
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss) ಮುಗಿದಿದ್ದು ನಿರೀಕ್ಷೆಯಂತೆ ಗಿಲ್ಲಿ ಗೆದ್ದಿದ್ದಾರೆ. 50 ಲಕ್ಷ ಬಹುಮಾನದ ಜೊತೆಗೆ ಇನ್ನೂ ಹಲವು ಉಡುಗೊರೆಗಳು, ಇತರೆ ಕೆಲವು ನಗದು ಬಹುಮಾನಗಳು ಸಹ ಗಿಲ್ಲಿಗೆ ದೊರೆತಿವೆ. ಆದರೆ ಗಿಲ್ಲಿ ಗೆದ್ದ ಬಳಿಕ ಗಿಲ್ಲಿಯ ಗೆಲುವಿನ ಬಗ್ಗೆ ಕೆಲವರು ಅಪಸ್ವರಗಳನ್ನು ಎತ್ತುತ್ತಿದ್ದಾರೆ. ಇದೇ ಸೀಸನ್ನ ಕೆಲವು ಸ್ಪರ್ಧಿಗಳು ಗಿಲ್ಲಿ ಗೆಲುವನ್ನು ಅನುಮಾನದಿಂದ ನೋಡುತ್ತಿದ್ದಾರೆ. ಗಿಲ್ಲಿಗೆ ಆರಂಭದಿಂದಲೂ ಪ್ರಬಲ ಪೈಪೋಟಿ ಕೊಡುತ್ತಾ ಬಂದಿದ್ದ ಅಶ್ವಿನಿ ಅವರು, ಹೊರಗೆ ಬಂದ ಬಳಿಕ ಗಿಲ್ಲಿ ಸುಳ್ಳು ಹೇಳಿ ಆಟ ಆಡಿದ್ದಾನೆ, ನನಗೆ ಬಂದಿರುವ ಮಾಹಿತಿ ಪ್ರಕಾರ ಗಿಲ್ಲಿಗಿಂತಲೂ ನನಗೆ ಹೆಚ್ಚಿನ ಮತಗಳು ಬಂದಿವೆ ಎಂದೆಲ್ಲ ಹೇಳಿದ್ದಾರೆ. ಅಶ್ವಿನಿ ಮಾತ್ರವೇ ಅಲ್ಲದೆ ಇನ್ನೂ ಕೆಲವು ಸ್ಪರ್ಧಿಗಳು ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ.
ಗಿಲ್ಲಿಯ ಹಿನ್ನೆಲೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಗಿಲ್ಲಿ ಬಡವ ಎಂದು ಹೇಳಿಕೊಂಡು ಮೋಸ ಮಾಡಿ ಗೆದ್ದಿದ್ದಾನೆ ಎಂಬರ್ಥದ ಮಾತುಗಳನ್ನು ಅಶ್ವಿನಿ ಗೌಡ ಅವರು ಆಡಿದ್ದಾರೆ. ಧ್ರುವಂತ್ ಸಹ ಈ ಬಗ್ಗೆ ಮಾತನಾಡಿದ್ದು, ‘ಗಿಲ್ಲಿ ತಾನು ಬಡವ ಎಂದು ಹೇಳಿಕೊಂಡಿಲ್ಲ ಆದರೆ ತೋರಿಸಿಕೊಂಡಿದ್ದಾರೆ. ಅವರು 24 ಲಕ್ಷ ರೂಪಾಯಿ ಬೆಲೆಯ ಕಾರಿನಲ್ಲಿ ಓಡಾಡುತ್ತಿದ್ದಾರೆ ಅವರನ್ನು ಬಡವ ಎನ್ನಲು ಆಗುತ್ತ’ ಎಂದು ಧ್ರುವಂತ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಗಿಲ್ಲಿ ಬಡವನಾ ಶ್ರೀಮಂತನಾ? ಮುತ್ತಿನಂಥ ಮಾತು ಹೇಳಿದ ಸೂರಜ್
