ಪ್ಯಾನ್ ವರ್ಲ್ಡ್ ರಿಲೀಸ್​ಗೆ ಸಜ್ಜಾಗುತ್ತಿರುವ ‘ದೃಶ್ಯಂ 3’, ವಿತರಣೆ ಹಕ್ಕು ಸೋಲ್ಡ್ ಔಟ್

Drishyam 3 movie: ಮೋಹನ್​​ಲಾಲ್ ನಟನೆಯ ‘ದೃಶ್ಯಂ’ ಸಿನಿಮಾಕ್ಕೆ ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ‘ದೃಶ್ಯಂ’ ಸರಣಿಯ ಎರಡು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿವೆ. ಇದೀಗ ‘ದೃಶ್ಯಂ 3’ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಅಷ್ಟರಲ್ಲೇ ಸಿನಿಮಾದ ವಿದೇಶಿ ಬಿಡುಗಡೆ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

ಪ್ಯಾನ್ ವರ್ಲ್ಡ್ ರಿಲೀಸ್​ಗೆ ಸಜ್ಜಾಗುತ್ತಿರುವ ‘ದೃಶ್ಯಂ 3’, ವಿತರಣೆ ಹಕ್ಕು ಸೋಲ್ಡ್ ಔಟ್
Drishyam 3

Updated on: Dec 06, 2025 | 9:03 PM

ಭಾರತದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ‘ದೃಶ್ಯಂ’ (Drishyam) ಸಹ ಒಂದಾಗಿ ಇತಿಹಾಸ ಸೇರಿಕೊಂಡಿದೆ. ಒಂದು ಸಣ್ಣ ಹಳ್ಳಿಯ, ಒಬ್ಬ ಸಾಮಾನ್ಯ ವ್ಯಕ್ತಿ ಜಾರ್ಜ್ ಕುಟ್ಟಿಯ ಸಣ್ಣ ಕುಟುಂಬದ ಕತೆ ವಿಶ್ವದಾದ್ಯಂತ ಪ್ರೇಕ್ಷಕರನ್ನು ಸೆಳೆದಿದೆ. 2013 ರಲ್ಲಿ ಬಿಡುಗಡೆ ಆದ ‘ದೃಶ್ಯಂ’ ಮಲಯಾಳಂ ಸಿನಿಮಾ ಅತಿ ಹೆಚ್ಚು ಬಾರಿ ರೀಮೇಕ್ ಆದ ಭಾರತದ ಸಿನಿಮಾ ಎನಿಸಿಕೊಂಡಿದೆ. ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳನ್ನು ಸೆಳೆದಿರುವ ಸಿನಿಮಾ ಸರಣಿ ಇದಾಗಿದೆ. ಇದೀಗ ಸಿನಿಮಾದ ಮೂರನೇ ಭಾಗ ನಿರ್ಮಾಣ ಆಗುತ್ತಿದ್ದು, ಜಾರ್ಜ್ ಕುಟ್ಟಿಯ ಕತೆ ಈ ಬಾರಿ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳನ್ನು ಅದ್ಧೂರಿಯಾಗಿ ತಲುಪಲಿದೆ.

