‘ಹನುಮಾನ್’ ಸಿನಿಮಾ ಒಟಿಟಿ ಬಿಡುಗಡೆ ತಡ, ಕಾರಣ ಕೊಟ್ಟ ನಿರ್ದೇಶಕ
Hanuman OTT: ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಹಿಟ್ ಆಗಿದ್ದ ‘ಹನುಮಾನ್’ ಸಿನಿಮಾದ ಒಟಿಟಿ ಬಿಡುಗಡೆ ತಡವಾಗುತ್ತಿದೆ. ಈ ಬಗ್ಗೆ ಸಿನಿಮಾದ ನಿರ್ದೇಶಕ ಟ್ವೀಟ್ ಮಾಡಿದ್ದಾರೆ.

ಪ್ಯಾನ್ ಇಂಡಿಯಾ (Pan India) ಲೆವೆಲ್ನಲ್ಲಿ ಹವಾ ಎಬ್ಬಿಸಿದ ಇತ್ತೀಚೆಗಿನ ಕೆಲ ಸಿನಿಮಾಗಳಲ್ಲಿ ‘ಹನುಮಾನ್’ ಸಹ ಒಂದು. ದೊಡ್ಡ ಸ್ಟಾರ್ ನಟ ಇಲ್ಲದೇ ಇದ್ದರೂ ಸಹ ಕತೆ, ಅದ್ಭುತ ವಿಎಫ್ಎಕ್ಸ್ ಹಾಗೂ ಅದ್ಧೂರಿ ಪ್ರಚಾರದಿಂದ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸೂಪರ್ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ ‘ಹನುಮಾನ್’ ಸಿನಿಮಾ. ಬಾಕ್ಸ್ ಆಫೀಸ್ನಲ್ಲಿ ಸುಮಾರು 400 ಕೋಟಿಗೂ ಹೆಚ್ಚು ಗಳಿಕೆ ಕಂಡ ಈ ಸಿನಿಮಾದ ಒಟಿಟಿ ಬಿಡುಗಡೆ ಮಾತ್ರ ಬಹಳ ತಡವಾಗುತ್ತಿದೆ. ಈಗಾಗಲೇ ಎರಡು ಬಾರಿ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಮುಂದೂಡಲಾಗಿದೆ. ‘ಹನುಮಾನ್’ ಸಿನಿಮಾದ ಒಟಿಟಿ ಬಿಡುಗಡೆ ತಡವಾಗುತ್ತಿರುವ ಬಗ್ಗೆ ನಿರ್ದೇಶಕ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಫೆಬ್ರವರಿ ತಿಂಗಳಲ್ಲಿಯೇ ‘ಹನುಮಾನ್’ ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗಿತ್ತು. ಆದರೆ ಅದು ಆಗಲಿಲ್ಲ. ಅದಾದ ಬಳಿಕ ಮಾರ್ಚ್ 2ಕ್ಕೆ ಸಿನಿಮಾ ಒಟಿಟಿಗೆ ಬರಲಿದೆ ಎಂದು ಘೋಷಿಸಲಾಯ್ತು. ಆದರೆ ಮಾರ್ಚ್ 2 ರಂದು ಸಹ ಸಿನಿಮಾ ಬಿಡುಗಡೆ ಆಗಲಿಲ್ಲ. ಈಗ ಮಾರ್ಚ್ 16ಕ್ಕೆ ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗಿತ್ತು. ಜಿಯೋ ಸಿನಿಮಾಸ್ ಹಾಗೂ ಜೀ 5 ಎರಡೂ ಒಟಿಟಿ ವೇದಿಕೆಗಳಲ್ಲಿ ಮಾರ್ಚ್ 16ರಂದೇ ‘ಹನುಮಾನ್’ ಬಿಡುಗಡೆ ಆಗಲಿದೆ ಎಂಬ ಜಾಹೀರಾತುಗಳು ಸಹ ಹರಿದಾಡಿದ್ದವು. ಆದರೆ ಅದು ಸಹ ಮುಂದೂಡಲಾಗಿದೆ. ಇದರ ನಡುವೆ ಸಿನಿಮಾದ ನಿರ್ದೇಶಕ ಟ್ವೀಟ್ ಮಾಡಿ ಪ್ರೇಕ್ಷಕರಲ್ಲಿ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ:ಒಟಿಟಿಯಲ್ಲಿ ‘ಹನುಮಾನ್’ ಸಿನಿಮಾ ನೋಡಲು ಕಾದಿದ್ದ ಪ್ರೇಕ್ಷಕರಿಗೆ ನಿರಾಸೆ
