
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಸಿನಿಮಾ ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬಂದಿದೆ, ಆದರೆ ಈಗಲೂ ಸಹ ಹಲವು ಕಡೆಗಳಲ್ಲಿ ತುಂಬಿದ ಗೃಹಗಳ ಪ್ರದರ್ಶನವನ್ನು ಕಾಣುತ್ತಿದೆ ‘ಧುರಂಧರ್’ ಸಿನಿಮಾ. ಸಿನಿಮಾದ ಹವಾ ಎಷ್ಟಿದೆಯಂತೆ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಲಿರುವ ಸಿನಿಮಾದ ಎರಡನೇ ಭಾಗವಾದ ‘ಧುರಂಧರ್ 2’ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ‘ಧುರಂಧರ್’ ದೊಡ್ಡ ಹಿಟ್ ಆಗಿರುವ ಕಾರಣ, ‘ಧುರಂಧರ್ 2’ ಸಿನಿಮಾವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಿರ್ಮಿಸಿಲು ಚಿತ್ರತಂಡ ಸಜ್ಜಾಗಿದ್ದು, ಇದೀಗ ‘ಧುರಂಧರ್ 2’ ಸಿನಿಮಾಕ್ಕೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟನ ಎಂಟ್ರಿ ಸಹ ಆಗಲಿದೆ ಎನ್ನಲಾಗುತ್ತಿದೆ.
‘ಧುರಂಧರ್’ ಸಿನಿಮಾ ನಿರ್ದೇಶಿಸಿರುವ ಆದಿತ್ಯ ಧರ್ ಅವರ ಮೊದಲ ಸಿನಿಮಾ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’. ‘ಧುರಂಧರ್’ ರೀತಿ ಆ ಸಿನಿಮಾ ಸಹ ಸೈನ್ಯ ಮತ್ತು ದೇಶಪ್ರೇಮದ ಜಾನರ್ ಅನ್ನು ಒಳಗೊಂಡಿತ್ತು. ಸಿನಿಮಾನಲ್ಲಿ ವಿಕ್ಕಿ ಕೌಶಲ್ ನಾಯಕನಾಗಿ ನಟಿಸಿದ್ದರು. ‘ಉರಿ’ಗೆ ಮೊದಲು ಒಳ್ಳೆಯ ನಟ ಎಂದಷ್ಟೆ ಎನಿಸಿಕೊಂಡಿದ್ದ ವಿಕ್ಕಿ ಕೌಶಲ್, ‘ಉರಿ’ಯ ಬಳಿಕ ಸ್ಟಾರ್ ನಟ ಆದರು. ರೊಮ್ಯಾಂಟಿಕ್, ರಿಯಲ್ ಲೈಫ್ ಕತೆಗಳಲ್ಲಿ ಮಾತ್ರವಲ್ಲ ಪಕ್ಕಾ ಆಕ್ಷನ್ ಸಿನಿಮಾಗಳಿಗೂ ಸರಿಹೊಂದುವ ನಟ ತಾವು ಎಂಬುದನ್ನು ವಿಕ್ಕಿ ಕೌಶಲ್ ‘ಉರಿ’ ಮೂಲಕ ಸಾಬೀತುಪಡಿಸಿದರು. ಇದೀಗ ಆದಿತ್ಯ ಧರ್ ಅವರು, ತಮ್ಮ ಮೊದಲ ಸಿನಿಮಾದ ನಾಯಕನನ್ನು ‘ಧುರಂಧರ್ 2’ ಸಿನಿಮಾಕ್ಕೆ ಕರೆ ತರಲು ಮುಂದಾಗಿದ್ದಾರೆ.
ಇದೀಗ ಹರಿದಾಡುತ್ತಿರುವ ಸುದ್ದಿಗಳಂತೆ ವಿಕ್ಕಿ ಕೌಶಲ್ ಅವರು ‘ಧುರಂಧರ್ 2’ ಸಿನಿಮಾನಲ್ಲಿ ಇರಲಿದ್ದಾರಂತೆ. ಅಸಲಿಗೆ ‘ಉರಿ’ ಸಿನಿಮಾನಲ್ಲಿ ‘ಧುರಂಧರ್’ ಸಿನಿಮಾದ ನಾಯಕ ಜಸ್ಕೀರತ್ ಸಿಂಗ್ ರಂಗಿ (ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಿಜ ಹೆಸರು) ಉಲ್ಲೇಖ ಇದೆ. ‘ಉರಿ’ ಸಿನಿಮಾನಲ್ಲಿ ನಾಯಕ, ಮಹಿಳಾ ಸೈನ್ಯಾಧಿಕಾರಿಯೊಟ್ಟಿಗೆ ಮಾತನಾಡುವಾಗ ಆಕೆ ‘ಜಸ್ಕೀರತ್ ಸಿಂಗ್ ರಂಗಿ ನನ್ನ ಪತಿ, ಅವರು ನೌಶೇರಾನಲ್ಲಿ ನಡೆದ ಆಪರೇಷನ್ನಲ್ಲಿ ಹುತಾತ್ಮರಾಗಿದ್ದಾರೆ’ ಎಂದು ಹೇಳುತ್ತಾರೆ. ಅಂತೆಯೇ ಇದೀಗ ‘ಧುರಂಧರ್ 2’ ಸಿನಿಮಾನಲ್ಲಿ ‘ಉರಿ’ ಸಿನಿಮಾದ ನಾಯಕ ವಿಹಾನ್ ಶೇರ್ಗಿಲ್ (ವಿಕ್ಕಿ ಕೌಶಲ್ ಪಾತ್ರದ ಹೆಸರು) ಸಹ ಎಂಟ್ರಿ ಕೊಡಲಿದ್ದಾರೆ. ಆದರೆ ಇದು ಅತಿಥಿ ಪಾತ್ರ ಮಾತ್ರವೇ ಆಗಿರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಸಿನಿಪ್ರಿಯರಿಗೆ ಖುಷಿ ಸುದ್ದಿ; ಒಟಿಟಿಗೆ ಬರೋಕೆ ರೆಡಿ ಆಯ್ತು ‘ಧುರಂಧರ್’
‘ಧುರಂಧರ್’ ಸಿನಿಮಾನಲ್ಲಿ ಅಕ್ಷಯ್ ಕುಮಾರ್ ಪಾತ್ರ ಸಖತ್ ಹಿಟ್ ಆಗಿದ್ದು, ‘ಧುರಂಧರ್ 2’ ಸಿನಿಮಾನಲ್ಲಿಯೂ ಅವರ ಪಾತ್ರವನ್ನು ಮುಂದುವರೆಸಲಿದ್ದಾರೆ ಎನ್ನಲಾಗುತ್ತಿದೆ. ‘ಧುರಂಧರ್’ ಸಿನಿಮಾನಲ್ಲಿ ಆ ಪಾತ್ರ ಮರಣ ಹೊಂದಿದೆಯಾದರೂ ಫ್ಲ್ಯಾಷ್ ಬ್ಯಾಕ್ಗಳಲ್ಲಿ ಅಕ್ಷಯ್ ಪಾತ್ರವನ್ನು ಮತ್ತೆ ತರಲಾಗುತ್ತದೆಯಂತೆ. ಇದೀಗ ಅದರ ಜೊತೆಗೆ ವಿಕ್ಕಿ ಕೌಶಲ್ ಪಾತ್ರವೂ ಬಂದಲ್ಲಿ ಪ್ರೇಕ್ಷಕರಿಗೆ ಡಬಲ್ ಧಮಾಕ ಆಗಲಿದೆ. ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