‘ದೃಶ್ಯಂ 3’ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿ ಕೆಲ ಸಮಯವಷ್ಟೆ ಆಗಿದ್ದು, ಅದಾಗಲೇ ಸಿನಿಮಾದ ವಿದೇಶಿ ಬಿಡುಗಡೆ ಹಕ್ಕುಗಳಿಗೆ ಬೇಡಿಕೆ ಮೂಡಿ, ಈಗಾಗಲೇ ಭಾರಿ ಮೊತ್ತಕ್ಕೆ ಮಾರಾಟವೂ ಸಹ ಆಗಿಬಿಟ್ಟಿದೆ. ಭಾರತದ ಹಲವಾರು ದೊಡ್ಡ ಸಿನಿಮಾಗಳನ್ನು ಈಗಾಗಲೇ ವಿಶ್ವಮಟ್ಟದಲ್ಲಿ ಬಿಡುಗಡೆ ಮಾಡಿ ಅನುಭವ ಇರುವ ಪನೊರಮಾ ಸ್ಟುಡಿಯೋಸ್ ಮತ್ತು ಪೆನ್ ಸ್ಟುಡಿಯೋಸ್​​ನವರು ‘ದೃಶ್ಯಂ 3’ ಸಿನಿಮಾದ ವಿದೇಶಿ ಬಿಡುಗಡೆ ಹಕ್ಕು ಮತ್ತು ಡಿಜಿಟಲ್ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ಮೋಹನ್​ಲಾಲ್ ನಟನೆಯ ‘ವೃಷಭ’ ಚಿತ್ರ ಕ್ರಿಸ್​​ಮಸ್ ಹಬ್ಬಕ್ಕೆ ಬಿಡುಗಡೆ; ‘ಮಾರ್ಕ್’ ಜೊತೆ ಪೈಪೋಟಿ

ಸಿನಿಮಾದ ಚಿತ್ರೀಕರಣ ನಡೆಯುವಾಗಲೇ ಈ ಡೀಲ್ ನಡೆದಿದ್ದು, ಸುಮಾರು 80 ಕೋಟಿ ರೂಪಾಯಿಗೆ ವಿದೇಶಿ ಬಿಡುಗಡೆ ಹಕ್ಕು ಮತ್ತು ವಿದೇಶಿ ಡಿಜಿಟಲ್ ಹಕ್ಕನ್ನು ಪೆನ್ ಮತ್ತು ಮನೋರಮಾ ಖರೀದಿ ಮಾಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಪನೊರಮಾ ಸ್ಟುಡಿಯೋಸ್​​ನ ಮಾಲೀಕ ಕುಮಾರ್, ‘ದೃಶ್ಯಂ, ನನ್ನ ಪಾಲಿಗೆ ಸಿನಿಮಾಕ್ಕಿಂತಲೂ ದೊಡ್ಡದು. ಭಾರತೀಯ ಸಿನಿಮಾವನ್ನು ಬದಲಿಸಿದ ಸಿನಿಮಾಗಳಲ್ಲಿ ಒಂದು. ನಮ್ಮ ವಿಶ್ವ ವಿತರಣೆ ಶಕ್ತಿಯ ಮೂಲಕ ಈ ಸಿನಿಮಾವನ್ನು, ಹಿಂದಿನ ಇನ್ಯಾವುದೇ ಸಿನಿಮಾಕ್ಕಿಂತಲೂ ದೊಡ್ಡದಾಗಿ ವಿದೇಶಗಳಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದಿದ್ದಾರೆ.

ಇನ್ನು ಮೋಹನ್​​ಲಾಲ್ ಸಹ ಈ ಬಗ್ಗೆ ಮಾತನಾಡಿದ್ದು, ‘ಜಾರ್ಜ್ ಕುಟ್ಟಿ ನನ್ನ ಜೀವನದ ಭಾಗ ಆಗಿಬಿಟ್ಟಿದ್ದಾನೆ. ಜಾರ್ಜ್ ಕುಟ್ಟಿಯ ಪಾತ್ರದಲ್ಲಿ ನಟಿಸುವುದು ಹಳೆಯ ಗೆಳೆಯನನ್ನು ಭೇಟಿ ಮಾಡಿದ ಅನುಭವ ಆಗುತ್ತದೆ. ಆದರೆ ಹೊಸ ಗುಟ್ಟುಗಳೊಟ್ಟಿಗೆ’ ಎಂದಿದ್ದಾರೆ ಅವರು. ಇನ್ನು ನಿರ್ದೇಶಕ ಜೀತು ಜೋಸೆಫ್ ಮಾತನಾಡಿ, ‘ದೃಶ್ಯಂ ಅಂಥಹಾ ಕತೆಗಳು ಅಂತ್ಯಗೊಳ್ಳುವುದಿಲ್ಲ ಬದಲಿಗೆ ವಿಸ್ತರಣೆಗೊಳ್ಳುತ್ತವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us