ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ನಿಮ್ಮ ಆಸಕ್ತಿಯ ವಿಷಯಕ್ಕೆ ಎಂದಿಗೂ ರಾಜಿಯಾಗಬೇಡಿ. ಅದು ನಿಮ್ಮ ಕನಸಿಗೆ ಆದರ್ಶವಾಗಿರುತ್ತದೆ. ಹೀಗೆ ಆತ್ಮವಿಶ್ವಾಸದಿಂದ ಮಾತು ಆರಂಭಿಸಿದ ಭಾರತ ಮೂಲದ ಹರ್ನಾಜ್ ಕೌರ್ ಸಂಧು ಇಂದು 2021ರ ವಿಶ್ವ ಸುಂದರಿಯಾಗಿ ಹರ್ನಾಜ್ ಸಂಧು ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಇಸ್ರೇಲ್ನ ಐಲಾಟ್ನಲ್ಲಿ 70ನೇ ವಿಶ್ವ ಸುಂದರಿ ಸ್ಪರ್ದೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಭಾರತವನ್ನು ಚಂಡೀಗಢದ ಮಾಡೆಲ್ ಹಾಗೂ ಹಲವು ಸಿನಿಮಾಗಳಲ್ಲಿ ನಟಿಯಾಗಿ ಅಭಿನಯಿಸಿರುವ ಹರ್ನಾಜ್ ಸಂಧು ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿ ಗೆದ್ದಿದ್ದಾರೆ. ಹರ್ನಾಜ್ ಅವರಿಗೆ 2020 ಮಾಜಿ ವಿಶ್ವ ಸುಂದರಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರು ಕಿರೀಟವನ್ನು ತೊಡಿಸಿದ್ದಾರೆ. ವಿವಿಧ ದೇಶಗಳಿಂದ ಆಗಮಿಸಿದ 79 ಮಂದಿ ಸ್ಪರ್ಧಿಗಳನ್ನು ಹಿಂದಿಕ್ಕಿ 21 ವರ್ಷದ ಹರ್ನಾಜ್ ಮಿಸ್ ಯುನಿವರ್ಸ್ ಆಗಿದ್ದಾರೆ. ಪ್ರಶಸ್ತಿ ಮುಡಿಗೇರಿಸಿಕೊಂಡ ಹರ್ನಾಜ್ ವೇದಿಕೆಯ ಮೇಲೆ ಹೆಜ್ಜೆ ಹಾಕಿ ಚಕ್ ದೇ ಪಟ್ಟೆ ಇಂಡಿಯಾ ಎಂದು ಕೂಗಿದ್ದಾರೆ.
ಹರ್ನಾಜ್ ಅವರಿಗೆ ಮೊದಲ ಮೂರು ಸುತ್ತಿನಲ್ಲಿ ಇಂದಿನ ಯುವ ಜನತೆ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಯಾವುದು? ಅದಕ್ಕೆ ನಿಮ್ಮ ಸಲಹೆಯೇನು ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಉತ್ತರಿಸಿದ ಹರ್ನಾಜ್ ಇಂದಿನ ಯುವ ಜನತೆ ಅವರ ಮೇಲಿನ ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಬೇರೆಯವರು ಏನೆಂದುಕೊಳ್ಳುತ್ತಾರೋ ಎನ್ನುವ ಭಯವನ್ನು ಎದುರಿಸುತ್ತಿದ್ದಾರೆ. ಬೇರೆಯವರ ಬಗ್ಗೆ ಯೋಚಿಸುವುದನ್ನು ಬಿಟ್ಟು ನಿಮ್ಮ ಆಸಕ್ತಿ ಕ್ಷೇತ್ರದೆಡೆಗೆ ಗಮನವಿರಲಿ. ನನ್ನ ಮೇಲೆ ನಾನಿಟ್ಟ ನಂಬಿಕೆ, ಆತ್ಮ ವಿಶ್ವಾಸ ಇಂದು ಈ ವೇದಿಕೆಗೆ ತಂದು ನಿಲ್ಲಿಸಿದೆ. ಪ್ರಪಂಚದಲ್ಲಿ ಹಲವಾರು ಘಟನೆಗಳು ನಡೆಯುತ್ತಿರುತ್ತವೆ. ಅದರ ಬಗ್ಗೆ ಚರ್ಚಿಸಿ ಎಂದು ಉತ್ತರಿಸಿದರು.
ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಜಾಗತಿಕ ತಾಪಮಾನ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಹರ್ನಾಜ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಇದು ತೀರ್ಪುಗಾರರನ್ನು ಪ್ರಭಾವಿಸಿತ್ತು. ಪರಿಸರ, ಭೂಮಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಪ್ರಕೃತಿ ಪ್ರೇಮಿಯಾಗಿರುವ ಹರ್ನಾಜ್ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆಯುತ್ತಿದ್ದಾರೆ. ಹರ್ನಾಜ್ ಸಂಧು ಮೂಲತಃ ಚಂಡೀಗಡದವರು. ಹರ್ನಾಜ್ ತಮ್ಮ ಶಾಲಾ ದಿನಗಳನ್ನು ಮತ್ತು ಕಾಲೇಜನ್ನು ಚಂಡೀಗಡದಲ್ಲಿಯೇ ಮುಗಿಸಿದರು. ಬಳಿಕ ಮಾಡೆಲಿಂಗ್ ಆರಂಭಿಸಿದ ಅವರು ಹಲವು ವರ್ಷಗಳ ಕಾಲ ಪ್ಯಾಷನ್ ಲೋಕದಲ್ಲಿ ಪಳಗಿದವರು. ಅಲ್ಲದೆ ಯಾರಾ ದಿಯಾನ್ ಪೂ ಬರಾನಾ ಮತ್ತು ಬಾಯಿ ಜಿ ಕುಟ್ಟಂಗೆ ಎನ್ನುವ ಸಿನಿಮಾಗಳಲ್ಲೂ ನಟಿಸಿದ್ದರು. ಪ್ರಿಯಾಂಕಾ ಚೋಪ್ರಾ ಅವರಿಂದ ಸ್ಪೂರ್ತಿ ಪಡೆದ ಹರ್ನಾಜ್ ಮಹಿಳಾ ಪರ ವಕೀಲೆಯೂ ಹೌದು. ಬಿಡುವಿನ ವೇಳೆಯಲ್ಲಿ ಯೋಗ, ಡ್ಯಾನ್ಸ್, ಅಡುಗೆ, ಚೆಸ್, ಕುದುರೆ ಸವಾರಿಗಳಲ್ಲಿ ತೊಡಗಿಸಿಕೊಳ್ಳುವ ಅವರು ತಮ್ಮ ಹದಿಹರೆಯದ ವಯಸ್ಸಿನಲ್ಲಿಯೇ ಪ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದರು. ಹರ್ನಾಜ್ ಅವರ ತಾಯಿ ಸ್ತ್ರೀರೋಗ ವೈದ್ಯೆ. ಹೀಗಾಗಿ ಮಹಿಳೆಯರ ಆರೋಗ್ಯ, ಶಿಕ್ಷಣ, ಸಬಲೀಕರಣಕ್ಕಾಗಿ ತಾಯಿಯೊಂದಿಗೆ ಹಲವು ಶಿಬಿರಗಳನ್ನು ಹರ್ನಾಜ್ ನಡೆಸಿದ್ದರು. ಹರ್ನಾಜ್ ಅವರ ತಾಯಿ, ತಂದೆ ಹಾಗೂ ಕುಟುಂಬದ ಬಗ್ಗೆ ಈವರೆಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಗೊಳಿಸಲಾಗಿಲ್ಲ.
ಸಿಖ್ ಮನೆತದ ಹರ್ನಾಜ್ ಅವರ ವಾರ್ಷಿಕ ಆದಾಯ ಒಂದು ಮಿಲಿಯನ್ ಡಾಲರ್ ಎಂದು ವರದಿಯೊಂದರಲ್ಲಿ ಹೇಳಲಾಗಿದೆ. ಹರ್ನಾಜ್ 2017ರಲ್ಲಿ ಮಿಸ್ ಚಂಡೀಗಡ ಹಾಗೂ 2018ರಲ್ಲಿ ಮಿಸ್ ಮಾಕ್ಸ್ ಸ್ಟಾರ್ ಆಫ್ ಇಂಡಿಯಾ ಪಟ್ಟವನ್ನು ಗೆದ್ದಿದ್ದರು. ನಂತರ 2019ರಲ್ಲಿ ಪಂಜಾಬ್ನ ಫೆಮಿನಾ ಮಿಸ್ ಇಂಡಿಯಾ ಪಟ್ಟ ಗೆದ್ದು ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಇದೀಗ 2021ರಲ್ಲಿ ಮಿಸ್ ಯುನಿವರ್ಸ್ ಆಗಿ ಗೆದ್ದು ಭಾರತಕ್ಕೆ ಹೊಸ ಗೆಲುವು ತಂದುಕೊಟ್ಟಿದ್ದಾರೆ.
ಇದನ್ನೂ ಓದಿ:
Miss Universe 2021: ಭುವನ ಸುಂದರಿಯಾಗಿ ಹೊರಹೊಮ್ಮಿದ ಭಾರತದ ಹರ್ನಾಜ್ ಸಂಧು
Published On - 11:24 am, Mon, 13 December 21