
ಕೇಂದ್ರ ಸರ್ಕಾರ ಇಂದು (ಸೆಪ್ಟೆಂಬರ್ 04) ಜಿಎಸ್ಟಿ ದರ ಪರಿಷ್ಕರಣೆ ಮಾಡಿದೆ. ಹಲವು ಅವಶ್ಯಕ ವಸ್ತುಗಳ ಮೇಲಿನ ತೆರಿಗೆ ಇಳಿಸಲಾಗಿದೆ. ಐಶಾರಾಮಿ ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಸಿನಿಮಾ ಟಿಕೆಟ್ ದರ ಇಳಿಕೆ ಬಗ್ಗೆ ಹಲವು ಚಿತ್ರರಂಗಗಳಲ್ಲಿ ಚರ್ಚೆ ಜಾರಿಯಲ್ಲಿತ್ತು. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ನವರು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿ, ಮನೊರಂಜನಾ ತೆರಿಗೆ ಇಳಿಸುವಂತೆ ಮನವಿ ಮಾಡಿದ್ದರು. ಹಾಗಾಗಿ ಚಿತ್ರರಂಗಕ್ಕೆ ಇಂದಿನ ಸಭೆಯ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಇಂದಿನ ಸಭೆಯ ನಿರ್ಣಯ ಚಿತ್ರರಂಗಕ್ಕೆ ಅಲ್ಪ ಖುಷಿಯನ್ನಷ್ಟೆ ತಂದಿದೆ.
ಚಿತ್ರರಂಗದ ಮನವಿಯಂತೆ ಟಿಕೆಟ್ ದರದ ಮೇಲಿನ ಜಿಎಸ್ಟಿಯನ್ನು ಕಡಿತಗೊಳಿಸಲಾಗಿದೆ. ಆದರೆ ಎಲ್ಲ ಟಿಕೆಟ್ಗಳ ಮೇಲೂ ಅಲ್ಲ. ಈ ಹಿಂದೆ 100 ರೂಪಾಯಿಗಳಿಗಿಂತಲೂ ಕಡಿಮೆ ದರದ ಟಿಕೆಟ್ಗೆ 12% ಜಿಎಸ್ಟಿ ಹೇರಲಾಗುತ್ತಿತ್ತು. 100 ರೂಪಾಯಿಗಿಂತಲೂ ಹೆಚ್ಚಿನ ಟಿಕೆಟ್ ದರಕ್ಕೆ 18% ಟಿಕೆಟ್ ದರ ಹೇರಲಾಗುತ್ತಿತ್ತು. ಎರಡೂ ಟಿಕೆಟ್ ದರಗಳ ಮೇಲಿನ ಜಿಎಸ್ಟಿಯನ್ನು ತಲಾ 7% ಇಳಿಕೆ ಮಾಡುವಂತೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಸೇರಿದಂತೆ ಚಿತ್ರಮಂದಿರ ಹಾಗೂ ನಿರ್ಮಾಪಕ, ವಿತರಕರ ಮನವಿ ಆಗಿತ್ತು.
ಇಂದಿನ ಸಭೆಯಲ್ಲಿ ಟಿಕೆಟ್ ದರದ ಮೇಲಿನ ಜಿಎಸ್ಟಿ ಇಳಿಕೆ ಮಾಡಲಾಗಿದೆ. ಆದರೆ 100 ರೂಪಾಯಿಗೂ ಕಡಿಮೆ ದರದ ಟಿಕೆಟ್ಗಳ ಮೇಲಿನ ಜಿಎಸ್ಟಿಯನ್ನು ಮಾತ್ರವೇ ಕಡಿತಗೊಳಿಸಲಾಗಿದೆ. ಈ ಹಿಂದೆ 12% ಇದ್ದ ಜಿಎಸ್ಟಿಯನ್ನು ಇಳಿಕೆ ಮಾಡಿ 5% ಮಾಡಲಾಗಿದೆ. ಆದರೆ 100 ರೂಪಾಯಿಗಳಿಗೂ ಹೆಚ್ಚು ದರ ಇರುವ ಟಿಕೆಟ್ಗಳ ಮೇಲೆ ಈ ಹಿಂದೆ ಇದ್ದ 18% ಜಿಎಸ್ಟಿಯನ್ನು ಹಾಗೆಯೇ ಮುಂದುವರೆಸಲಾಗಿದೆ.
ಇದನ್ನೂ ಓದಿ:‘ಹರಿ ಹರ ವೀರ ಮಲ್ಲು’ ಸಿನಿಮಾ ಟಿಕೆಟ್ ದರ: ಯಾವ ರಾಜ್ಯದಲ್ಲಿ ಎಷ್ಟಿದೆ?
ಅಸಲಿಗೆ ಈಗ 100 ರೂಪಾಯಿಗೂ ಕಡಿಮೆ ದರದ ಟಿಕೆಟ್ಗಳು ಮಾರಾಟ ಆಗುವುದು ವಿರಳದಲ್ಲಿ ವಿರಳ. ತಮಿಳುನಾಡು, ತೆಲಂಗಾಣ, ಕೇರಳದ ಕೆಲವು ನಗರಗಳು, ಬಿಹಾರ, ಉತ್ತರ ಪ್ರದೇಶ ಇನ್ನೂ ಕೆಲವು ರಾಜ್ಯಗಳ ಸಣ್ಣ-ಪುಟ್ಟ ನಗರಗಳಲ್ಲಿ ಮಾತ್ರವೇ ಸಿನಿಮಾ ಟಿಕೆಟ್ ದರಗಳು 100 ರೂಪಾಯಿಗೂ ಕಡಿಮೆ ಇವೆ. ಕರ್ನಾಟಕದಲ್ಲಂತೂ ತಾಲ್ಲೂಕು, ಪಟ್ಟಣ ಪ್ರದೇಶಗಳ ಚಿತ್ರಮಂದಿರಗಳಲ್ಲಿಯೂ ಸಹ ಟಿಕೆಟ್ ದರ 100 ರೂಪಾಯಿಗೂ ಹೆಚ್ಚಿಗೆ ಇದೆ. ಹಾಗಾಗಿ ಕೇಂದ್ರ ಸರ್ಕಾರದ ಈ ನಿರ್ಣಯದಿಂದ ಹೆಚ್ಚಿನ ಸಿನಿಮಾ ಪ್ರೇಕ್ಷಕರಿಗೆ ಸಹಾಯ ಆಗುವುದಿಲ್ಲ ಎಂದೇ ಹೇಳಬೇಕಾಗುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