ಕೆಲಸ ಮಾಡುವುದು ಬಿಟ್ಟು ಬೇರೆ ಯಾವುದೇ ಆಯ್ಕೆ ಉಳಿದಿಲ್ಲ; ಆರ್ಥಿಕ ಸಂಕಷ್ಟದಲ್ಲಿ ಶ್ರುತಿ ಹಾಸನ್
ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜರ್ನಲಿಸ್ಟ್ ಆಗಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ.
ಸ್ಟಾರ್ ನಟರ ಮಕ್ಕಳಾದರೆ ಕೆರಿಯರ್ ರೂಪಿಸಿಕೊಳ್ಳೋದು ಸುಲಭವಾಗುತ್ತದೆ ಎಂಬುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ವಿಚಾರ. ಆದರೆ, ಇದರ ಜತೆಗೆ ಕೆಲ ಸಣ್ಣ ಸಣ್ಣ ವಿಚಾರಕ್ಕೂ ಟ್ರೋಲ್ ಆಗಬೇಕಾಗುತ್ತದೆ. ತಂದೆಯ ಹಣವನ್ನು ಇವರು ಉಡಾಯಿಸುತ್ತಿದ್ದಾರೆ ಎನ್ನುವ ಮಾತನ್ನು ಕೇಳಬೇಕಾಗುತ್ತದೆ. ಶ್ರುತಿ ಹಾಸನ್ ಕೂಡ ಇದಕ್ಕೆ ಹೊರತಾಗಿಲ್ಲ. ಕಮಲ್ ಹಾಸನ್ ಮಗಳಾಗಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಈಗ ಅವರು ಮಾಧ್ಯಮದ ಜತೆ ಮುಚ್ಚುಮರೆ ಇಲ್ಲದೆ ಎಲ್ಲವನ್ನೂ ಹೇಳಿಕೊಂಡಿದ್ದಾರೆ.
‘ನನಗೆ ಹಣಕಾಸಿನ ತೊಂದರೆ ಇದೆ. ಹೀಗಾಗಿ, ಶೂಟಿಂಗ್ನಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಶೂಟಿಂಗ್ ಮಾಡುವಾಗ ಮಾಸ್ಕ್ ಇಲ್ಲದೆ ಕಾಣಿಸಿಕೊಳ್ಳುವುದಕ್ಕೆ ತುಂಬಾನೇ ಭಯವಾಗುತ್ತದೆ. ಆದಾಗ್ಯೂ ಒಪ್ಪಿಕೊಂಡ ಪ್ರಾಜೆಕ್ಟ್ಗಳನ್ನು ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಖರ್ಚುಗಳನ್ನು ನಿಭಾಯಿಸಲು ಕೆಲಸ ಮಾಡುವುದೊಂದೇ ಆಯ್ಕೆ,’ ಎಂದಿದ್ದಾರೆ ಶ್ರುತಿ.
‘ಶ್ರುತಿ ಹಾಸನ್ ಸ್ವಾವಲಂಬಿ ಎಂಬುದನ್ನು ಒತ್ತಿ ಹೇಳಿದ್ದಾರೆ. ನಾನು ಇಂಡಿಪೆಂಡೆಂಟ್ ಮಹಿಳೆ. ನನ್ನ ತಂದೆ ನಟ-ರಾಜಕಾರಣಿ ಹೌದು. ಆದರೆ, ನನ್ನ ಬಿಲ್ಗಳನ್ನು ನಾನೇ ಪೇ ಮಾಡುತ್ತೇನೆ. ನನ್ನ ತಂದೆ ತಾಯಿ ಬಳಿ ಯಾವಾಗಲೂ ಆರ್ಥಿಕ ಸಹಾಯ ಕೇಳಿಲ್ಲ’ ಎಂದಿದ್ದಾರೆ ಅವರು.
‘ತಪ್ಪಿರಲಿ, ಸರಿ ಇರಲಿ ನಾನೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. 2020ರ ಆರಂಭದಲ್ಲಿ ನಾನು ಮನೆ ಒಂದನ್ನು ಖರೀದಿಸಿದ್ದೇನೆ. ನಂತರ ಕೊರೊನಾ ಆರಂಭವಾಯಿತು. ಸಿನಿಮಾ ಕೆಲಸಗಳು ಬಂದ್ ಆದವು. ಈಗ ಎಲ್ಲವೂ ಸರಿಯಾಗುತ್ತಿದೆ ಎನ್ನುವಾಗಲೇ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದೆ. ಹೀಗಾಗಿ, ಹಣಕಾಸಿನ ತೊಂದರೆ ಇದೆ’ ಎಂದು ಅವರು ಹೇಳಿದ್ದಾರೆ.
‘ಹಣಕಾಸಿನ ತೊಂದರೆ ಇದೆ ಎಂದಾಗೆಲ್ಲ ಒಂದಷ್ಟು ವಿಚಾರಗಳು ತಲೆಗೆ ಬರುತ್ತವೆ. ನಾನು ಕೇವಲ ಇಎಂಐ ಕಟ್ಟಲು ಒದ್ದಾಡುತ್ತಿದ್ದೇನೆ ಅಷ್ಟೆ. ಅನೇಕರು ಆಹಾರಕ್ಕಾಗಿ, ಇನ್ನೂ ಕೆಲವರು ಔಷಧ ತೆಗೆದುಕೊಳ್ಳಲ ಹಣ ಇಲ್ಲದೆ ಒದ್ದಾಡುತ್ತಿದ್ದಾರೆ. ಅವರನ್ನು ನೆನಪಿಸಿಕೊಂಡಾಗ ನನ್ನ ಲೈಫ್ ಅದ್ಭುತವಾಗಿದೆ ಎನಿಸುತ್ತದೆ’ ಎಂಬುದು ಶ್ರುತಿ ಮಾತು.
ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜರ್ನಲಿಸ್ಟ್ ಆಗಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ಚುನಾವಣಾ ಸೋಲಿನ ನಂತರ ನನ್ನ ತಂದೆ ಫೈಟರ್ ಎಂದ ಶ್ರುತಿ ಹಾಸನ್