ಶಾರುಖ್ ಕಾಲಿಗೆ ನಮಸ್ಕರಿಸಿದ ‘ಜವಾನ್’ ನಿರ್ದೇಶಕ ಅಟ್ಲಿ; ಕಿಂಗ್ ಖಾನ್ ಪ್ರತಿಕ್ರಿಯೆ ಏನು?
‘ಜವಾನ್’ ಸಿನಿಮಾದಿಂದ ಶಾರುಖ್ ಖಾನ್ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಆ ಸಿನಿಮಾದಿಂದ ನಿರ್ದೇಶಕ ಅಟ್ಲಿ ಅವರ ಜನಪ್ರಿಯತೆ ಕೂಡ ಹೆಚ್ಚಿತು. ಈಗ ಅವರು ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಪಡೆದಿದ್ದಾರೆ. ಅವಾರ್ಡ್ ಸ್ವೀಕರಿಸುವುದಕ್ಕೂ ಮುನ್ನ ಅಟ್ಲಿ ಅವರು ಶಾರುಖ್ ಖಾನ್ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ (Atlee) ಅವರಿಗೆ ಬಾಲಿವುಡ್ನಲ್ಲಿ ಈಗ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಅದಕ್ಕೆ ಕಾರಣ ಆಗಿದ್ದು ‘ಜವಾನ್’ (Jawan) ಸಿನಿಮಾದ ಗೆಲುವು. ಇದು ಅಟ್ಲಿ ನಿರ್ದೇಶನ ಮಾಡಿದ ಮೊದಲ ಹಿಂದಿ ಸಿನಿಮಾ. ಚೊಚ್ಚಲ ಬಾಲಿವುಡ್ ಪ್ರಾಜೆಕ್ಟ್ನಲ್ಲೇ ಶಾರುಖ್ ಖಾನ್ ಜೊತೆ ಕೆಲಸ ಮಾಡುವ ಅವಕಾಶ ಅಟ್ಲಿ ಅವರಿಗೆ ಸಿಕ್ಕಿತು. 2023ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡ ‘ಜವಾನ್’ ಚಿತ್ರಕ್ಕೆ ಈಗ ಪ್ರಶಸ್ತಿಗಳು ಕೂಡ ಸಿಗುತ್ತಿವೆ. ಅವಾರ್ಡ್ ಸ್ವೀಕರಿಸುವಾಗ ಅಟ್ಲಿ ಅವರು ಶಾರುಖ್ ಖಾನ್ (Shah Rukh Khan) ಕಾಲಿಗೆ ನಮಸ್ಕರಿಸಿದ್ದಾರೆ.
‘ಜವಾನ್’ ಸಿನಿಮಾದ ನಿರ್ದೇಶನಕ್ಕಾಗಿ ಅಟ್ಲಿ ಅವರಿಗೆ ‘ಜೀ ಸಿನಿ ಅವಾರ್ಡ್ಸ್ 2024’ರಲ್ಲಿ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸಿಕ್ಕಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರ ಹೆಸರು ಘೋಷಣೆ ಆದಾಗ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಹತ್ತುವುದಕ್ಕೂ ಮುನ್ನ ಅಟ್ಲಿ ಅವರು ಶಾರುಖ್ ಖಾನ್ ಕಾಲಿಗೆ ನಮಸ್ಕರಿಸಿದರು. ಅದನ್ನು ತಡೆಯಲು ಶಾರುಖ್ ಮುಂದಾದರು.
ಇದನ್ನೂ ಓದಿ: ನಾಟು ನಾಟು ಸ್ಟೆಪ್ ಹಾಕಲಾಗದೇ ಸೋತ ಆಮಿರ್, ಸಲ್ಲು, ಶಾರುಖ್; ಮುಜುಗರ ತಪ್ಪಿಸಲು ಮಾಡಿದ್ದೇನು?
ತಮ್ಮ ಕಾಲಿಗೆ ಬೀಳಲು ಬಂದ ನಿರ್ದೇಶಕನನ್ನು ತಡೆಯಲು ಶಾರುಖ್ ಖಾನ್ ಪ್ರಯತ್ನಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. ಕಿಂಗ್ ಖಾನ್ ಕಾಲಿಗೆ ನಮಸ್ಕರಿಸಿದ ಬಳಿಕವೇ ಅಟ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಈಗ ಅಟ್ಲಿ ಅವರಿಗೆ 37 ವರ್ಷ ವಯಸ್ಸು. ಶಾರುಖ್ ಖಾನ್ ಅವರಿಗೆ 58 ವರ್ಷ ವಯಸ್ಸು. ಇಬ್ಬರ ನಡುವೆ 21 ವರ್ಷಗಳ ಅಂತರ ಇದೆ. ತಮಗಿಂತ ಹಿರಿಯರಾದ ಶಾರುಖ್ ಖಾನ್ಗೆ ಅಟ್ಲಿ ಅವರು ಗೌರವ ನೀಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುವ ಮೂಲಕ ತಮ್ಮ ಅನಿಸಿಕೆ ತಿಳಿಸುತ್ತಿದ್ದಾರೆ.
View this post on Instagram
ಅಟ್ಲಿ ಅವರು ನಿರ್ದೇಶಕನಾಗಿ 10 ವರ್ಷ ಕಳೆದಿದೆ. ಈವರೆಗೂ ಅವರು ಡೈರೆಕ್ಷನ್ ಮಾಡಿದ್ದು 5 ಸಿನಿಮಾಗಳಿಗೆ ಮಾತ್ರ. ಅವರ ಎಲ್ಲ ಸಿನಿಮಾಗಳು ಜನಮನ ಗೆದ್ದಿವೆ. ಮೊದಲೆಲ್ಲ ಕೇವಲ ತಮಿಳು ಸಿನಿಮಾಗಳಿಗೆ ನಿರ್ದೇಶನ ಮಾಡುತ್ತಿದ್ದ ಅವರು ಈಗ ಬಾಲಿವುಡ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ವರುಣ್ ಧವನ್ ನಟನೆಯ ‘ಬೇಬಿ ಜಾನ್’ ಸಿನಿಮಾಗೆ ಈಗ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೇ 31ರಂದು ಈ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆ ಇದೆ. ದಕ್ಷಿಣ ಭಾರತದ ನಿರ್ದೇಶಕರಿಗೆ ಬಾಲಿವುಡ್ನಲ್ಲಿ ಡಿಮ್ಯಾಂಡ್ ಹೆಚ್ಚುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.