‘ಹರಿ ಹರ ವೀರ ಮಲ್ಲು’ ಸಿನಿಮಾ ಟಿಕೆಟ್ ದರ: ಯಾವ ರಾಜ್ಯದಲ್ಲಿ ಎಷ್ಟಿದೆ?
Hari Hara Veera Mallu: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಜುಲೈ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಟಿಕೆಟ್ ಬೆಲೆಗಳನ್ನು ಹೆಚ್ಚಿಸಿಕೊಳ್ಳಲು ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳಿಂದ ವಿಶೇಷ ಅನುಮತಿಯನ್ನು ಚಿತ್ರತಂಡ ಪಡೆದುಕೊಂಡಿದೆ. ಮೊದಲ ಬಾರಿಗೆ ಹೆಚ್ಚಿನ ಟಿಕೆಟ್ ದರದೊಂದಿಗೆ ಪವನ್ ಕಲ್ಯಾಣ್ರ ಸಿನಿಮಾ ಬಿಡುಗಡೆ ಆಗುತ್ತಿದೆ. ಅಷ್ಟಕ್ಕೂ ಸಿನಿಮಾ ಟಿಕೆಟ್ ದರ ಎಷ್ಟಿರಲಿದೆ?

ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ ಸಿನಿಮಾ 2022 ರಲ್ಲಿ ಬಿಡುಗಡೆ ಆಗಿತ್ತು. ಆಗ ಆಂಧ್ರ ಪ್ರದೇಶದಲ್ಲಿ ಜಗನ್ ಸರ್ಕಾರ ಇತ್ತು. ಜಗನ್ ಸರ್ಕಾರ ಸಿನಿಮಾ ಟಿಕೆಟ್ ದರಗಳನ್ನು ಧಾರುಣವಾಗಿ ಇಳಿಸಿತ್ತು. ‘ಭೀಮ್ಲಾ ನಾಯಕ್’ ಸಿನಿಮಾ ಟಿಕೆಟ್ ಅನ್ನು 10-15 ರೂಪಾಯಿ ಮಾಡಲಾಗಿತ್ತು. ಇದನ್ನು ಪವನ್ ಕಲ್ಯಾಣ್ ವಿರೋಧಿಸಿದ್ದರು. ಆದರೆ ಈಗ ಅವರ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಸರ್ಕಾರದ ಅನುಮತಿಯೊಂದಿಗೆ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ. ಅಂದಹಾಗೆ ಯಾವ ರಾಜ್ಯದಲ್ಲಿ ‘ಹರಿ ಹರ ವೀರ ಮಲ್ಲು’ ಸಿನಿಮಾದ ಟಿಕೆಟ್ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ…
‘ಹರಿ ಹರ ವೀರ ಮಲ್ಲು’ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚಿಸಿಕೊಳ್ಳಲು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಅನುಮತಿ ನೀಡಿದ್ದು, ಮೊದಲ ಬಾರಿಗೆ ಪವನ್ ಕಲ್ಯಾಣ್ ಸಿನಿಮಾ ಒಂದು ಟಿಕೆಟ್ ದರ ಹೆಚ್ಚಿಸಿಕೊಂಡು ಬಿಡುಗಡೆ ಆಗುತ್ತಿದೆ. ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’ ಸಿನಿಮಾದ ಟಿಕೆಟ್ ಆಂಧ್ರ ಪ್ರದೇಶದಲ್ಲಿ ಕೇವಲ 10-15 ರೂಪಾಯಿಗೆ ಮಾರಾಟ ಆಗಿತ್ತು. ಆಗ ಪವನ್ ಇದನ್ನು ವಿರೋಧಿಸಿದ್ದರು. ಆದರೆ ಈಗ ಅವರದ್ದೇ ಸರ್ಕಾರ ಆಂಧ್ರದಲ್ಲಿದೆ, ಅವರು ರಾಜ್ಯದ ಉಪ ಮುಖ್ಯಮಂತ್ರಿ, ಹಾಗಾಗಿ ಅವರ ಸಿನಿಮಾಕ್ಕೆ ಸುಲಭವಾಗಿ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ದೊರೆತಿದೆ.
