ಚುನಾವಣೆ ಸೋತ ಬೆನ್ನಲ್ಲೇ ಕಮಲ್​ ಹಾಸನ್​ ಮೇಲೆ ಕೇಳಿಬಂತು ಆರೋಪ; ಕೋರ್ಟ್​ ಮೆಟ್ಟಿಲೇರಿದ ದೊಡ್ಡವರ ಕಿರಿಕ್​

Kamal Haasan: ‘ಇಂಡಿಯನ್​ 2’ ಚಿತ್ರದ ಕೆಲಸಗಳು ಪೂರ್ಣವಾಗದ ಹೊರತು ನಿರ್ದೇಶಕ ಶಂಕರ್​ ಬೇರೆ ಯಾವುದೇ ಸಿನಿಮಾವನ್ನೂ ಮಾಡದಂತೆ ನಿಷೇಧ ಹೇರಬೇಕು ಎಂದು ಲೈಕಾ ಪ್ರೊಡಕ್ಷನ್​ ಸಂಸ್ಥೆ ದೂರು ಸಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ಶಂಕರ್​ ಅವರು ತಮ್ಮ ವಾದ ಮಂಡಿಸಿದ್ದಾರೆ.

ಚುನಾವಣೆ ಸೋತ ಬೆನ್ನಲ್ಲೇ ಕಮಲ್​ ಹಾಸನ್​ ಮೇಲೆ ಕೇಳಿಬಂತು ಆರೋಪ; ಕೋರ್ಟ್​ ಮೆಟ್ಟಿಲೇರಿದ ದೊಡ್ಡವರ ಕಿರಿಕ್​
ಕಮಲ್ ಹಾಸನ್​

Updated on: May 13, 2021 | 9:10 AM

ಸಿನಿಮಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಬಳಿಕ ನಟ ಕಮಲ್​ ಹಾಸನ್​ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದರು. ಆದರೆ ಅವರಿಗೆ ಚುನಾವಣೆಯಲ್ಲಿ ಸೋಲು ಉಂಟಾಯಿತು. ಆ ಬೇಸರದ ಬೆನ್ನಲ್ಲೇ ಅವರ ಮೇಲೆ ಸ್ಟಾರ್​ ನಿರ್ದೇಶಕ ಶಂಕರ್​ ಅವರು ಒಂದು ಆರೋಪ ಹೊರಿಸಿದ್ದಾರೆ. ಬಹುನಿರೀಕ್ಷಿತ ‘ಇಂಡಿಯನ್​ 2’ ಸಿನಿಮಾ ತಂಡದಲ್ಲಿ ವಿವಾದ ಭುಗಿಲೆದ್ದುದ್ದು, ಅದೀಗ ಕೋರ್ಟ್​ ಮೆಟ್ಟಿಲೇರಿದೆ. ಈ ಚಿತ್ರದ ನಿರ್ದೇಶಕ ಶಂಕರ್​ ಮತ್ತು ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ನಡುವೆ ದೊಡ್ಡ ಜಟಾಪಟಿ ಶುರುವಾಗಿದೆ.