ಇದೇ ವಿಷಯವಾಗಿ ಮಾತನಾಡಿರುವ ಇದೇ ಸೀಸನ್ನ ಮತ್ತೊಬ್ಬ ಸ್ಪರ್ಧಿ ಅಭಿಷೇಕ್, ‘ಗಿಲ್ಲಿ ಬಡವನೋ ಶ್ರೀಮಂತನೋ ಅದು ಚರ್ಚೆಯ ವಿಷಯವೇ ಅಲ್ಲ. ಕೆಲವರು ಹೇಳುತ್ತಿದ್ದಾರೆ ಅವನ ಬಳಿ ಆ ಕಾರು ಇದೆ, ಈ ಕಾರು ಇದೆ ಎಂದೆಲ್ಲ. ಆದರೆ ಅದೆಲ್ಲ ವಿಷಯ ಅಲ್ಲ, ಆತ ಬಿಗ್ಬಾಸ್ ಮನೆಯಲ್ಲಿ ಸಿಂಪತಿ ಬಳಸಿ ಆಟ ಆಡಿಲ್ಲ, ಸಿಂಪತಿ ಬಳಸಿ ಗೆದ್ದು ಸಹ ಇಲ್ಲ. ಆತ ಒಳ್ಳೆಯ ಕಲಾವಿದ, ಒಬ್ಬಿಬ್ಬರನ್ನೇ ನಗಿಸುವುದು ಬಹಳ ಕಷ್ಟ ಹಾಗಿರುವಾಗ ಗಿಲ್ಲಿ ಇಡೀ ರಾಜ್ಯವನ್ನು ನಗಿಸಿದ್ದಾರೆ. ಅವನಿಗಾಗಿ ಜನ ಖುಷಿಯಿಂದ ಶೋ ನೋಡುತ್ತಿದ್ದರು. ನನಗಂತೂ ಅವನು ಗೆದ್ದಿದ್ದು ಬಹಳ ಖುಷಿ ಇದೆ. ಗಿಲ್ಲಿಗೆ ಒಳ್ಳೆಯದಾಗಲಿ’ ಎಂದಿದ್ದಾರೆ.
ಇನ್ನು ಇದೇ ಸೀಸನ್ಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹೋಗಿದ್ದ ಸೂರಜ್ ಮಾತನಾಡಿ, ‘ಗಿಲ್ಲಿ ಬಡವನೊ, ಶ್ರೀಮಂತನೊ ಎಂಬ ವಿಷಯ ಚರ್ಚೆ ಆಗಲೇ ಬೇಕಿಲ್ಲ. ಅವನು ಪ್ರತಿಭಾವಂತ ಅದರ ಬಗ್ಗೆ ಚರ್ಚೆ ಆಗಬೇಕಿದೆ. ಈಗ ಶೋ ಮುಗಿದು ಹೋಗಿದೆ, ಗಿಲ್ಲಿ ಗೆದ್ದಿದ್ದು ಆಗಿದೆ, ಈಗ ಚರ್ಚೆ ಮಾಡುವುದು ಅನವಶ್ಯಕ’ ಎಂದು ಸೂರಜ್ ಹೇಳಿದ್ದಾರೆ. ಇನ್ನು ಕಾವ್ಯಾ ಸಹ ಇದೇ ರೀತಿಯ ಮಾತುಗಳನ್ನಾಡಿದ್ದು, ‘ಗಿಲ್ಲಿ ಇಡೀ ಶೋನಲ್ಲಿ ನಾನು ಬಡವ ಎಂದು ಒಮ್ಮೆ ಸಹ ಹೇಳಿಕೊಂಡಿಲ್ಲ, ಇಡೀ ಶೋನಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಆತ ಸಿಂಪತಿ ಗಳಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ, ಹಾಗಿದ್ದ ಮೇಲೆ ಅವನ ಹಿನ್ನೆಲೆ ಹೇಗಿದ್ದರೇನು, ಅವನು ತನ್ನ ಸ್ವಂತ ಪ್ರತಿಭೆಯಿಂದ ಮಾತ್ರವೇ ಗೆದ್ದಿದ್ದಾನೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