
ಭಾರತೀಯ ಚಿತ್ರರಂಗದ ತಂತ್ರಜ್ಞರು ಮತ್ತು ಕಲಾವಿದರು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ತೆಲುಗಿನ ‘ಆರ್ಆರ್ಆರ್’ ಸಿನಿಮಾಗೆ ‘ಗೋಲ್ಡನ್ ಗ್ಲೋಬ್ 2023’ (Golden Globe Award 2023) ಪ್ರಶಸ್ತಿ ಬಂದಿರುವುದೇ ಈ ಮಾತಿಗೆ ಸಾಕ್ಷಿ. ಈ ಚಿತ್ರದ ‘ನಾಟು ನಾಟು..’ ಹಾಡಿಗೆ ಅತ್ಯುತ್ತಮ ಒರಿಜಿನಲ್ ಸಾಂಗ್ ವಿಭಾಗದಲ್ಲಿ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಬಂದಿದೆ. ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅಭಿನಂದನೆ ತಿಳಿಸಿದ್ದಾರೆ. ಟ್ವೀಟರ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಅವರ ಈ ಟ್ವೀಟ್ ವೈರಲ್ ಆಗಿದೆ. ದಕ್ಷಿಣ ಭಾರತದ ಚಿತ್ರರಂಗಕ್ಕೆ ಸಿಕ್ಕ ಈ ಗೌರವವನ್ನು ಸಿನಿಪ್ರಿಯರು ಸಂಭ್ರಮಿಸುತ್ತಿದ್ದಾರೆ.
‘ಇದೊಂದು ವಿಶೇಷವಾದ ಸಾಧನೆ. ಎಂಎಂ ಕೀರವಾಣಿ, ಪ್ರೇಮ್ ರಕ್ಷಿತ್, ಕಾಲ ಭೈರವ, ಚಂದ್ರಬೋಸ್, ರಾಹುಲ್ ಸಿಪ್ಲಿಗಂಜ್, ಎಸ್ಎಸ್ ರಾಜಮೌಳಿ, ಜೂನಿಯರ್ ಎನ್ಟಿಆರ್, ರಾಮ್ ಚರಣ್ ಮತ್ತು ಇಡೀ ಆರ್ಆರ್ಆರ್ ಸಿನಿಮಾ ತಂಡಕ್ಕೆ ಅಭಿನಂದನೆಗಳು. ಈ ಪ್ರತಿಷ್ಠಿತ ಪ್ರಶಸ್ತಿಯಿಂದಾಗಿ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಭಾವ ಮೂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
2022ರಲ್ಲಿ ಬಿಡುಗಡೆಯಾದ ‘ಆರ್ಆರ್ಆರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳ್ಬೆಬಿಸಿತು. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತು. ಈಗ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದೆ. ಆಸ್ಕರ್ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ.
ಇದನ್ನೂ ಓದಿ: Golden Globe Awards: ‘RRR’ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜತೆ ‘ಗೋಲ್ಡನ್ ಗ್ಲೋಬ್’ ಪಡೆದವರ ಪೂರ್ತಿ ಲಿಸ್ಟ್ ಇಲ್ಲಿದೆ
ಲಾಸ್ ಏಂಜಲಿಸ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಪ್ರತಿಷ್ಠಿತ ಟ್ರೋಫಿ ಪಡೆದಿದ್ದಾರೆ. ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಮುಂತಾದವರು ಈ ವೇಳೆ ಹಾಜರಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:26 pm, Wed, 11 January 23