ನಟ ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ (Lokesh Kanagaraj) ಅವರು ‘ತಲೈವರ್ 171’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಸಿನಿಮಾ ಸೆಟ್ಟೇರೋದು ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಎನ್ನಲಾಗಿದೆ. ಈ ಸಿನಿಮಾಗೆ ಸದ್ಯ ತಯಾರಿಗಳು ಭರದಿಂದ ಸಾಗಿವೆ. ಇದರ ಜೊತೆಗೆ ಸಿನಿಮಾ ಬಗ್ಗೆ ಅನೇಕ ವದಂತಿಗಳು ಹುಟ್ಟಿಕೊಳ್ಳುತ್ತಿವೆ. ಈ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಮಮ್ಮೂಟಿ ಕೂಡ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಈ ಪ್ರಶ್ನೆಗೆ ಅವರ ಕಡೆಯಿಂದ ನೇರ ಉತ್ತರ ಸಿಕ್ಕಿದೆ.
ರಜನಿಕಾಂತ್ ಅವರು ‘ಜೈಲರ್’ ಸಿನಿಮಾ ಮೂಲಕ ಭರ್ಜರಿ ಗೆಲುವು ಕಂಡಿದ್ದಾರೆ. ಇನ್ನು, ಲೋಕೇಶ್ ಕನಗರಾಜ್ ಅವರು ‘ಲಿಯೋ’ ಚಿತ್ರದಿಂದ ಸೋಲು ಅನುಭವಿಸಿದ್ದಾರೆ. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದಿದೆ. ಅವರಿಗೆ ದೊಡ್ಡ ಗೆಲುವಿನ ಅವಶ್ಯಕತೆ ಇದೆ. ತಾತ್ಕಾಲಿಕವಾಗಿ ‘ತಲೈವರ್ 171’ ರಂದು ನಾಮಕರಣ ಮಾಡಿರುವ ಸಿನಿಮಾ ಬಗ್ಗೆ ಜನರಲ್ಲಿ ಹೆಚ್ಚಿನ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಮಮ್ಮೂಟಿ ನಟಿಸಲಿದ್ದಾರೆ ಎನ್ನಲಾಗಿತ್ತು.
‘ಕಾದಲ್ ದಿ ಕೋರ್’ ಸಿನಿಮಾ ಪ್ರಮೋಷ್ನಲ್ಲಿ ಮಮ್ಮೂಟಿ ಹಾಗೂ ಜ್ಯೋತಿಕಾ ಭಾಗಿ ಆಗಿದ್ದರು. ಈ ವೇಳೆ ಅವರಿಗೆ ರಜನಿಕಾಂತ್ 171ನೇ ಸಿನಿಮಾ ಬಗ್ಗೆ ಪ್ರಶ್ನೆ ಎದುರಾಗಿದೆ. ‘ಈ ಸುದ್ದಿ ನಿಜವಲ್ಲ’ ಎಂದು ಅವರು ಹೇಳಿದ್ದಾರೆ. ‘ನೀವು ಲೋಕೇಶ್ ಕನಗರಾಜ್ ಅವರ ಸಿನಿಮ್ಯಾಟಿಕ್ ಯೂನಿವರ್ಸ್ನ ಭಾಗವಾಗುತ್ತೀರಾ’ ಎಂದು ಪ್ರಶ್ನೆ ಮಾಡಲಾಗಿದೆ. ‘ನನಗೆ ಮಲಯಾಳಂ ಚಿತ್ರರಂಗ ಸಾಕು. ನನಗೆ ಅವರ ಪರಿಚಯ ಇಲ್ಲ. ಅವರು ಕರೆ ಮಾಡಲಿ ಆ ಬಳಿಕ ನೋಡೋಣ’ ಎಂದಿದ್ದಾರೆ ಮಮ್ಮೂಟಿ. ಈ ಮೂಲಕ ಎಲ್ಲಾ ವದಂತಿಗಳಿಗೆ ಅವರು ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ‘ಈ ಸಲ ಕಪ್ ನಮ್ದೇ’ ಎಂದ ರಜನಿಕಾಂತ್; ವರ್ಲ್ಡ್ ಕಪ್ ಫೈನಲ್ ಬಗ್ಗೆ ತಲೈವಾ ಭವಿಷ್ಯವಾಣಿ
ರಜನಿಕಾಂತ್ ಅವರ ಈ ಚಿತ್ರಕ್ಕೆ ಯಾವ ಶೀರ್ಷಿಕೆ ಇಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ಸದ್ಯಕ್ಕಂತೂ ಯಾವುದೇ ಮಾಹಿತಿ ಸಿಗೋದು ಅನುಮಾನ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Wed, 22 November 23