
ಬೆಂಗಳೂರು: ಕನ್ನಡ ಚಿತ್ರರಂಗದ ನಟ ಧನ್ವೀರ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಅಕ್ರಮವಾಗಿ 10 ಕೋಟಿ ರೂಪಾಯಿ ನಗದು ವ್ಯವಹಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ದೂರು ನೀಡಲಾಗಿದೆ. ವಕೀಲ ಪ್ರಶಾಂತ್ ಮೆಥಲ್ ಅವರು ಐಟಿ ಮತ್ತು ಇಡಿಗೆ ದೂರು ಸಲ್ಲಿಸಿದ್ದು, ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ನಡುವೆ ಕಾನೂನು ಬಾಹಿರವಾಗಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆದಿದೆ ಎಂದು ಆರೋಪಿಸಿದ್ದಾರೆ.
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದಾರೆ. ಅವರನ್ನು ಜೈಲಿನಿಂದ ಹೊರತರಲು ವಿಜಯಲಕ್ಷ್ಮಿ ಅವರು ಕಾನೂನಿನ ಹೋರಾಟ ಮಾಡುತ್ತಿದ್ದಾರೆ. ಆರಂಭದಿಂದಲೂ ಅವರ ಜೊತೆ ಧನ್ವೀರ್ ಗೌಡ ಕೂಡ ಸಾಥ್ ನೀಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ಕಿರಿಕ್ ಆಗಿದ್ದು, ಅಸಮಾಧಾನ ಬಹಿರಂಗ ಆಗಿದೆ.
ದರ್ಶನ್ ಅವರ ಕಾನೂನು ಹೋರಾಟಕ್ಕಾಗಿ ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ಅವರ ನಡುವೆ 10 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿದೆ ಎನ್ನಲಾಗಿದೆ. ಈ ಅಕ್ರಮ ವ್ಯವಹಾರದ ಸಂಪೂರ್ಣ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಇದರಿಂದಾಗಿ ದರ್ಶನ್ ಕುಟುಂಬಕ್ಕೆ ಮತ್ತು ಧನ್ವೀರ್ ಗೌಡ ಅವರಿಗೆ ಹೊಸ ತಲೆನೋವು ಶುರು ಆದಂತಾಗಿದೆ.
ನಿಯಮಗಳ ಪ್ರಕಾರ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ವ್ಯವಹಾರ ಮಾಡುವಂತಿಲ್ಲ. ಆದರೆ, ಈ ಪ್ರಕರಣದಲ್ಲಿ ಕಾನೂನು ಮೀರಿ ಬರೋಬ್ಬರಿ 10 ಕೋಟಿ ರೂಪಾಯಿ ಕ್ಯಾಷ್ ರೂಪದಲ್ಲಿ ವ್ಯವಹಾರ ನಡೆಸಲಾಗಿದೆ. ಈ ಭಾರಿ ಪ್ರಮಾಣದ ಹಣದ ಮೂಲ ಯಾವುದು ಮತ್ತು ಈ ಅಕ್ರಮ ವಹಿವಾಟಿನ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಧನ್ವೀರ್, ದರ್ಶನ್, ವಿಜಯಲಕ್ಷ್ಮಿ ಹಣಕಾಸಿನ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
‘ಸಾಮಾನ್ಯ ಜನರು ಹಾಗೂ ಶ್ರೀಮಂತರಿಗೂ ದೇಶದ ಕಾನೂನು ಒಂದೇ. ದರ್ಶನ್ ವಿರುದ್ಧದ ಕೇಸ್‌ನಲ್ಲಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವ ಮಾದರಿಯಲ್ಲೇ, ಈ ಅಕ್ರಮ ವಹಿವಾಟಿನ ಬಗ್ಗೆಯೂ ಕಠಿಣ ತನಿಖೆಯಾಗಬೇಕು’ ಎಂದು ವಕೀಲ ಪ್ರಶಾಂತ್ ಮೆಥಲ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Tue, 27 October 26