ಸಾವಿರದಿಂದ ಹಿಡಿದು 10 ಕೋಟಿ ರೂ. ಶ್ವಾನದವರೆಗೆ; ಡೆವಿಲ್ ನಾಯಕಿ ರಚನಾ ರೈ ಬರೆದ ಪುಸ್ತಕದ ವಿಶೇಷತೆ

Rachana Rai: ದರ್ಶನ್ ತೂಗುದೀಪ ಅವರ 'ಡೆವಿಲ್' ಚಿತ್ರದ ನಾಯಕಿ ರಚನಾ ರೈ ಶ್ವಾನಪ್ರಿಯೆ. ನಾಯಿಗಳ ಬಗ್ಗೆ ಅಪಾರ ತಿಳುವಳಿಕೆ ಹೊಂದಿರುವ ಇವರು 'ಓ ಮೈ ಡಾಗ್' ಅಂಕಣ ಮತ್ತು ಪುಸ್ತಕ ಬರೆದಿದ್ದಾರೆ. ವಿವಿಧ ತಳಿಗಳ ನಾಯಿಗಳ ಆರೈಕೆ, ಗುಣಲಕ್ಷಣಗಳ ಬಗ್ಗೆ ಮಾಹಿತಿ ನೀಡುವ ಈ ಕೃತಿ ಕನ್ನಡದಲ್ಲಿ ವಿಶಿಷ್ಟ. ಶ್ವಾನ ಪ್ರಿಯರಿಗೆ ಮಾರ್ಗದರ್ಶಿ. ಅನಾಥ ನಾಯಿಗಳ ಆರೈಕೆ ಕೇಂದ್ರ ತೆರೆಯುವ ಕನಸು ಅವರದ್ದು.

ಸಾವಿರದಿಂದ ಹಿಡಿದು 10 ಕೋಟಿ ರೂ. ಶ್ವಾನದವರೆಗೆ; ಡೆವಿಲ್ ನಾಯಕಿ ರಚನಾ ರೈ ಬರೆದ ಪುಸ್ತಕದ ವಿಶೇಷತೆ
ರಚನಾ ರೈ

Updated on: Dec 12, 2025 | 1:03 PM

ದರ್ಶನ್ ತೂಗುದೀಪ ಅವರ ಬಹುನಿರೀಕ್ಷಿತ ಚಿತ್ರ ಡೆವಿಲ್ (Devil) ಡಿ.11ರಂದು ತೆರೆಕಂಡಿದೆ. ಈ ಚಿತ್ರದ ನಾಯಕ ನಟಿ ರಚನಾ ರೈ (ಶ್ರಾವ್ಯಾ ರೈ) ಅವರ ಕುರಿತಾದ ಆಸಕ್ತಿದಾಯಕವಾದ ವಿಷಯವೊಂದು ಇಲ್ಲಿದೆ. ರಚನಾ ರೈ (Rachana Rai) ಸ್ವಭಾವತಃ ಶ್ವಾನಪ್ರಿಯೆ. ಅವರಿಗೆ ನಾಯಿಗಳ ಕುರಿತಾಗಿ ವಿಶೇಷ ಪ್ರೀತಿ ಹಾಗೂ ಅಕ್ಕರೆ. ಅಷ್ಟೇ ಅಲ್ಲ, ಶ್ವಾನಗಳ ವಿವಿಧ ತಳಿಗಳ ಬಗೆಗೂ ಅವರಿಗೆ ಸಾಕಷ್ಟು ತಿಳುವಳಿಕೆ ಇದೆ. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರು ಹೊಸದಿಗಂತ ಪತ್ರಿಕೆಯಲ್ಲಿ ವೈವಿಧ್ಯಮಯ ತಳಿಗಳ ನಾಯಿಗಳ ಬಗೆಗೆ ಅಂಕಣವೊಂದನ್ನು ಬರೆಯುತ್ತಿದ್ದದ್ದು ವಿಶೇಷ. ‘ಓ ಮೈ ಡಾಗ್’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಅಂಕಣ ಸುಮಾರು ನಲವತ್ತಕ್ಕಿಂತಲೂ ಅಧಿಕ ತಳಿಗಳ ನಾಯಿಗಳ ಬಗೆಗೆ ಸಮಗ್ರ ಮಾಹಿತಿ ಒದಗಿಸಿಕೊಟ್ಟಿತ್ತೆಂಬುದು ಗಮನಾರ್ಹ.

