‘ದೃಶ್ಯಂ 3’ ಟೀಸರ್: ಜಾರ್ಜ್ ಕುಟ್ಟಿಗೆ ಮೊದಲ ಬಾರಿ ಭಯವಾಗಿದೆ

Drishyam 3 teaser: ಭಾರಿ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಹೊಂದಿರುವ ‘ದೃಶ್ಯಂ’ ಸರಣಿಯ ಕೊನೆಯ ಭಾಗ ಎನ್ನಲಾಗುತ್ತಿರುವ ‘ದೃಶ್ಯಂ 3’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಮೊದಲೆರಡು ಸಿನಿಮಾಗಳಿಗಿಂತಲೂ ಬಹಳ ಭಿನ್ನವಾಗಿ ಈ ಸಿನಿಮಾ ಇರಲಿದೆ ಎಂಬುದನ್ನು ಟೀಸರ್ ಸಾರಿ ಹೇಳುತ್ತಿದೆ. ಟೀಸರ್ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದೆ.

‘ದೃಶ್ಯಂ 3’ ಟೀಸರ್: ಜಾರ್ಜ್ ಕುಟ್ಟಿಗೆ ಮೊದಲ ಬಾರಿ ಭಯವಾಗಿದೆ
Drishyam 3

Updated on: Apr 29, 2026 | 7:27 PM

ಭಾರತೀಯ ಚಿತ್ರರಂಗದ (Movie Industry) ಅತ್ಯಂತ ಯಶಸ್ವಿ ಕ್ರೈಮ್ ಥ್ರಿಲ್ಲರ್ ಸರಣಿಗಳಲ್ಲಿ ಒಂದಾದ ‘ದೃಶ್ಯಂ’ನ ಮೂರನೇ ಭಾಗದ ಟೀಸರ್ ಇಂದು (ಏಪ್ರಿಲ್ 29) ಬಿಡುಗಡೆಯಾಗಿದೆ. ಭಾರಿ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಹೊಂದಿರುವ ‘ದೃಶ್ಯಂ’ ಸರಣಿಯ ಕೊನೆಯ ಭಾಗ ಇದಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸಿನಿಮಾದ ಬಗ್ಗೆ ಭಾರಿ ಕುತೂಹಲ ಇದೆ. ಇದೀಗ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಮೊದಲೆರಡು ಸಿನಿಮಾಗಳಿಗಿಂತಲೂ ಬಹಳ ಭಿನ್ನವಾಗಿ ಈ ಸಿನಿಮಾ ಇರಲಿದೆ ಎಂಬುದನ್ನು ಟೀಸರ್ ಸಾರಿ ಹೇಳುತ್ತಿದೆ.

ಸುಮಾರು 1 ನಿಮಿಷ 50 ಸೆಕೆಂಡ್‌ಗಳ ಈ ಟೀಸರ್ ನಲ್ಲಿ ಈ ಹಿಂದಿನ ಎರಡು ಭಾಗಗಳ ಕ್ಲೈಮ್ಯಾಕ್ಸ್ ದೃಶ್ಯಗಳ ಮೆಲುಕು ಹಾಕುವುದರೊಂದಿಗೆ ಪ್ರಾರಂಭವಾಗುತ್ತದೆ. ತಮ್ಮ ಕುಟುಂಬ ಹೇಗಿತ್ತು, ಆ ಕುಟುಂಬದ ನೆಮ್ಮದಿಯನ್ನು ಹಾಳು ಮಾಡಲು ಒಬ್ಬಾತ ಬಂದಿದ್ದು, ಆತನನ್ನು ಬಾರದ ಲೋಕಕ್ಕೆ ಕಳಿಸಿದ್ದು, ಬಳಿಕ ಎದುರಾದ ಸರಣಿ ಸಂಕಟಗಳು, ಎರಡನೇ ಭಾಗದ ಕ್ಲೈಮ್ಯಾಕ್ಸ್​​ನಲ್ಲಿ ಜಾರ್ಜ್ ಕುಟ್ಟಿ, ಯುವಕನ ಕುಟುಂಬದ ಮೇಲೆ ಕಣ್ಣಿಟ್ಟಿರುವುದು ಎಲ್ಲವನ್ನೂ ತೋರಿಸಲಾಗಿದೆ. ಇದೆಲ್ಲವನ್ನೂ ತೋರಿಸಿದ ಬಳಿಕ ಜಾರ್ಜ್ ಕುಟ್ಟಿ ಚರ್ಚ್ ಒಂದರಲ್ಲಿ ಏಸು ಕ್ರಿಸ್ತನ ಮೂರ್ತಿಯೆದುರು ಮಂಡಿಯೂರಿ ಕೂತಿರುವ ದೃಶ್ಯ ತೋರಿಸಲಾಗಿದೆ. ಎಲ್ಲವನ್ನೂ ‘ಕನ್​ಫೆಸ್’ ಮಾಡಿಕೊಳ್ಳುವ ರೀತಿಯಲ್ಲಿ ಜಾರ್ಜ್ ಕುಟ್ಟಿ ಕೂತಿದ್ದಾನೆ.

