ದರ್ಶನ್, ರೇಣುಕಾಸ್ವಾಮಿ ಕೇಸ್: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ವಿನಯ್

ದರ್ಶನ್, ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚುರುಕುಗೊಂಡಿದೆ. ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು 10ನೇ ಆರೋಪಿ ವಿನಯ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಇತರೆ ಆರೋಪಿಗಳಾದ ಅನುಕುಮಾರ್ ಹಾಗೂ ಜಗದೀಶ್ ಅವರ ಜಾಮೀನು ಅರ್ಜಿಗಳ ವಿಚಾರಣೆ ಕೂಡ ನಡೆದಿದೆ.

ದರ್ಶನ್, ರೇಣುಕಾಸ್ವಾಮಿ ಕೇಸ್: ಮಾಫಿ ಸಾಕ್ಷಿ ಅರ್ಜಿ ವಾಪಸ್ ಪಡೆದ ವಿನಯ್
Darshan, Renukaswamy
Image Credit source: Tv9 Kannada
Edited By:

Updated on: Oct 14, 2026 | 7:13 PM

ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಮಹತ್ವದ ತಿರುವು ಪಡೆದುಕೊಳ್ಳುತ್ತಿದ್ದು, ನ್ಯಾಯಾಲಯದಲ್ಲಿ ವಿಚಾರಣೆಗಳು ಚುರುಕುಗೊಂಡಿವೆ. ನಟ ದರ್ಶನ್ ಹಾಗೂ ಇತರ ಆರೋಪಿಗಳ ವಿರುದ್ಧದ ಈ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿ, 10ನೇ ಆರೋಪಿ ವಿನಯ್ ಅವರು ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿಸಲು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ.

ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್ ರಾವ್ ಈಗಾಗಲೇ ಮಾಫಿಸಾಕ್ಷಿ ಆಗಿದ್ದಾರೆ. ವಿನಯ್ ಕೂಡ ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇತ್ತೀಚೆಗೆ ಈ ಅರ್ಜಿಯನ್ನು ಹಿಂಪಡೆಯುವುದಾಗಿ ಅವರ ವಕೀಲರು ನ್ಯಾಯಾಲಯಕ್ಕೆ ಅಧಿಕೃತವಾಗಿ ಮೆಮೋ ಸಲ್ಲಿಸಿದರು. ವಕೀಲರ ಈ ಮೆಮೋವನ್ನು ಪರಿಗಣಿಸಿದ 59ನೇ ಸಿಸಿಎಚ್ ಕೋರ್ಟ್, ವಿನಯ್ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಅಧಿಕೃತವಾಗಿ ವಜಾಗೊಳಿಸಿ ಆದೇಶಿಸಿದೆ.

ಇದೇ ವೇಳೆ, ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಗೆ ಸೂಕ್ತ ಸೌಲಭ್ಯ ಹಾಗೂ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೈಲಿನ ಪರಿಸ್ಥಿತಿ ಹಾಗೂ ತಮ್ಮ ಅಹವಾಲುಗಳ ಕುರಿತು ನ್ಯಾಯಾಧೀಶರೇ ಖುದ್ದು ಪರಿಶೀಲನೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಸಂಪೂರ್ಣವಾಗಿ ಆಲಿಸಿದ 59ನೇ ಸಿಸಿಎಚ್ ಕೋರ್ಟ್, ತನ್ನ ಆದೇಶವನ್ನು ಕಾಯ್ದಿರಿಸಿದೆ.

ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಕುಮಾರ್ ಹಾಗೂ ಜಗದೀಶ್ ಅವರ ಜಾಮೀನು ಅರ್ಜಿಗಳ ವಿಚಾರಣೆಯೂ ಪೂರ್ಣಗೊಂಡಿದ್ದು, ನ್ಯಾಯಾಲಯವು ಅಕ್ಟೋಬರ್ 17ರಂದು ಈ ಅರ್ಜಿಗಳ ಮೇಲಿನ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಪ್ರಕರಣದ ವಿಚಾರಣೆಯು ಪ್ರಮುಖ ಘಟ್ಟ ತಲುಪುತ್ತಿದ್ದು, ಸಾಕ್ಷ್ಯ ಸಂಗ್ರಹಣೆ ಹಾಗೂ ವಿಚಾರಣೆಗಾಗಿ ಪ್ರತ್ಯಕ್ಷದರ್ಶಿಗಳಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಕರಣ: ನ್ಯಾಯಾಲಯದಲ್ಲಿ ದರ್ಶನ್‌ ಸಲ್ಲಿಸಿದ್ದ ಎರಡು ಅರ್ಜಿಗಳು ವಜಾ

ಅಕ್ಟೋಬರ್ 27ರಂದು ವಿಚಾರಣೆಗೆ ಹಾಜರಾಗುವಂತೆ ಪುನೀತ್ ಅವರಿಗೆ ಸಮನ್ಸ್ ನೀಡಲಾಗಿದೆ. ಮತ್ತೊಬ್ಬ ಸಾಕ್ಷಿ ಕಿರಣ್ ಅವರು ಅಕ್ಟೋಬರ್ 28ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಸೆಕ್ಯುರಿಟಿ ಗಾರ್ಡ್ ನರೇಂದ್ರ ಸಿಂಗ್ ಅಕ್ಟೋಬರ್ 29ರಂದು ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಸಮನ್ಸ್ ಹೊರಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us