ಕೊರೊನಾ ಏರಿಕೆ ಮಧ್ಯೆಯೇ ಅಕ್ಷಯ್​ ಕುಮಾರ್​ ಮಾಡಿದ್ರು ಅತಿ ದೊಡ್ಡ ಸಹಾಯ; ಗೌತಮ್​ ಗಂಭೀರ್​ ಮೆಚ್ಚುಗೆ

| Updated By: ಮದನ್​ ಕುಮಾರ್​

Updated on: Apr 25, 2021 | 4:09 PM

ಗೌತಮ್​ ಗಂಭೀರ್​ ಅವರ ಫೌಂಡೇಷನ್​ಗೆ ನಟ ಅಕ್ಷಯ್​ ಕುಮಾರ್​ ಒಂದು ಕೋಟಿ ರೂಪಾಯಿ ನೀಡಿದ್ದಾರೆ. ಈ ಹಣವನ್ನು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವಂತೆ ಅಕ್ಷಯ್​ ಕೋರಿದ್ದಾರೆ.

ಕೊರೊನಾ ಏರಿಕೆ ಮಧ್ಯೆಯೇ ಅಕ್ಷಯ್​ ಕುಮಾರ್​ ಮಾಡಿದ್ರು ಅತಿ ದೊಡ್ಡ ಸಹಾಯ; ಗೌತಮ್​ ಗಂಭೀರ್​ ಮೆಚ್ಚುಗೆ
ಅಕ್ಷಯ್​ ಕುಮಾರ್-ಗೌತಮ್ ಗಂಭೀರ್​
Follow us on

ದೇಶದಲ್ಲಿ ಕೊರೊನಾ ಮಿತಿಮೀರಿ ಏರಿಕೆ ಕಾಣುತ್ತಿದೆ. ಇದರ ನಿಯಂತ್ರಣಕ್ಕೆ ಸರ್ಕಾರಗಳು ಸಾಕಷ್ಟು ಪ್ರಯತ್ನ ಪಡುತ್ತಿವೆ. ಇನ್ನು ಅನೇಕ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್​ಗಳ ಕೊರತೆ ಎದ್ದು ಕಾಣುತ್ತಿದೆ. ಈ ಮಧ್ಯೆ ನಟ ಅಕ್ಷಯ್​ ಕುಮಾರ್​ ಬಹುದೊಡ್ಡ ಸಹಾಯ ಮಾಡಿದ್ದಾರೆ. ಇದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್​ ಗಂಭೀರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟ ಅಕ್ಷಯ್​ ಕುಮಾರ್​ ಗೌತಮ್​ ಗಂಭೀರ್​ ಅವರ ಫೌಂಡೇಷನ್​ಗೆ ಒಂದು ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ. ಈ ಹಣವನ್ನು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವಂತೆ ಅಕ್ಷಯ್​ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಗೌತಮ್​ ಗಂಭೀರ್​, ಪ್ರತಿ ಸಹಾಯವೂ ಭರವಸೆ ಮೂಡಿಸುತ್ತದೆ. ಆಹಾರ, ಔಷಧ ಹಾಗೂ ಆಮ್ಲಜನಕ ಪೂರೈಕೆಗೆ ಜಿಜಿಎಫ್​ಗೆ ಒಂದು ಕೋಟಿ ರೂ. ದಾನ ಮಾಡಿದ್ದಕ್ಕೆ ಧನ್ಯವಾದಗಳು. ದೇವರು ಒಳ್ಳೆಯದು ಮಾಡಲಿ ಎಂದಿದ್ದಾರೆ.

ಇದಕ್ಕೆ ಉತ್ತರಿಸಿರುವ ಅಕ್ಷಯ್​ ಕುಮಾರ್​, ಇದು ತುಂಬಾನೇ ಕಷ್ಟದ ಸಮಯ. ನಾನು ಸಹಾಯ ಮಾಡುತ್ತಿರುವುದಕ್ಕೆ ಖುಷಿ ಇದೆ. ಈ ಸಂಕಷ್ಟ ಆದಷ್ಟು ಬೇಗ ಕೊನೆಯಾಗಲಿ ಎಂದು ಆಶಿಸೋಣ ಎಂದಿದ್ದಾರೆ.

ಇತ್ತೀಚೆಗೆ ನಟ ಅಕ್ಷಯ್​ ಕುಮಾರ್ ಅವರಿಗೆ ಕೊವಿಡ್​ ಪಾಸಿಟಿವ್​ ಆಗಿರುವ ವಿಚಾರ ಖಚಿತವಾಗಿತ್ತು. ಇದನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಜತೆಗೆ ಅವರು ಕ್ವಾರಂಟೈನ್​ ಆಗಿದ್ದರು. ನಂತರ ಅಕ್ಷಯ್​ ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ದಿನಗಳ ನಂತರ ಅವರು ಕೊರಾನಾದಿಂದ ಅವರು ಗುಣಮುಖರಾಗಿದ್ದರು.

ರಾಷ್ಟ್ರ ರಾಜಧಾನಿಯ ಹಲವು ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕ ಅಭಾವದಿಂದ ಕಂಗೆಟ್ಟಿವೆ. ಈಗಾಗಲೇ ಎರಡು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟಿದ್ದಾರೆ. ಈ ಮಧ್ಯೆ ಕೆಲವು ಆಸ್ಪತ್ರೆಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ತಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡುವಂತೆ ಮನವಿ ಮಾಡಿದ್ದಾರೆ. ಅದರ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ಆಮ್ಲಜನಕ ಪೂರೈಕೆಗೆ ಅಡ್ಡಿಯಾಗುತ್ತಿರುವವರನ್ನು ನೇಣಿಗೇರಿಸುತ್ತೇವೆ ಎಂದು ಖಡಕ್​ ವಾರ್ನಿಂಗ್ ಮಾಡಿದೆ. ಈಗ ಅಕ್ಷಯ್​ ಕೊಟ್ಟಿರುವ ಒಂದು ಕೋಟಿ ರೂಪಾಯಿ ಸಹಾಯದಿಂದ ದೆಹಲಿಯ ಒಂದಷ್ಟು ಜನರಿಗೆ ಸಹಾಯವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: IPL 2021: ರೋಹಿತ್, ವಿರಾಟ್, ಡಿವಿಲಿಯರ್ಸ್ ಆಟವನ್ನು ನೋಡಿ ಸಂಜು ಸ್ಯಾಮ್ಸನ್ ಕಲಿಯಬೇಕಿದ್ದು ಸಾಕಷ್ಟಿದೆ; ಗೌತಮ್ ಗಂಭೀರ್