ಕೊರೊನಾ ಹೊಡೆತಕ್ಕೆ ಎಲ್ಲ ಉದ್ಯಮಗಳು ನೆಲಕಚ್ಚುತ್ತಿವೆ. ಕೊವಿಡ್ 19 ಎರಡನೇ ಅಲೆಯ ಭೀಕರತೆಗೆ ಅನೇಕ ರಾಜ್ಯಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಯಾಗಿದೆ. ಈ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರ ಕೂಡ ತೀವ್ರ ನಷ್ಟ ಅನುಭವಿಸುತ್ತಿದೆ. ಬಹುನಿರೀಕ್ಷಿತ ಸಿನಿಮಾಗಳೆಲ್ಲವೂ ಬಿಡುಗಡೆ ದಿನಾಂಕ ಮುಂದೂಡಿಕೊಂಡಿವೆ. ಈಗ ಟಾಲಿವುಡ್ ಸ್ಟಾರ್ ನಟ ದಗ್ಗುಬಾಟಿ ವೆಂಕಟೇಶ್ ಅವರ ‘ನಾರಪ್ಪ’ ಚಿತ್ರ ಕೂಡ ರಿಲೀಸ್ ಆಗಲು ಹಿಂದೇಟು ಹಾಕಿದೆ.
ಸದ್ಯಕ್ಕಂತೂ ಆಂಧ್ರ ಮತ್ತು ತೆಲಂಗಾಣದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಆಗಿಲ್ಲ. ಈಗಲೂ ಅಲ್ಲಿ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಹಾಗಿದ್ದರೂ ಕೂಡ ನಾರಪ್ಪ ಚಿತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡದಿರಲು ವೆಂಕಟೇಶ್ ನಿರ್ಧರಿಸಿದ್ದಾರೆ. ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ಮೇ 14ರಂದು ಈ ಚಿತ್ರ ಬಿಡುಗಡೆ ಆಗುವುದರಲ್ಲಿತ್ತು. ಆದರೆ ಈಗ ಚಿತ್ರತಂಡ ಹೊಸ ಮಾಹಿತಿ ಹಂಚಿಕೊಂಡಿದೆ.
‘ತುಂಬ ಪರಿಶ್ರಮ ಮತ್ತು ಶ್ರದ್ಧೆಯಿಂದ ನಾವು ನಾರಪ್ಪ ಸಿನಿಮಾ ಮಾಡಿದ್ದೇವೆ. ಈ ಸಿನಿಮಾ ಬಗ್ಗೆ ನೀವು ತೋರಿಸುತ್ತಿರುವ ಪ್ರೀತಿ ಕೂಡ ಅಪಾರವಾಗಿದೆ. ಆದರೆ ಸಾಂಕ್ರಮಿಕದ ಕಾರಣದಿಂದ ಎಲ್ಲರೂ ಕಷ್ಟಪಡಬೇಕಾದ ಪರಿಸ್ಥಿತಿ ಬಂದಿರುವಾಗ ಎಲ್ಲ ಪ್ರೇಕ್ಷಕರ ಮತ್ತು ಪ್ರೀತಿಪಾತ್ರರ ಆರೋಗ್ಯದ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಈ ಚಿತ್ರವನ್ನು ಮುಂದೂಡಲು ನಿರ್ಧರಿಸಿದ್ದೇವೆ. ಪರಿಸ್ಥಿತಿ ಸರಿಯಾದ ಬಳಿಕ ನಾವು ಈ ಸಿನಿಮಾವನ್ನು ನಿಮಗೆ ತೋರಿಸುತ್ತೇವೆ. ಅಲ್ಲಿಯವರೆಗೂ ನಿಮ್ಮ ಸುರಕ್ಷತೆಯನ್ನು ನೀವು ಕಾಪಾಡಿಕೊಳ್ಳಿ. ಇದನ್ನೆಲ್ಲ ಒಟ್ಟಿಗೆ ಎದುರಿಸೋಣ’ ಎಂದು ಸೋಶಿಯಲ್ ಮೀಡಿಯಾ ಮೂಲಕ ವೆಂಟೇಶ್ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಟ ಧನುಶ್ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಸಿನಿಮಾ ಅಸುರನ್. ಆ ಚಿತ್ರದ ತೆಲುಗು ರಿಮೇಕ್ ಆಗಿ ‘ನಾರಪ್ಪ’ ಸಿದ್ಧವಾಗಿದೆ. ಕೊರೊನಾ ಹೆಚ್ಚುತ್ತಿರುವುದರಿಂದ ಈ ಚಿತ್ರ ಓಟಿಟಿಯಲ್ಲಿ ತೆರೆಕಾಣಬಹುದು ಎಂಬ ಗಾಸಿಪ್ ಕೂಡ ಕೇಳಿಬಂದಿತ್ತು. ಆದರೆ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿರುವ ಚಿತ್ರತಂಡ ಓಟಿಟಿ ರಿಲೀಸ್ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಆ ಮೂಲಕ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಕಡಿಮೆ ಎಂಬುದು ಗೊತ್ತಾಗಿದೆ.
In lieu of the pandemic, #Narappa will not be releasing on May 14th . A new theatrical date will be announced once we overcome this unprecedented crisis.
Stay safe ?! #NarappaPostponed#Priyamani @KarthikRathnam3 #SrikanthAddala #ManiSharma @SureshProdns @theVcreations pic.twitter.com/7QWIL8lOG6— Venkatesh Daggubati (@VenkyMama) April 29, 2021
ಈ ಚಿತ್ರದಲ್ಲಿ ದಗ್ಗುಬಾಟಿ ವೆಂಕಟೇಶ್ ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ಗಳು ಭಾರಿ ಕೌತುಕ ಮೂಡಿಸಿವೆ. ಶ್ರೀಕಾಂತ್ ಅಡ್ಡಲ ನಿರ್ದೇಶನ ಮಾಡಿದ್ದು, ಪ್ರಿಯಾಮಣಿ, ಪ್ರಕಾಶ್ ರಾಜ್ ಮುಂತಾದವರು ಇನ್ನುಳಿದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿಗೆ ತುತ್ತಾಗಿದ್ದ ರನ್ನ, ಅಣ್ಣಯ್ಯ, ಬಿಂದಾಸ್ ಸಿನಿಮಾ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್ ಇನ್ನಿಲ್ಲ