ಈ ಅಂಕಣ ಪ್ರತಿಯೊಂದು ತಳಿಗಳ ಶ್ವಾನಗಳ ಗುಣ ಲಕ್ಷಣ, ಅವುಗಳನ್ನು ಸಾಕಬೇಕಾದ ವಿಧಾನ, ನೋಡಿಕೊಳ್ಳಬೇಕಾದ ರೀತಿ, ವಿಶೇಷತೆಗಳು, ಆ ನಾಯಿಗಳಿಗೆ ಬೇಕಾಗುವ ವಾತಾವರಣಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿಕೊಡುತ್ತಾ, ಶ್ವಾನಪ್ರಿಯರಿಗೆ ಮಾರ್ಗದರ್ಶನದ ಕೈಪಿಡಿಯಂತಿತ್ತು. ನಾಲ್ಕೈದು ಸಾವಿರ ರೂಪಾಯಿಗಳಷ್ಟು ಬೆಲೆಬಾಳುವ ನಾಯಿಮರಿಗಳಿಂದ, ಹತ್ತು ಕೋಟಿ ಮೌಲ್ಯ ಹೊಂದಿದ ನಾಯಿಗಳವರೆಗೆ ‘ಓ ಮೈ ಡಾಗ್’ ಅಂಕಣದಲ್ಲಿ ವಿವರಣೆ ಬಂದಿತ್ತೆಂಬುದು ಉಲ್ಲೇಖಾರ್ಹ. ಈ ಅಂಕಣವೇ ಮುಂದೆ ‘ಓ ಮೈ ಡಾಗ್’ ಎಂಬ ಹೆಸರಿನಲ್ಲಿ ಪುಸ್ತಕವೊಂದು ಪ್ರಕಟವಾಗುವುದಕ್ಕೂ ಕಾರಣವಾಯಿತು. ಹಾಗಾಗಿ ರಚನಾ ರೈ ಓರ್ವ ಬರಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ರಚನಾ ರೈ ಬರೆದಿರುವ ‘ಓ ಮೈ ಡಾಗ್’ ಕೃತಿಯಂತಹ ಮತ್ತೊಂದು ಕೃತಿ ಕನ್ನಡದಲ್ಲಿ ಇದುವರೆಗೂ ಬಂದಿಲ್ಲ. ಪ್ರತಿಯೊಂದು ತಳಿಯ ನಾಯಿಯ ಬಗೆಗೆ ಇಷ್ಟೊಂದು ವ್ಯಾಪಕ ಮಾಹಿತಿ ಕೊಟ್ಟ ಈ ಕೃತಿಯನ್ನು ಶ್ವಾನ ಪ್ರಿಯರು ಮಿಸ್ ಮಾಡದೇ ಓದಬೇಕು.

ಮುದ್ರಣವಾದ ಮೂರೇ ದಿನಗಳಲ್ಲಿ ಮುದ್ರಿಸಿದ ಅಷ್ಟೂ ಪ್ರತಿಗಳು ಮಾರಾಟವಾಗಿ ಮುಗಿದದ್ದು ಆ ಕೃತಿಯ ಜನಪ್ರಿಯತೆಯನ್ನು ಸೂಚಿಸುತ್ತದೆ. ‘ಇಷ್ಟೊಂದು ತಳಿಯ ನಾಯಿಗಳಿವೆ ಎಂಬುದೇ ಗೊತ್ತಿರಲಿಲ್ಲ’ ಎಂದು ಅನೇಕ ಓದುಗರು ಪ್ರತಿಕ್ರಿಯಿಸಿದ್ದು ರಚನಾ ಅವರ ಶ್ವಾನಜ್ಞಾನಕ್ಕೆ ಹಿಡಿದ ಕೈಗನ್ನಡಿ. ಓ ಮೈ ಡಾಗ್ ಕೃತಿ ಪ್ರಕಟಗೊಂಡ ನಂತರ ರಚನಾ ಅವರನ್ನು ಅನೇಕ ಕಡೆ ಪೆಟ್ ಶಾಪ್ ಗಳ ಉದ್ಘಾಟನೆಗೆ ಕರೆದದ್ದು, ಜನ ತಮ್ಮ ಮನೆಯಲ್ಲಿ ನಾಯಿಗಳಿಗೆ ಅಸೌಖ್ಯವಾದಾಗ ರಚನಾ ಅವರಿಗೆ ಕರೆಮಾಡಿ ಮಾರ್ಗದರ್ಶನ ಕೇಳಿದ್ದೆಲ್ಲ ಓ ಮೈ ಡಾಗ್ ಪುಸ್ತಕ ಮಾಡಿದ ಪರಿಣಾಮವೇ ಆಗಿದೆ!

ಇದನ್ನೂ ಓದಿ: ಎಲ್ಲ ಹೀರೋಯಿನ್​ಗಳಂತಲ್ಲ ‘ಡೆವಿಲ್’ ನಾಯಕಿ; ರಚನಾ ರೈ ಬಗೆಗಿನ ಅಪರೂಪದ ಮಾಹಿತಿ

ರಚನಾ ರೈ ಅವರಿಗೆ ಅನಾಥ ನಾಯಿಗಳ ಕುರಿತಾಗಿ ಸಾಕಷ್ಟು ಅನುಕಂಪವಿದೆ. ಹಾಗಾಗಿ ತನ್ನ ಜೀವನದಲ್ಲಿ ಅಂತಹ ನಾಯಿಗಳ ಆರೈಕೆಗಾಗಿ ಕೇಂದ್ರವೊಂದನ್ನು ತೆರೆಯಬೇಕೆಂಬ ಕನಸೂ ಇದೆ. ನಾಯಿಗಳ ವಿಚಾರ ಬಂದಾಗ ಎಲ್ಲಿಲ್ಲದ ಉತ್ಸಾಹ ಆಕೆಯಲ್ಲಿ ಮನೆಮಾಡುತ್ತದೆ. ಮಾಡೆಲಿಂಗ್, ಸಿನೆಮಾದಂತಹ ಕ್ಷೇತ್ರ ಆಕೆಯ ವೃತ್ತಿಯಾದರೂ ನಾಯಿಗಳ ಆರೈಕೆ, ನಾಯಿಗಳೆಡೆಗಿನ ಪ್ರೀತಿ ಅವರ ನೆಚ್ಚಿನ ವಿಚಾರ.

ರಾಕೇಶ್ ಕುಮಾರ್ ಕಮ್ಮಜೆ

ಪ್ರಾಂಶುಪಾಲರು, ಅಂಬಿಕಾ ಮಹಾವಿದ್ಯಾಲಯ ಪುತ್ತೂರು

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Fri, 12 December 25