‘ರಾಜಧಾನಿ ಫೈಲ್ಸ್’ ಸಿನಿಮಾ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಆಂಧ್ರ ಆಡಳಿತ ಪಕ್ಷ, ಸಿನಿಮಾದಲ್ಲಿ ಅಂಥಹದ್ದೇನಿದೆ?
Cinema Politics: ಆಂಧ್ರ ಪ್ರದೇಶದಲ್ಲಿ ‘ಸಿನಿಮಾ ರಾಜಕೀಯ’ ಜೋರಾಗಿ ನಡೆಯುತ್ತಿದೆ. ಸಿಎಂ ಜಗನ್ ಪರವಾಗಿ ಈಗಾಗಲೇ ‘ಯಾತ್ರ 2’ ಸಿನಿಮಾ ಬಿಡುಗಡೆ ಆಗಿದೆ. ಇದೀಗ ಜಗನ್ ಅನ್ನು ವಿಲನ್ ರೀತಿ ತೋರಿಸಲಾಗಿದೆ ‘ರಾಜಧಾನಿ ಫೈಲ್ಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ಜಗನ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಿದೆ.
ಆಂಧ್ರ ಪ್ರದೇಶ (Andhra Pradesh) ವಿಧಾನಸಭೆ ಚುನಾವಣೆ ಸನಿಹದಲ್ಲಿದೆ. ರಾಜಕೀಯ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ರಾಜಕಾರಣಿಗಳ ಆರೋಪ-ಪ್ರತ್ಯಾರೋಪಗಳ ಜೊತೆಗೆ ಅತಿಯಾಗಿ ಸದ್ದು ಮಾಡುತ್ತಿರುವುದು ಆಂಧ್ರದಲ್ಲಿ ಜೋರಾಗಿ ನಡೆಯುತ್ತಿರುವ ‘ಸಿನಿಮಾ ರಾಜಕೀಯ’. ಸಿನಿಮಾವನ್ನು ರಾಜಕೀಯ ಅಸ್ತ್ರವಾಗಿ ಬಳಸಿ ಪರಸ್ಪರರ ವಿರುದ್ಧ ಜನಾಭಿಪ್ರಾಯ ಬಿತ್ತುವ ಪ್ರಯತ್ನಗಳನ್ನು ಆಂಧ್ರದ ಎರಡು ಪ್ರಮುಖ ರಾಜಕೀಯ ಪಕ್ಷಗಳು ಮಾಡುತ್ತಿವೆ. ಸಿಎಂ ಜಗನ್ ಅವರನ್ನು ಹೀರೋ ರೀತಿ ಬಿಂಬಿಸಲಾಗಿರುವ ‘ಯಾತ್ರ 2’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿ ತೋರಿಸಲಾಗಿರುವ ‘ವ್ಯೂಹಂ’ ಸಿನಿಮಾ ಸಹ ಬಿಡುಗಡೆಗೆ ಸಜ್ಜಾಗಿದೆ. ಇದೀಗ ಜಗನ್ ಅನ್ನು ವಿಲನ್ ರೀತಿ ಬಿಂಬಿಸಲಾಗಿರುವ ‘ರಾಜಧಾನಿ ಫೈಲ್ಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಆಡಳಿತ ಪಕ್ಷ ವೈಎಸ್ಆರ್ಸಿಪಿ ಸಿನಿಮಾದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದೆ.