‘ಹನುಮಾನ್’ ಸಿನಿಮಾದ ಒಟಿಟಿ ಬಿಡುಗಡೆ ವಿಳಂಬವಾಗುತ್ತಿರುವುದು ಉದ್ದೇಶಪೂರ್ವಕವಲ್ಲ. ಸಿನಿಮಾವನ್ನು ನಿಮಗೆಲ್ಲರಿಗೂ ತೋರಿಸಲಿಕ್ಕಾಗಿ ನಾವು ಹಗಲು-ರಾತ್ರಿ ಶ್ರಮಪಟ್ಟು ಕೆಲಸ ಮಾಡುತ್ತಿದ್ದೇವೆ. ನಿಮಗೆ ಒಂದು ಅದ್ಭುತವಾದ ಸಿನಿಮಾ ವೀಕ್ಷಣೆ ಅನುಭವವನ್ನು ಕೊಡುವುದೇ ನಮ್ಮ ಧ್ಯೇಯ ಅದಕ್ಕಾಗಿಯೇ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ದಯವಿಟ್ಟು ನಮ್ಮ ಇಕ್ಕಟ್ಟನ್ನು ಅರ್ಥ ಮಾಡಿಕೊಳ್ಳಿ, ನಮಗೆ ನೀಡುತ್ತಿರುವ ನಿಮ್ಮ ಬೆಂಬಲವನ್ನು ಮುಂದುವರೆಸಿ’ ಎಂದು ‘ಹನುಮಾನ್’ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ ಟ್ವೀಟ್ ಮಾಡಿದ್ದಾರೆ.
‘ಹನುಮಾನ್’ ಸಿನಿಮಾದ ಸ್ಟ್ರೀಮಿಂಗ್ ಹಕ್ಕುಗಳು ಜೀ5 ಬಳಿ ಇವೆ. ಜೀ5ನಲ್ಲಿ ಸಿನಿಮಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಆವೃತ್ತಿ ಬಿಡುಗಡೆ ಆಗಲಿದೆ. ಸಿನಿಮಾದ ಹಿಂದಿ ಆವೃತ್ತಿ ಜಿಯೋ ಸಿನಿಮಾನಲ್ಲಿ ಬಿಡುಗಡೆ ಆಗಲಿದೆ. ಆದರೆ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಚಿತ್ರತಂಡ ಮಾಡುತ್ತಿರುವ ಕಾರಣ ಒಟಿಟಿ ಬಿಡುಗಡೆ ತಡವಾಗುತ್ತಿದೆ ಎನ್ನಲಾಗುತ್ತಿದೆ. ಮೊಬೈಲ್ನಲ್ಲಿ ವೀಕ್ಷಣೆಯ ಅನುಭವವನ್ನು ಉತ್ತಮಗೊಳಿಸಲು ಕೆಲವು ತಾಂತ್ರಿಕ ಕೆಲಸಗಳನ್ನು ಚಿತ್ರತಂಡ ಮಾಡುತ್ತಿದೆಯಾದ್ದು ಅದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತಿರುವ ಕಾರಣ ಸಿನಿಮಾ ಬಿಡುಗಡೆ ತಡವಾಗುತ್ತಿದೆ ಎನ್ನಲಾಗಿದೆ.
‘ಹನುಮಾನ್’ ಸಿನಿಮಾವು ಜನವರಿ 12ಕ್ಕೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದ ಜೊತೆಗೆ ಬಿಡುಗಡೆ ಆಗಿತ್ತು. ಸಂಕ್ರಾಂತಿಗೆ ಹಲವು ಸ್ಟಾರ್ ನಟರ ಸಿನಿಮಾಗಳ ಜೊತೆಗೆ ಬಿಡುಗಡೆ ಆದರೂ ಸಹ ‘ಹನುಮಾನ್’ ದೊಡ್ಡ ಹಿಟ್ ಆಯ್ತು. ವಿಶ್ವದಾದ್ಯಂತ ಸುಮಾರು 400 ಕೋಟಿಗೂ ಹೆಚ್ಚು ಹಣವನ್ನು ಈ ಸಿನಿಮಾ ಗಳಿಸಿತು. ‘ಹನುಮಾನ್’ ಸಿನಿಮಾದ ಮುಂದಿನ ಭಾಗವನ್ನು ಮಾಡುವುದಾಗಿ ನಿರ್ದೇಶಕ ಹಾಗೂ ನಟರು ಈಗಾಗಲೇ ಘೋಷಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Fri, 15 March 24