‘ದಿ ರಾಜಾ ಸಾಬ್’ ಸೋಲಿನ ಬಳಿಕ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಮಾರುತಿ

‘ದಿ ರಾಜಾ ಸಾಬ್’ ಬಿಡುಗಡೆ ನಂತರ 3 ತಿಂಗಳು ಮೌನವಾಗಿದ್ದ ಮಾರುತಿ ಈಗ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ರಾಮ ನವಮಿ ದಿನವೇ ಹೊಸ ಚಿತ್ರದ ಸ್ಕ್ರಿಪ್ಟ್ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಪ್ರಭಾಸ್ ಜತೆ ಸಿನಿಮಾ ಮಾಡಿ ಸೋತ ಅವರು ಈಗ ಯಾವ ಹೀರೋಗೆ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿದೆ.

‘ದಿ ರಾಜಾ ಸಾಬ್’ ಸೋಲಿನ ಬಳಿಕ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಮಾರುತಿ
Director Maruthi

Updated on: Mar 27, 2026 | 6:23 PM

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆ ಚಿತ್ರಕ್ಕೆ ನಿರ್ದೇಶಕ ಮಾರುತಿ ಅವರು ಆ್ಯಕ್ಷನ್-ಕಟ್ ಹೇಳಿದ್ದರು. ಪ್ರಭಾಸ್ ಅವರ ಮೊದಲ ಹಾರರ್ ಸಿನಿಮಾ ಎಂಬ ಕಾರಣಕ್ಕೆ ಹೈಪ್ ಹೆಚ್ಚಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾ ಮಕಾಡೆ ಮಲಗಿತು. ‘ದಿ ರಾಜಾ ಸಾಬ್’ ಸಿನಿಮಾದ ಸೋಲನ್ನು ಒಪ್ಪಿಕೊಂಡಿರುವ ನಿರ್ದೇಶಕ ಮಾರುತಿ (Director Maruthi) ಈಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

2026ರ ಆರಂಭದಲ್ಲಿ ಬಿಡುಗಡೆಯಾದ ‘ದಿ ರಾಜಾ ಸಾಬ್’ ಹಾರರ್ ಕಾಮಿಡಿ ಸಿನಿಮಾ ಆದ್ದರಿಂದ ಭಾರಿ ಕುತೂಹಲ ಮೂಡಿಸಿತ್ತು. ಮೊದಲ ದಿನವೇ ವಿಶ್ವದಾದ್ಯಂತ 100 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದರೂ, ಕಳಪೆ ವಿಮರ್ಶೆ ಮತ್ತು ಪ್ರೇಕ್ಷಕರ ನಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಚಿತ್ರದ ಕಲೆಕ್ಷನ್ ಕುಸಿಯಿತು. ಒಟ್ಟಾರೆ 200 ಕೋಟಿ ರೂಪಾಯಿ ಗಳಿಸಿದರೂ ಸಹ, ವಿತರಕರಿಗೆ ಸುಮಾರು 160-170 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಈ ಎಲ್ಲ ಬೆಳವಣಿಗೆಗಳ ನಂತರ ಸೋಶಿಯಲ್ ಮೀಡಿಯಾದಿಂದ ದೂರವಿದ್ದ ಮಾರುತಿ, ಶ್ರೀರಾಮನವಮಿಯ ಶುಭ ಸಂದರ್ಭದಲ್ಲಿ ಅಭಿಮಾನಿಗಳಿಗೆ ಅಪ್‌ಡೇಟ್ ನೀಡಿದ್ದಾರೆ. ತಮ್ಮ ಮನೆಯ ದೇವರ ಕೋಣೆಯಲ್ಲಿ ಪೂಜೆ ಸಲ್ಲಿಸುತ್ತಿರುವ ಫೋಟೋ ಹಂಚಿಕೊಂಡಿರುವ ಅವರು, ದೇವರ ಮುಂದಿರುವ ಸ್ಕ್ರಿಪ್ಟ್ ಪುಸ್ತಕದ ಮೇಲೆ ಹೂವುಗಳನ್ನು ಇರಿಸಿ ಹೊಸ ಚಿತ್ರದ ಸುಳಿವು ನೀಡಿದ್ದಾರೆ.

‘ಪ್ರತಿಯೊಂದು ಪ್ರಯಾಣವೂ ಒಂದು ಕಲಿಕೆಯ ಅನುಭವ. ಈ ಪವಿತ್ರ ಶ್ರೀರಾಮನವಮಿಯ ಸಂದರ್ಭದಲ್ಲಿ, ದೇವರ ಆಶೀರ್ವಾದದೊಂದಿಗೆ ನನ್ನ ಮುಂದಿನ ಚಿತ್ರದ ಸ್ಕ್ರಿಪ್ಟ್‌ಗೆ ಅಂತಿಮ ಸ್ಪರ್ಶ ನೀಡುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ’ ಎಂದು ಮಾರುತಿ ಅವರು ಪೋಸ್ಟ್ ಮಾಡಿದ್ದಾರೆ. ಸದ್ಯಕ್ಕೆ ಈ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಅಥವಾ ಇದು ಯಾವ ರೀತಿಯ ಕಥೆ ಎಂಬ ಬಗ್ಗೆ ಮಾರುತಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ: ದಿ ರಾಜಾ ಸಾಬ್: ಚಿತ್ರಮಂದಿರದಲ್ಲಿ ಪ್ರಭಾಸ್ ಸಿನಿಮಾ ಫ್ಲಾಪ್, ಒಟಿಟಿಯಲ್ಲಿ ಸೂಪರ್ ಹಿಟ್

ಕೇವಲ ಹೊಸ ಸಿನಿಮಾ ಮಾತ್ರವಲ್ಲದೆ, ‘ದಿ ರಾಜಾ ಸಾಬ್’ ಚಿತ್ರಕ್ಕೆ ಸಿಕ್ಕ ವಿಮರ್ಶೆಗಳ ಬಗ್ಗೆಯೂ ಮಾರುತಿ ಮೃದುವಾಗಿ ಪ್ರತಿಕ್ರಿಯಿಸಿದ್ದಾರೆ. ‘ನನ್ನನ್ನು ಸದಾ ಬೆಂಬಲಿಸುವ ಮತ್ತು ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ನೀಡಿದ ಪ್ರೇಕ್ಷಕರಿಗೆ, ಮಾಧ್ಯಮ ಮಿತ್ರರಿಗೆ ಧನ್ಯವಾದಗಳು. ನಿಮ್ಮ ಪ್ರತಿಯೊಂದು ಟೀಕೆಯನ್ನು ನಾನು ಗೌರವಿಸುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ಮೆಚ್ಚುಗೆ ಗಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us