ಕಮಲ್ ಹಾಸನ್ ಚುನಾವಣಾ ಸೋಲಿನ ನಂತರ ನನ್ನ ತಂದೆ ಫೈಟರ್ ಎಂದ ಶ್ರುತಿ ಹಾಸನ್
ನಟನೆಯಲ್ಲಿ ಯಶಸ್ಸು ಕಂಡಿದ್ದ ಕಮಲ್ ಹಾಸನ್ ರಾಜಕೀಯದಲ್ಲೂ ಯಶಸ್ಸು ಕಾಣುವ ಕನಸು ಹೊತ್ತಿದ್ದರು. ಪಕ್ಷ ಸ್ಥಾಪಿಸಿ ನಿರಂತರವಾಗಿ ಪ್ರಚಾರ ಕಾರ್ಯದಲ್ಲೂ ತೊಡಗಿದ್ದರು.
ಪಂಚರಾಜ್ಯಗಳ ಚುನಾವಣ ಫಲಿತಾಂಶ ಬಂದಿದೆ. ನೆರೆಯ ತಮಿಳುನಾಡಿನಲ್ಲಿ ಡಿಎಂಕೆ 133 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಎಐಎಡಿಎಂಕೆ 66 ಕ್ಷೇತ್ರಗಳಲ್ಲಿ ಗೆದ್ದಿದೆ. ಆದರೆ, ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯಂ ಪಕ್ಷ ಖಾತೆ ತೆರೆಯಲು ವಿಫಲವಾಗಿದೆ. ಪಕ್ಷದ ಸ್ಥಾಪಕ ಕಮಲ್ ಹಾಸನ್ ಕೂಡ ಸೋಲು ಕಂಡಿದ್ದಾರೆ. ಈ ಸೋಲಿನ ಬೆನ್ನಲ್ಲೇ ನನ್ನ ತಂದೆ ಫೈಟರ್ ಎಂದ ಶ್ರುತಿ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಟನೆಯಲ್ಲಿ ಯಶಸ್ಸು ಕಂಡಿದ್ದ ಕಮಲ್ ಹಾಸನ್ ರಾಜಕೀಯದಲ್ಲೂ ಯಶಸ್ಸು ಕಾಣುವ ಕನಸು ಹೊತ್ತಿದ್ದರು. ಪಕ್ಷ ಸ್ಥಾಪಿಸಿ ನಿರಂತರವಾಗಿ ಪ್ರಚಾರ ಕಾರ್ಯದಲ್ಲೂ ತೊಡಗಿದ್ದರು. ತಮಿಳುನಾಡಿನ ಬಹುತೇಕ ಕ್ಷೇತ್ರಗಳಲ್ಲಿ ಮಕ್ಕಳ್ ನೀಧಿ ಮಯಂ ಸ್ಪರ್ಧೆ ಮಾಡಿತ್ತು. ಆದರೆ, ಯಾವ ಕ್ಷೇತ್ರದಲ್ಲೂ ಕಮಲ್ ಹಾಸನ್ ಪಕ್ಷ ಗೆಲುವು ಸಾಧಿಸಿಲ್ಲ. ಅಚ್ಚರಿ ಎಂದರೆ ಅನೇಕ ಕ್ಷೇತ್ರಗಳಲ್ಲಿ ಮಕ್ಕಳ್ ನೀಧಿ ಮಯಂ ಪಕ್ಷದವರು ಠೇವಣಿ ಹಿಂಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಬಿಜೆಪಿ ವನತಿ ಶ್ರೀನಿವಾಸನ್ ವಿರುದ್ಧ 1,500 ಮತಗಳ ಅಂತರದಿಂದ ಕಮಲ್ ಹಾಸನ್ ಸೋತಿದ್ದಾರೆ. ಕಮಲ್ ಟಾರ್ಚ್ ಹಿಡಿದಿರುವ ಫೋಟೋ ಒಂದನ್ನು ಹಾಕಿರುವ ಶ್ರುತಿ ಹಾಸನ್, ಅಪ್ಪಾ ನಿಮ್ಮ ಬಗ್ಗೆ ಯಾವಾಗಲೂ ಹೆಮ್ಮೆ ಎಂದು ಬರೆದುಕೊಂಡಿರುವ ಅವರು ಫೈಟರ್ ಎನ್ನುವ ಹ್ಯಾಶ್ಟ್ಯಾಗ್ ಹಾಕಿದ್ದಾರೆ.
ಚುನಾವಣೆಯಲ್ಲಿ ಸೋತ ನಂತರದಲ್ಲಿ ಕಮಲ್ ಹಾಸನ್ ಮತ್ತೆ ಚಿತ್ರದ ಕೆಲಸಗಳಿಗೆ ಮರಳುವ ನಿರೀಕ್ಷೆ ಇದೆ. ಇಂಡಿಯನ್ 2 ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಶೀಘ್ರವೇ ಆರಂಭವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Karnataka By-Elections ಫಲಿತಾಂಶ ವಿಶ್ಲೇಷಣೆ: ಉಪಚುನಾವಣೆಯ ಗೆಲುವು ಬಿಜೆಪಿ ಕಣ್ಣು ತೆರೆಸಲು ಸಾಧ್ಯವೇ?