‘ರಾಜಧಾನಿ ಎಕ್ಸ್ಪ್ರೆಸ್’ ಸಿನಿಮಾನಲ್ಲಿ ಸಿಎಂ ಜಗನ್ ಅನ್ನು ವಿಲನ್ ರೀತಿ ಬಿಂಬಿಸಲಾಗಿದ್ದು, ಜಗನ್ ಒಬ್ಬ ಕ್ರೂರಿ, ಆತ ಜನ ವಿರೋಧಿ, ವೈಯಕ್ತಿಕ ದ್ವೇಷದ ರಾಜಕೀಯಕ್ಕೆ ಒತ್ತು ಕೊಡುತ್ತಿರುವ ವ್ಯಕ್ತಿ ಎಂದು ‘ರಾಜಧಾನಿ ಎಕ್ಸ್ಪ್ರೆಸ್’ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು, ಸಿನಿಮಾ ಫೆಬ್ರವರಿ 15ಕ್ಕೆ ತೆರೆಗೆ ಬರಲಿದೆ. ಆದರೆ ಇದೀಗ ವೈಎಸ್ಆರ್ಸಿಪಿ ಪಕ್ಷವು ‘ರಾಜಧಾನಿ ಫೈಲ್ಸ್’ ಸಿನಿಮಾ ಬಿಡಗುಡೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ವಿಶೇಷವೆಂದರೆ ‘ರಾಜಧಾನಿ ಫೈಲ್ಸ್’ ಸಿನಿಮಾಕ್ಕೆ ಈಗಾಗಲೇ ಸೆನ್ಸಾರ್ ಬೋರ್ಡ್ನಿಂದ ಪ್ರಮಾಣ ಪತ್ರ ದೊರೆತಿದೆ. ಸಿನಿಮಾವನ್ನು ಎರಡೆರಡು ಬಾರಿ ವೀಕ್ಷಿಸಿ, ಪರಿಶೀಲಿಸಿ ಸಿನಿಮಾದಲ್ಲಿ ಯಾವುದೇ ನಿಜ ವ್ಯಕ್ತಿಯನ್ನು ಅವಮಾನ ಪಡಿಸಿಲ್ಲವೆಂಬುದು ಖಾತ್ರಿಪಡಿಸಿಕೊಂಡ ಬಳಿಕವೇ ಪ್ರಮಾಣ ಪತ್ರ ನೀಡಿರುವುದಾಗಿ ಸೆನ್ಸಾರ್ ಬೋರ್ಡ್ ಹೇಳಿದೆ. ಅಸಲಿಗೆ ಸಿನಿಮಾದಲ್ಲಿ ವ್ಯಕ್ತಿಯ ಹೆಸರುಗಳನ್ನು, ರಾಜ್ಯದ ಹೆಸರುಗಳನ್ನು ಬದಲಾಯಿಸಿದ್ದು ಸಿನಿಮಾ ನೋಡುವ ಯಾವುದೇ ವ್ಯಕ್ತಿಗೂ ಇದು ಸುಲಭಕ್ಕೆ ಗೊತ್ತಾಗುತ್ತದೆ.
ಇದನ್ನೂ ಓದಿ:‘ಯಾತ್ರ 2’ ಪ್ರದರ್ಶನದ ವೇಳೆ ಪವನ್ ಕಲ್ಯಾಣ್-ಜಗನ್ ಅಭಿಮಾನಿಗಳ ನಡುವೆ ಮಾರಾಮಾರಿ
ಸಿನಿಮಾದಲ್ಲಿ ಜಗನ್ ಪಾತ್ರ, ಕೊಡಲಿ ನಾನಿ ಪಾತ್ರ, ಸಚಿವೆ ರೋಜ ಪಾತ್ರಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಕೆಲವರು ಸಚಿವರುಗಳ ವೈಯಕ್ತಿಕ ವಿಷಯಗಳನ್ನು ಸಹ ಎಳೆದು ತರಲಾಗಿದೆ. ಕೊಡಲಿ ನಾನಿ, ಸಚಿವೆ ರೋಜಾರ ಕ್ಲಬ್ ಡ್ಯಾನ್ಸ್ಗಳನ್ನು ವ್ಯಂಗ್ಯ ಮಾಡುವ ದೃಶ್ಯಗಳು, ಹಾಡುಗಳು ಇವೆ. ಆದರೆ ಎಲ್ಲ ಪಾತ್ರಗಳ ಹೆಸರು ಬದಲಾವಣೆ ಮಾಡಲಾಗಿದೆ. ಆಂಧ್ರ ಪ್ರದೇಶ ರಾಜ್ಯದ ಹೆಸರನ್ನು ಅರುಣ ಪ್ರದೇಶ ಎಂದು ಬದಲಾಯಿಸಲಾಗಿದೆ. ರಾಜಧಾನಿ ಅಮರಾವತಿ ಹೆಸರನ್ನು ಐರಾವತಿ ಎಂದು ಬದಲಾಯಿಸಲಾಗಿದೆ.
ಜಗನ್ ಪರವಾಗಿ ಅವರ ಸರ್ಕಾರದ ಪರವಾಗಿ ಈಗಾಗಲೇ ‘ಯಾತ್ರಾ 2’ ಸಿನಿಮಾ ಬಿಡುಗಡೆ ಆಗಿದೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ವ್ಯೂಹಂ’ ಸಿನಿಮಾ ಬಿಡುಗಡೆ ಆಗಬೇಕಿತ್ತು, ಆದರೆ ಆ ಸಿನಿಮಾದ ವಿರುದ್ಧ ಟಿಡಿಪಿ ಮುಖಂಡ, ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿದೆ. ಕೆಲವೇ ದಿನಗಳಲ್ಲಿ ‘ವ್ಯೂಹಂ’ ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Wed, 14 February 24