ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನವ್ಯಾ ನಾಯರ್ (Navya Nair) ವಿರುದ್ಧ ಇಡಿ (ಜಾರಿ ನಿರ್ದೇಶನಾಲಯ) ದೂರು ದಾಖಲಿಸಿದೆ. ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಅಧಿಕಾರಿಯೊಬ್ಬರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ನಟಿ ನವ್ಯಾ ನಾಯರ್, ಆ ಅಧಿಕಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು, ಹಣವನ್ನು ಪಡೆದಿದ್ದಾರೆ ಎನ್ನಲಾಗಿದೆ.
ಐಆರ್ಎಸ್ ಅಧಿಕಾರಿ ಸಚಿನ್ ಸಾವಂತ್ ಅಕ್ರಮ ಹಣ ವರ್ಗಾವಣೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದಾರೆ. ಈ ಅಧಿಕಾರಿಯಿಂದ ನಟಿ ನವ್ಯಾ ನಾಯರ್ ಚಿನ್ನದ ಆಭರಣಗಳು ಸೇರಿದಂತೆ ಹಲವು ದುಬಾರಿ ಉಡುಗೊರೆಗಳು, ನಗದು ಹಣವನ್ನು ಪಡೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಇದೇ ಕಾರಣಕ್ಕೆ ನಟಿ ನವ್ಯಾ ವಿರುದ್ಧವೂ ದೂರು ದಾಖಲಿಸಲಾಗಿದೆ.
ಇಡಿ ದಾಖಲಿಸಿರುವ ಎಫ್ಐಆರ್ ಪ್ರಕಾರ, ಐಆರ್ಎಸ್ ಅಧಿಕಾರಿ ಸಚಿನ್ ಸಾವಂತ್ ಗಳಿಕೆಗಿಂತಲೂ ಹಲವು ಪಟ್ಟು ಅಧಿಕ ಆಸ್ತಿಯನ್ನು ಹೊಂದಿದ್ದಾರೆ. ಈ ಹಿಂದೆ ಕಸ್ಟಮ್ಸ್ ಸೇರಿದಂತೆ ಇನ್ನು ಕೆಲವು ಉನ್ನತ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, 2011 ರಲ್ಲಿಯೇ ಇವರ ಹಾಗೂ ಇವರ ಕುಟುಂಬದ ಆಸ್ತಿ 2.40 ಕೋಟಿಗೂ ಹೆಚ್ಚಿತ್ತು. ಅವರ ಸಂಪಾದನೆಗಿಂತಲೂ ಸುಮಾರು 50 ಪಟ್ಟು ಹೆಚ್ಚು ಆಸ್ತಿಯನ್ನು ಆಗಲೇ ಹೊಂದಿದ್ದರು. ಇದೇ ಪ್ರಕರಣದಲ್ಲಿ ಜೂನ್ ತಿಂಗಳಲ್ಲಿ ಇವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ:Drishya 2 Movie Review: ಕೊನೇ ದೃಶ್ಯದವರೆಗೂ ಕೊಲೆ ಕೌತುಕ; ಈ ಬಾರಿ ಕ್ಲೈಮ್ಯಾಕ್ಸ್ ಇನ್ನಷ್ಟು ರೋಚಕ
ಸಚಿನ್ ವಿಚಾರಣೆ ವೇಳೆ ಅವರ ವಾಟ್ಸ್ಆಪ್ ಚಾಟ್ ನಿಂದಾಗಿ ನಟಿ ನವ್ಯಾ ನಾಯರ್ ಜೊತೆ ಆತ್ಮೀಯರಾಗಿದ್ದ ವಿಷಯ ಬೆಳಕಿಗೆ ಬಂದಿದೆ. ಕೊಚ್ಚಿಯಲ್ಲಿ ನವ್ಯಾ ಹಾಗೂ ಸಚಿನ್ ಒಂದೇ ಅಪಾರ್ಟ್ಮೆಂಟ್ನ ನಿವಾಸಿಗಳಾಗಿದ್ದು ನೆರೆ ಹೊರೆಯವರಾಗಿದ್ದರು. ನವ್ಯಾ, ಕೆಲವು ಬಾರಿ ಸಚಿನ್ರನ್ನು ಗುರುವಾಯೂರು ದೇವಾಲಯಕ್ಕೂ ಕರೆದೊಯ್ದಿದ್ದರು. ಇಡಿ ಆರೋಪದಂತೆ, ಸಚಿನ್, ಚಿನ್ನಾಭರಣೆ ಸೇರಿದಂತೆ ಕೆಲವು ದುಬಾರಿ ವಸ್ತುಗಳನ್ನು ನವ್ಯಾಗೆ ಉಡುಗೊರೆಯಾಗಿ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ನವ್ಯಾ ನಾಯರ್, ”ಇಬ್ಬರೂ ನೆರೆ-ಹೊರೆಯವರಾಗಿದ್ದರಿಂದ ಗೆಳೆತನವಿತ್ತು, ಅದೇ ಕಾರಣಕ್ಕೆ ಕೆಲವು ಬಾರಿ ಅವರನ್ನು ದೇವಾಲಯಕ್ಕೆ ಕರೆದೊಯ್ದಿದ್ದೆ. ನನ್ನ ಮಗನ ಹುಟ್ಟುಹಬ್ಬಕ್ಕೆ ಅವರು ಆಭರಣ ಉಡುಗೊರೆ ನೀಡಿದ್ದರು. ಗೆಳೆತನಕ್ಕೆ ಮೀರಿದ ಸಂಬಂಧ ನಮ್ಮದಲ್ಲ. ಅವರ ಹಣಕಾಸಿನ ವ್ಯವಹಾರಗಳಿಗೂ ನನಗೂ ಸಂಬಂಧವಿಲ್ಲ” ಎಂದಿದ್ದಾರೆ.
ನವ್ಯಾ ನಾಯರ್, ಕನ್ನಡದ ‘ಗಜ’, ‘ದೃಶ್ಯ’, ‘ದೃಶ್ಯ 2’, ‘ನಮ್ಮ ಯಜಮಾನ್ರು’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಹಲವಾರು ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕೆಲವು ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ಸಹ ನಾಯಕಿಯಾಗಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Thu, 31 August 23