‘ಜೈಲರ್’ ಸಿನಿಮಾ (Jailer Movie) ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಚಿತ್ರದ ಕಲೆಕ್ಷನ್ 600 ಕೋಟಿ ರೂಪಾಯಿ ಸಮೀಪಿಸಿದೆ. ಈ ಮಧ್ಯೆ ‘ಜೈಲರ್’ ನಿರ್ಮಾಣ ಮಾಡಿರುವ ಸನ್ ಪಿಕ್ಚರ್ಸ್ ಹಾಗೂ ಐಪಿಎಲ್ ತಂಡ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (ಆರ್ಸಿಬಿ) ಮಧ್ಯೆ ಕಾನೂನು ಸಮರ ನಡೆದಿತ್ತು. ಈ ಚಿತ್ರದ ದೃಶ್ಯವೊಂದರಲ್ಲಿ ಕಾಂಟ್ರ್ಯಾಕ್ಟ್ ಕಿಲ್ಲರ್ ಆರ್ಸಿಬಿ ಜೆರ್ಸಿ ಧರಿಸಿ ಬರುತ್ತಾನೆ. ಇದನ್ನು ತೆಗೆದು ಹಾಕಬೇಕು ಎಂದು ಕೋರ್ಟ್ಗೆ ಆರ್ಸಿಬಿ ಮನವಿ ಮಾಡಿತ್ತು. ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ಸನ್ ಪಿಕ್ಚರ್ಸ್ (Sun Pictures) ಒಪ್ಪಿದೆ. ಈ ದೃಶ್ಯವನ್ನು ಮಾರ್ಪಾಡು ಮಾಡುವ ಭರವಸೆಯನ್ನು ಕೋರ್ಟ್ಗೆ ನೀಡಿದೆ.
ಸಿನಿಮಾದಲ್ಲಿ ಕಥಾ ನಾಯಕನನ್ನು ಬೆನ್ನತ್ತಿ ಬರುವ ಕಾಂಟ್ರ್ಯಾಕ್ಟ್ ಕಿಲ್ಲರ್ ಆರ್ಸಿಬಿ ಜೆರ್ಸಿ ಧರಿಸಿರುತ್ತಾನೆ. ಜೊತೆಗೆ ಮಹಿಳೆಯ ಬಗ್ಗೆ ಕೆಟ್ಟ ಭಾಷೆ ಪ್ರಯೋಗಿಸುತ್ತಾನೆ. ಈ ದೃಶ್ಯವನ್ನು ಆರ್ಸಿಬಿಯ ಕಾನೂನು ತಂಡ ಪ್ರಶ್ನೆ ಮಾಡಿತ್ತು. ‘ನಮ್ಮ ಜೆರ್ಸಿಯ ಅನಧಿಕೃತ ಬಳಕೆಯು ಬ್ರ್ಯಾಂಡ್‌ನ ಜನಪ್ರಿಯತೆ ಮತ್ತು ಅದರ ಪ್ರಾಯೋಜಕರ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡಬಹುದು’ ಎಂದು ಆರ್ಸಿಬಿ ದೆಹಲಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ‘ಆರ್ಸಿಬಿ ಜೆರ್ಸಿ ಇರುವ ದೃಶ್ಯಕ್ಕೆ ಕತ್ತರಿ ಹಾಕಿ ಅಥವಾ ಮಾರ್ಪಾಡು ಮಾಡಿ’ ಎಂದು ಸನ್ ಪಿಕ್ಚರ್ಸ್ಗೆ ಕೋರ್ಟ್ ಆದೇಶ ನೀಡಿದೆ.
ಈಗ ಎರಡೂ ಕಡೆಯುವರು ಒಂದು ಒಪ್ಪಂದಕ್ಕೆ ಬಂದಿದ್ದು, ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ‘ನಾವು ದೃಶ್ಯವವನ್ನು ಮಾರ್ಪಾಡು ಮಾಡುತ್ತೇವೆ. ಸೆಪ್ಟೆಂಬರ್ 1ರಿಂದ ಥಿಯೇಟರ್ನಲ್ಲಿ ಮಾರ್ಪಾಡು ಮಾಡಿದ ದೃಶ್ಯ ಬಿತ್ತರ ಆಗಲಿದೆ. ಒಟಿಟಿಯಲ್ಲೂ ಆ ದೃಶ್ಯವನ್ನು ಬದಲಿಸಿ ರಿಲೀಸ್ ಮಾಡಲಾಗುವುದು| ಎಂದು ಸನ್ ಪಿಕ್ಚರ್ಸ್ ಪರ ವಕೀಲರು ಕೋರ್ಟ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವಾದ್ಯಂತ 550 ಕೋಟಿ ರೂಪಾಯಿ ಗಳಿಸಿದ ‘ಜೈಲರ್’; ರಜನಿಕಾಂತ್ ಚಿತ್ರಕ್ಕೆ ಭಾರತದಲ್ಲಿ 295 ಕೋಟಿ ರೂ. ಕಲೆಕ್ಷನ್
‘ಜೈಲರ್’ ಸಿನಿಮಾದಲ್ಲಿ ರಜನಿಕಾಂತ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್, ತಮನ್ನಾ, ವಿನಾಯಕನ್ ಸೇರಿ ಅನೇಕರು ಇತರ ಪ್ರಮುಖ ಪಾತ್ರ ಮಾಡಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಅವರು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