ಚಿತ್ರಮಂದಿರಕ್ಕೆ ಬೆಂಕಿ ಇಟ್ಟ ಪ್ರಭಾಸ್ ಫ್ಯಾನ್ಸ್; ‘ದಿ ರಾಜಾ ಸಾಬ್’ ನೋಡುವಾಗ ಘಟನೆ

ಟಾಲಿವುಡ್ ನಟ ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರ ಎಂಟ್ರಿ ದೃಶ್ಯವನ್ನು ಫ್ಯಾನ್ಸ್ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳ ಸಂಭ್ರಮದಿಂದ ಚಿತ್ರಮಂದಿರದ ಒಳಗೆ ಬೆಂಕಿ ಹೊತ್ತಿಕೊಳ್ಳುವಂತಾಗಿದೆ.

ಚಿತ್ರಮಂದಿರಕ್ಕೆ ಬೆಂಕಿ ಇಟ್ಟ ಪ್ರಭಾಸ್ ಫ್ಯಾನ್ಸ್; ‘ದಿ ರಾಜಾ ಸಾಬ್’ ನೋಡುವಾಗ ಘಟನೆ
Prabhas

Updated on: Jan 11, 2026 | 7:26 AM

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಜನವರಿ 9ರಂದು ಬಿಡುಗಡೆ ಆಯಿತು. ಪ್ರಭಾಸ್ (Prabhas) ಅವರ ಅಭಿಮಾನಿಗಳು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಎಲ್ಲ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಆದರೆ ಕೆಲವರು ಸಂಭ್ರಮದ ವೇಳೆ ಮೈಮರೆತಿದ್ದಾರೆ. ‘ದಿ ರಾಜಾ ಸಾಬ್’ (The Raja Saab) ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಲಾಗಿದೆ. ಆರತಿ ಬೆಳಗಲಾಗಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್, ದೊಡ್ಡ ಅನಾಹುತ ಆಗುವುದು ತಪ್ಪಿದೆ.

ಇದು ಪ್ರಭಾಸ್ ನಟಿಸಿರುವ ಮೊದಲ ಹಾರರ್ ಸಿನಿಮಾ. ಆ ಕಾರಣದಿಂದ ಈ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಮಾರುತಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಅವರು ಬೇರೆ ಬೇರೆ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿ ಸೀನ್ ನೋಡಿ ಖುಷಿಯಾದ ಪ್ರೇಕ್ಷಕರು ಚಿತ್ರಮಂದಿರದ ಒಳಗೆ ಪಟಾಕಿ ಹೊಡೆದಿದ್ದಾರೆ.

ಅಂದಹಾಗೆ, ಈ ಘಟನೆ ನಡೆದಿರುವುದು ಆಂಧ್ರದಲ್ಲೋ ಅಥವಾ ತೆಲಂಗಾಣದಲ್ಲೋ ಅಲ್ಲ. ಬದಲಿಗೆ, ಒಡಿಸ್ಸಾದಲ್ಲಿ! ಪ್ರಭಾಸ್ ಅವರು ಫ್ಯಾನ್ ಇಂಡಿಯಾ ಸ್ಟಾರ್. ಅವರಿಗೆ ಎಲ್ಲ ಕಡೆಗಳಲ್ಲಿ ಅಭಿಮಾನಿಗಳು ಇದ್ದಾರೆ. ಒಡಿಸ್ಸಾದ ರಾಯಗಡದಲ್ಲಿ ಇರುವ ‘ಅಶೋಕ ಟಾಕೀಸ್’ನಲ್ಲಿ ಅಭಿಮಾನಿಗಳು ಆರತಿ ಬೆಳಗಿದ್ದಾರೆ. ಪಟಾಕಿ ಹಚ್ಚಿದ್ದಾರೆ. ಇದರಿಂದ ಚಿತ್ರಮಂದಿರದ ಪರದೆ ಬಳಿ ಬೆಂಕಿ ಹೊತ್ತಿಕೊಂಡಿದೆ.

ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ದೊಡ್ಡ ಅನಾಹುತಿ ತಪ್ಪಿದೆ ಎಂದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅದೇ ರೀತಿ ಬೇರೆ ಚಿತ್ರಮಂದಿರಗಳಲ್ಲಿ ಪ್ರಭಾಸ್ ಅವರ ಅಭಿಮಾನಿಗಳು ಮೊಸಳೆಯ ಪ್ರತಿಕೃತಿಯನ್ನು ಹಿಡಿದು ಬಂದಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರು ಮೊಸಳೆ ಜೊತೆ ಫೈಟ್ ಮಾಡುವ ದೃಶ್ಯವಿದೆ. ಅದರಿಂದ ಪ್ರೇರೇಪಿತರಾದ ಅಭಿಮಾನಿಗಳು ಚಿತ್ರಮಂದಿರಕ್ಕೆ ಮೊಸಳೆ ಹೊತ್ತು ತಂದಿದ್ದಾರೆ.

ಇದನ್ನೂ ಓದಿ: ‘ದಿ ರಾಜಾ ಸಾಬ್’ ಪ್ರೀಮಿಯರ್ ಶೋ: ಚಿತ್ರಮಂದಿರದಲ್ಲಿ ಪ್ರಭಾಸ್ ಫ್ಯಾನ್ಸ್ ಗಲಾಟೆ

‘ದಿ ರಾಜಾ ಸಾಬ್’ ಸಿನಿಮಾ ವಿಶ್ರ ಪ್ರತಿಕ್ರಿಯೆ ಪಡೆದಿದೆ. ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಕಲೆಕ್ಷನ್ ಆಗುತ್ತಿದೆ. ಪ್ರಭಾಸ್, ಸಂಜಯ್ ದತ್, ನಿಧಿ ಅಗರ್​ವಾಲ್, ಬೋಮನ್ ಇರಾನಿ, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.