ಏಸುವಿನ ಎದುರು ಪ್ರಾರ್ಥಿಸುತ್ತಾ, ‘ನಾನೊಬ್ಬ ಸಾಮಾನ್ಯ ಮನುಷ್ಯ, ನನ್ನ ಪ್ರಪಂಚ ಬಹಳ ಚಿಕ್ಕದು, ನನ್ನ ಕುಟುಂಬವನ್ನು ರಕ್ಷಿಸುವ ಈ ಪಯಣದಲ್ಲಿ ನಾನು ಎಷ್ಟೋಂದು ಜನರಿಗೆ ತೊಂದರೆ ಕೊಟ್ಟಿದ್ದೇನೆ’ ಎಂದು ಹೇಳುತ್ತಾ “ನಾನು ಭಯವಾಗುತ್ತಿದೆ, ಈ ಬಾರಿ ನಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎನಿಸುತ್ತಿದೆ’ ಎನ್ನುತ್ತಾನೆ. ಜಾರ್ಜ್ ಕುಟ್ಟಿಯ ಈ ಮಾತುಗಳು ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿವೆ.

ಇದನ್ನೂ ಓದಿ:ಜಪಾನ್​ಗೆ ಲಗ್ಗೆ ಇಡಲು ರೆಡಿಯಾದ ‘ಧುರಂಧರ್’ ಸಿನಿಮಾ; ಹೆಚ್ಚಲಿದೆ ಗಳಿಕೆ

ಈ ಹಿಂದಿನ ಎರಡು ‘ದೃಶ್ಯಂ’ ಸಿನಿಮಾ ನಿರ್ದೇಶಿಸಿರುವ ಜೀತು ಜೋಸೆಫ್ ಅವರೇ ‘ದೃಶ್ಯಂ 3’ ಸಿನಿಮಾವನ್ನೂ ನಿರ್ದೇಶಿಸಿದ್ದಾರೆ. ಈ ಹಿಂದೆ ಸಿನಿಮಾ ನಿರ್ಮಿಸಿದ್ದ ಮೋಹನ್​​ಲಾಲ್ ಅವರ ಆಪ್ತ ಆಂಟೊನಿ ಪೆರಂಬೂರು ಅವರೇ ಈ ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ. ಸಿನಿಮಾ ಮೇ 21 ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಅದೇ ದಿನ ಮೋಹನ್‌ಲಾಲ್ ಅವರ 66ನೇ ಹುಟ್ಟುಹಬ್ಬ ಸಹ ಆಗಿದೆ. ಸಿನಿಮಾನಲ್ಲಿ ಮೋಹನ್​​ಲಾಲ್ ಜೊತೆಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಸಿದ್ಧಿಕ್ ಇನ್ನೂ ಹಲವರು ನಟಿಸಿದ್ದಾರೆ.

ಮೊದಲ ‘ದೃಶ್ಯಂ’ ಸಿನಿಮಾ ಕನ್ನಡದಲ್ಲಿ ರೀಮೇಕ್ ಆಗಿ ಸೂಪರ್ ಹಿಟ್ ಆಗಿತ್ತು. ಆದರೆ ‘ದೃಶ್ಯಂ 2’ ಸಿನಿಮಾ ರೀಮೇಕ್ ಮಾಡಲಿಲ್ಲ. ಆದರೆ ಹಿಂದಿಯಲ್ಲಿ ಎರಡೂ ಭಾಗಗಳನ್ನು ರೀಮೇಕ್ ಮಾಡಲಾಗಿದ್ದು, ಮೂರನೇ ಭಾಗದ ರೀಮೇಕ್ ಹಕ್ಕುಗಳನ್ನು ಸಹ ಮುಂಗಡವಾಗಿ ಪಡೆದುಕೊಳ್ಳಲಾಗಿದೆ. ‘ದೃಶ್ಯಂ 3’ ಸಿನಿಮಾದ ಬಗ್ಗೆ ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂ ಸಹ ಹೇಳಿಕೆ ಬಿಡುಗಡೆ ಮಾಡಿ, ಸಿನಿಮಾದ ಡಿಜಿಟಲ್ ಹಕ್ಕುಗಳು ತಮ್ಮ ಬಳಿಯೇ ಇದ್ದು, ಯಾರೂ ಸಹ ಕಾನೂನು ಬಾಹಿರವಾಗಿ ಖರೀದಿ ಮಾಡುವುದು ಬೇಡ ಎಂದಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us