ಅಲ್ಲು ಅರ್ಜುನ್​ ಜತೆ ಸಿನಿಮಾ ಮಾಡಲು 60 ಕೋಟಿ ರೂ. ಸಂಬಳ ಕೇಳಿದ ಅಟ್ಲಿ?

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅಟ್ಲಿ ಅವರು ಬೇಡಿಕೆ ಹೊಂದಿದ್ದಾರೆ. ‘ಜವಾನ್​’ ಗೆಲುವಿನ ಬಳಿಕ ಅವರ ಸಂಭಾವನೆ ಹೆಚ್ಚಾಗಿದೆ. ಏಕಾಏಕಿ ಆಗಿ ಅವರು 60 ಕೋಟಿ ರೂಪಾಯಿ ಸಂಬಳ ಕೇಳುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಅಲ್ಲು ಅರ್ಜುನ್​ ಜೊತೆ ಅಟ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಆಗುವುದು ಬಾಕಿಯಿದೆ.

ಅಲ್ಲು ಅರ್ಜುನ್​ ಜತೆ ಸಿನಿಮಾ ಮಾಡಲು 60 ಕೋಟಿ ರೂ. ಸಂಬಳ ಕೇಳಿದ ಅಟ್ಲಿ?
ಅಲ್ಲು ಅರ್ಜುನ್​, ಅಟ್ಲಿ

Updated on: Mar 12, 2024 | 12:24 PM

ಸ್ಟಾರ್​ ನಟರು ಮಾತ್ರವಲ್ಲದೇ ಕೆಲವು ನಿರ್ದೇಶಕರು ಕೂಡ ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಈಗ ಕಾಲಿವುಡ್​ ನಿರ್ದೇಶಕ ಅಟ್ಲಿ ಅವರ ಸಂಭಾವನೆ (Atlee Remuneration) ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಕಳೆದ ವರ್ಷ ‘ಜವಾನ್​’ ಸಿನಿಮಾ ಮೂಲಕ ಬಹುದೊಡ್ಡ ಗೆಲುವು ಪಡೆದ ಅಟ್ಲಿ (Atlee) ಅವರಿಗೆ ಈಗ ಸಖತ್​ ಬೇಡಿಕೆ ಇದೆ. ಆ ಬೇಡಿಕೆಗೆ ತಕ್ಕಂತೆ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಅವರು ಅಲ್ಲು ಅರ್ಜುನ್​ (Allu Arjun) ಜೊತೆ ಸಿನಿಮಾ ಮಾಡಲಿದ್ದಾರೆ. ಆ ಚಿತ್ರಕ್ಕಾಗಿ ಬರೋಬ್ಬರಿ 60 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಎಂದು ಸುದ್ದಿ ಆಗಿದೆ.

ಅಲ್ಲು ಅರ್ಜುನ್​ ಅವರು ಈಗ ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆದರೆ ಮುಂದಿನ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗುತ್ತದೆ. ಆ ಹೈಪ್​ಗೆ ತಕ್ಕಂತೆ ಸಿನಿಮಾ ಮಾಡಬೇಕು ಎಂದರೆ ನಿರ್ದೇಶಕರ ಮೇಲೆ ಒತ್ತಡ ಜಾಸ್ತಿ ಇರುತ್ತದೆ. ಹಾಗಾಗಿ ಅಟ್ಲಿ ಅವರು ಅಲ್ಲು ಅರ್ಜುನ್​ ಜೊತೆಗಿನ ಸಿನಿಮಾಗೆ ದೊಡ್ಡ ಸಂಭಾವನೆ ಡಿಮ್ಯಾಂಡ್​ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಶಾರುಖ್​ ಕಾಲಿಗೆ ನಮಸ್ಕರಿಸಿದ ‘ಜವಾನ್​’ ನಿರ್ದೇಶಕ ಅಟ್ಲಿ; ಕಿಂಗ್ ಖಾನ್​ ಪ್ರತಿಕ್ರಿಯೆ ಏನು?

ಅಟ್ಲಿ ನಿರ್ದೇಶನ ಮಾಡಿದ ‘ಜವಾನ್’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿತು. ಆ ಸಿನಿಮಾದಿಂದ ಶಾರುಖ್​ ಖಾನ್​ ಅವರ ಚಾರ್ಮ್​ ಹೆಚ್ಚಾಯಿತು. ಪ್ಯಾನ್​ ಇಂಡಿಯಾ ನಿರ್ದೇಶಕರಾಗಿ ಅಟ್ಲಿ ಹೊರಹೊಮ್ಮಿದರು. ಇತ್ತೀಚೆಗೆ ಅವರಿಗೆ ‘ಜೀ ಸಿನಿ ಅವಾರ್ಡ್ಸ್​’ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿತು. ಅವರ ಜೊತೆ ಸಿನಿಮಾ ಮಾಡಲು ಹಲವು ಸ್ಟಾರ್​ ನಟರು, ನಿರ್ಮಾಪಕರು ಕಾದಿದ್ದಾರೆ.

ಅಲ್ಲು ಅರ್ಜುನ್​ ಮತ್ತು ಅಟ್ಲಿ ಅವರ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಸಿನಿಮಾ ಬಗ್ಗೆ ಹಲವು ದಿನಗಳಿಂದ ಅಂತೆ-ಕಂತೆಗಳು ಕೇಳಿಬರುತ್ತಿವೆ. ಈ ಸಿನಿಮಾ ಬಗ್ಗೆ ಅಧಿಕೃತವಾಗಿ ಯಾವುದೇ ಘೋಷಣೆ ಆಗಿಲ್ಲ. ಈಗ ಹೊಸ ನ್ಯೂಸ್​ ನೀಡುವ ಸಂದರ್ಭ ಹತ್ತಿರ ಆಗಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ವರುಣ್​ ಧವನ್​ ನಟನೆಯ ‘ಬೇಬಿ ಜಾನ್​’ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಮನೆಗೆ ಪದೇಪದೇ ಭೇಟಿ ನೀಡುತ್ತಿರುವ ಅಟ್ಲಿ; ಏನು ಸಮಾಚಾರ?

ಕಾಲಿವುಡ್​ನಲ್ಲಿ ಅಟ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ರಾಜಾ ರಾಣಿ’, ‘ಥೇರಿ’, ‘ಮೆರ್ಸಲ್​’, ‘ಬಿಗಿಲ್​’ ಸಿನಿಮಾಗಳು ಅವರ ನಿರ್ದೇಶನದಲ್ಲಿ ಮೂಡಿಬಂದಿವೆ. ಬಾಲಿವುಡ್​ನಲ್ಲಿ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ಜವಾನ್’.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us