2018ರಲ್ಲಿಯೇ ಇಂಡಿಯನ್ 2 ಸಿನಿಮಾದ ಶೂಟಿಂಗ್​ ಆರಂಭ ಆಗಿತ್ತು. ಆದರೆ ಪದೇಪದೇ ವಿಳಂಬವಾದ ಕಾರಣ ಇನ್ನೂ ಚಿತ್ರದ ಕೆಲಸಗಳು ಪೂರ್ಣಗೊಂಡಿಲ್ಲ. ಅಂದಾಜು 250 ಕೋಟಿ ರೂ. ಬಜೆಟ್​ನ ಈ ಸಿನಿಮಾದಲ್ಲಿ ಕಮಲ್​ ಹಾಸನ್​ ಅವರು ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲೇ ಬಿಡುಗಡೆಯಾದ ಪೋಸ್ಟರ್​ಗಳು ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದ್ದವು. ಸದ್ಯಕ್ಕಂತೂ ಚಿತ್ರದ ಶೂಟಿಂಗ್​ ಮುಗಿಯುವಂತೆ ಕಾಣುತ್ತಿಲ್ಲ. ಸಿನಿಮಾ ತಡವಾಗುತ್ತಿರುವ ಕಾರಣಕ್ಕೆ ನಿರ್ಮಾಪಕರು ಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಚಿತ್ರದ ಕೆಲಸಗಳು ಪೂರ್ಣವಾಗದ ಹೊರತು ಶಂಕರ್​ ಬೇರೆ ಯಾವುದೇ ಸಿನಿಮಾವನ್ನೂ ನಿರ್ದೇಶನ ಮಾಡದಂತೆ ನಿಷೇಧ ಹೇರಬೇಕು ಎಂದು ಲೈಕಾ ಪ್ರೊಡಕ್ಷನ್​ ಸಂಸ್ಥೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

ಇದಕ್ಕೆ ಪ್ರತಿಯಾಗಿ ಶಂಕರ್​ ಅವರು ತಮ್ಮ ವಾದ ಮಂಡಿಸಿದ್ದಾರೆ. ಈ ಚಿತ್ರ ತಡವಾಗಲು ಲೈಕಾ ಪ್ರೊಡಕ್ಷನ್​ ಕಾರಣ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ. ಮೊದಲು ಒಪ್ಪಿಕೊಂಡು ಬಜೆಟ್​ಅನ್ನು ನಿರ್ಮಾಪಕರು ನೀಡಲಿಲ್ಲ. ಸೆಟ್​ನಲ್ಲಿ ಕ್ರೇನ್​ ಅನಾಹುತ ಸಂಭವಿಸಿತು. ಇಷ್ಟೇ ಅಲ್ಲದೆ, ಶೂಟಿಂಗ್​ ತಡವಾಗುವಲ್ಲಿ ಕಮಲ್​ ಹಾಸನ್​ ಕೂಡ ಕಾರಣರು ಎಂದು ಶಂಕರ್​ ಆರೋಪಿಸಿದ್ದಾರೆ.

ಹಾಗೋ ಹೀಗೋ ಚಿತ್ರೀಕರಣ ಆರಂಭಿಸಿದ ಬಳಿಕ ಕಮಲ್​ ಹಾಸನ್​ ಅವರಿಗೆ ಮೇಕಪ್​ ಅಲರ್ಜಿ ಶುರು ಆಯಿತು. ಆ ಕಾರಣದಿಂದಲೂ ಚಿತ್ರೀಕರಣ ತಡವಾಯಿತು. ಒಟ್ಟಾರೆ ಈ ಎಲ್ಲ ಬೆಳವಣಿಗೆಗಳಿಗೆ ತಮ್ಮ ಮೂರು ವರ್ಷ ವ್ಯರ್ಥ ಆಗಿದೆ ಎಂದು ಶಂಕರ್​ ಹೇಳಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲ್​ ಹಾಸನ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೂ.4ರಂದು ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದ್ದು, ಇಂಡಿಯನ್​ 2 ಚಿತ್ರದ ಭವಿಷ್ಯ ಏನಾಗಲಿದೆ ಎಂಬುದನ್ನು ತಿಳಿದುಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ:

ಕಮಲ್​ ಹಾಸನ್​ ಚುನಾವಣಾ ಸೋಲಿನ ನಂತರ ನನ್ನ ತಂದೆ ಫೈಟರ್​ ಎಂದ ಶ್ರುತಿ ಹಾಸನ್​

ಕೆಲಸ ಮಾಡುವುದು ಬಿಟ್ಟು ಬೇರೆ ಯಾವುದೇ ಆಯ್ಕೆ ಉಳಿದಿಲ್ಲ; ಆರ್ಥಿಕ ಸಂಕಷ್ಟದಲ್ಲಿ ಶ್ರುತಿ ಹಾಸನ್

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us