ಆಂಧ್ರ ಮಾತ್ರವಲ್ಲದೆ ತೆಲಂಗಾಣ ರಾಜ್ಯದಲ್ಲಿಯೂ ಸಹ ‘ಹರಿ ಹರ ವೀರ ಮಲ್ಲು’ ಸಿನಿಮಾದ ಟಿಕೆಟ್ ದರ ಹೆಚ್ಚಳ ಮಾಡಲು ಅನುಮತಿ ನೀಡಲಾಗಿದೆ. ಇದರ ಜೊತೆಗೆ ಎರಡೂ ರಾಜ್ಯಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲು ಅನುಮತಿ ಸಹ ನೀಡಲಾಗಿದೆ. ‘ಪುಷ್ಪ 2’ ಸಿನಿಮಾದ ಬಿಡುಗಡೆ ಬಳಿಕ ಇದೇ ಮೊದಲ ಬಾರಿಗೆ ಸಿನಿಮಾ ಒಂದಕ್ಕೆ ಪ್ರೀಮಿಯರ್ ಶೋಗೆ ತೆಲಂಗಾಣದಲ್ಲಿ ಅನುಮತಿ ನೀಡಲಾಗಿದೆ.
ಇದನ್ನೂ ಓದಿ:‘ಕಷ್ಟದ ದಿನಗಳಲ್ಲಿ ಸಿಕ್ಕ ಸ್ನೇಹಿತ ಅವನು’: ಗೆಳೆಯನ ನೆನೆದ ಪವನ್ ಕಲ್ಯಾಣ್
ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಬೆಲೆ 600 ರೂಪಾಯಿ ಇರಿಸಲಾಗಿದೆ. ಆಂಧ್ರ-ತೆಲಂಗಾಣ ಮಾತ್ರವೇ ಅಲ್ಲದೆ ಕರ್ನಾಟಕದಲ್ಲಿಯೂ ಸಹ ಪ್ರೀಮಿಯರ್ ಶೋ ಟಿಕೆಟ್ ಬೆಲೆ 600-500 ರೂಪಾಯಿಗಳಿವೆ. ಸಿನಿಮಾ ಬಿಡುಗಡೆ ಆದ ದಿನ ಅಂದರೆ ಜುಲೈ 24 ರಂದು ಸಾಮಾನ್ಯ ಟಿಕೆಟ್ ದರಗಳು ಆಂಧ್ರ ಮತ್ತು ತೆಲಂಗಾಣಗಳಲ್ಲಿ 250 ಇಂದ 300 ರೂಪಾಯಿಗಳು ಮಲ್ಟಿಪ್ಲೆಕ್ಸ್ಗಳಲ್ಲಿ ಮತ್ತು 150 ರೂಪಾಯಿಗಳು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ನಿಗದಿ ಪಡಿಸಲಾಗಿದೆ. ಆದರೆ ಈ ದರ ಸಿನಿಮಾ ಬಿಡುಗಡೆ ಆದ ಬಳಿಕ ಮೊದಲ ಮೂರು ದಿನಗಳಿಗೆ ಅಥವಾ ಭಾನುವಾರದ ವರೆಗೆ ಮಾತ್ರ ಇರಲಿದೆ. ಸೋಮವಾರದಿಂದ ಟಿಕೆಟ್ ದರಗಳು ಕಡಿಮೆ ಆಗಲಿವೆ.
ಬೆಂಗಳೂರಿನಲ್ಲಿ ಸಿನಿಮಾ ಟಿಕೆಟ್ ದರ ಸರಾಸರಿ 250 ಇದ್ದು, ಕೆಲವೆಡೆ 400 ರೂಪಾಯಿಗಳ ವರೆಗೆ ಇದೆ. ಕರ್ನಾಟಕ ರಾಜ್ಯ ಸರ್ಕಾರವು ಸಿನಿಮಾ ಟಿಕೆಟ್ ದರಗಳ ಮೇಲೆ ನಿಯಂತ್ರಣ ಹೇರಿ ಆದೇಶ ಹೊರಡಿಸಿದೆ. ಏಕರೂಪ ಟಿಕೆಟ್ ದರ ಇರಬೇಕೆಂದಿದೆ. ಆದರೆ ಆದೇಶ ಇನ್ನೂ ಅಧಿಕೃತವಾಗಿ ಜಾರಿ ಆಗಿಲ್ಲವಾದ್ದರಿಂದ ಸಿನಿಮಾ ಟಿಕೆಟ್ ದರಗಳ ನಿಗದಿ ಇನ್ನೂ ಚಿತ್ರಮಂದಿರ ಮಾಲೀಕರು, ವಿತರಕರು ಹಾಗೂ ಮಲ್ಟಿಪ್ಲೆಕ್ಸ್ಗಳ ಕೈಯಲ್ಲೇ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




