
ಆಂಧ್ರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ವಿಧಾನಸಭೆ ಚುನಾವಣೆ ಸನಿಹದಲ್ಲಿದೆ. ಈ ಸಂದರ್ಭದಲ್ಲಿ ಆಂಧ್ರ ನಾಡಲ್ಲಿ ‘ರಾಜಧಾನಿ ಫೈಲ್ಸ್’ ಸಿನಿಮಾ (Rajadhani Files Movie) ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರವನ್ನು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪ ಇದೆ. ಈ ಸಿನಿಮಾಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆಡಳಿತ ಪಕ್ಷ ವೈಎಸ್ಆರ್ಸಿಪಿ ಸಿನಿಮಾದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಇವರಿಗೆ ಹಿನ್ನಡೆ ಆಗಿದೆ. ಸಿನಿಮಾ ಪ್ರದರ್ಶನಕ್ಕೆ ಸಮ್ಮತಿ ಸಿಕ್ಕಿದೆ.
ಅಮರಾವತಿ ರಾಜಧಾನಿ ಸಮಸ್ಯೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಸಿಎಂ ಜಗನ್ ಅವರನ್ನು ವಿಲನ್ ರೀತಿಯಲ್ಲಿ ತೋರಿಸಲಾಗಿದೆ ಎಂದು ಆಡಳಿತ ಪಕ್ಷದವರು ಆರೋಪ ಮಾಡಿದ್ದರು. ಹೀಗಾಗಿ ವೈಎಸ್ಆರ್ಸಿಪಿ ‘ರಾಜಧಾನಿ ಫೈಲ್ಸ್’ ಸಿನಿಮಾ ಬಿಡಗುಡೆ ಅವಕಾಶ ನೀಡಬಾರದು ಎಂದು ಒತ್ತಾಯ ಹೇರಿತ್ತು. ಜೊತೆಗೆ ಹೈಕೋರ್ಟ್ಗೆ ಪಕ್ಷದವರು ಅರ್ಜಿ ಸಲ್ಲಿಸಿದ್ದರು.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಫೆಬ್ರವರಿ 15ರಂದೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಈ ಚಿತ್ರ ಕೋರ್ಟ್ನಲ್ಲಿ ಇದ್ದಿದ್ದರಿಂದ ಸಿನಿಮಾ ಪ್ರದರ್ಶನ ಕಂಡಿರಲಿಲ್ಲ. ಈಗ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ಸಿನಿಮಾ ಎಲ್ಲ ಕಡೆಗಳಲ್ಲಿ ಪ್ರದರ್ಶನ ಕಾಣಲಿದೆ.
ಈಗಾಗಲೇ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಎರಡು ಬಾರಿ ನೋಡಲ್ಪಟ್ಟಿದೆ. ಜೊತೆಗೆ ಸೆನ್ಸಾರ್ ಪತ್ರ ಕೂಡ ಸಿಕ್ಕಿದೆ. ಕೆಲವು ದೃಶ್ಯಗಳನ್ನು ತೆಗೆಯಲು ಸೆನ್ಸಾರ್ ಮಂಡಳಿ ಆದೇಶ ನೀಡಿತ್ತು. ಆದಾಗ್ಯೂ ಸಿನಿಮಾಗೆ ತಡೆ ನೀಡಬೇಕು ಎಂದು ಕೋರಿದ್ದು ಸಾಕಷ್ಟು ಬೇಸರ ಮೂಡಿಸಿತ್ತು. ಈಗ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ತಂಡದ ಖುಷಿ ಹೆಚ್ಚಿಸಿದೆ.
ಇದನ್ನೂ ಓದಿ: ‘ರಾಜಧಾನಿ ಫೈಲ್ಸ್’ ಸಿನಿಮಾ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಆಂಧ್ರ ಆಡಳಿತ ಪಕ್ಷ, ಸಿನಿಮಾದಲ್ಲಿ ಅಂಥಹದ್ದೇನಿದೆ?
ಆಂಧ್ರದಲ್ಲಿ ಈಗಾಗಲೇ ರಾಜಕೀಯ ವಿಚಾರದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಜಗನ್ ಪರವಾಗಿ ‘ಯಾತ್ರಾ 2’ ಚಿತ್ರ ಬಿಡುಗಡೆ ಕಂಡಿದೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ವ್ಯೂಹಂ’ ಸಿನಿಮಾ ಬಿಡುಗಡೆ ಆಗುವುದರಲ್ಲಿದೆ. ಇದು ಕೂಡ ರಾಜಕೀಯ ಕಥೆಯನ್ನು ಆಧರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Fri, 16 February 24