣು ಸ್ವಾಮಿ, ಇನ್ನು ಮುಂದೆ ನಾನು ಯಾರದ್ದೇ ಜಾತಕವನ್ನು ವಿಶ್ಲೇಷಣೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