80ಕ್ಕೂ ಅಧಿಕ ಅತ್ಯಾಚಾರ ಆರೋಪ ಇರುವ ನಿರ್ಮಾಪಕನಿಗೆ ಈಗ ಮೈತುಂಬ ಕಾಯಿಲೆ

|

Updated on: Oct 22, 2024 | 7:32 PM

ಬ್ಲಡ್ ಕ್ಯಾನ್ಸರ್​, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದಲ್ಲಿ ನೀರು, ಮಧುಮೇಹ, ಅಧಿಕ ರಕ್ತದೊತ್ತಡ, ಬೆನ್ನು ನೋವು ಸೇರಿದಂತೆ ಹಲವು ಕಾಯಿಲೆಗಳು ಹಾರ್ವಿ ವೈನ್​ಸ್ಟೀನ್​ಗೆ ಅಂಟಿಕೊಂಡಿವೆ. 80ಕ್ಕೂ ಹೆಚ್ಚು ಮಹಿಳೆಯರು ಈತನ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಜೈಲಿನಲ್ಲಿ ಇರುವ ಹಾರ್ವಿ ವೈನ್​ಸ್ಟೀನ್​ಗೆ ಹತ್ತಾರು ಕಾಯಿಲೆಗಳು ಶುರುವಾಗಿವೆ.

80ಕ್ಕೂ ಅಧಿಕ ಅತ್ಯಾಚಾರ ಆರೋಪ ಇರುವ ನಿರ್ಮಾಪಕನಿಗೆ ಈಗ ಮೈತುಂಬ ಕಾಯಿಲೆ
ಹಾರ್ವಿ ವೈನ್​ಸ್ಟೀನ್​
Follow us on

ಹಾಲಿವುಡ್​ನ ಕುಖ್ಯಾತ ನಿರ್ಮಾಪಕ ಹಾರ್ವಿ ವೈನ್​ಸ್ಟೀನ್ ಮೇಲೆ ಇರುವ ಆರೋಪಗಳು ಎಂದೆರಡಲ್ಲ. ಅನೇಕ ಮಹಿಳೆಯರು ಆತನ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಮೀಟೂ ಆಂದೋಲನ ಶುರುವಾಗಲು ಕಾರಣನಾದ ಹಾರ್ವಿ ವೈನ್​ಸ್ಟೀನ್​ ಈಗ ಜೈಲಿನಲ್ಲಿ ಇದ್ದಾನೆ. ಹಲವು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈಗ ಆತನಿಗೆ ಅನೇಕ ಕಾಯಿಲೆಗಳು ಬಂದಿವೆ. ಇತ್ತೀಚೆಗೆ ಕ್ಯಾನ್ಸರ್ ಕೂಡ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ. ಜೈಲಿನಲ್ಲೇ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹಾರ್ವಿ ವೈನ್​ಸ್ಟೀನ್​ಗೆ ಈಗ 72 ವರ್ಷ ವಯಸ್ಸು. ಅನೇಕ ಗಮನಾರ್ಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಈತ ಲೈಂಗಿಕ ದೌರ್ಜನ್ಯದ ಕಾರಣದಿಂದ ಅಪಖ್ಯಾತಿಗೆ ಒಳಗಾಗಿದ್ದಾನೆ. ಹಲವು ಪ್ರಕರಣಗಳಲ್ಲಿ ತನಿಖೆ ಮತ್ತು ವಿಚಾರಣೆ ನಡೆಯುತ್ತಿದ್ದು, ಆತನಿಗೆ ಅನೇಕ ರೋಗಗಳು ಕಾಡುತ್ತಿವೆ. ಸದ್ಯಕ್ಕೆ ಬ್ಲಡ್ ಕ್ಯಾನ್ಸರ್​ನಿಂದ ಆತ ಬಳಲುತ್ತಿದ್ದು, ನ್ಯೂಯಾರ್ಕ್​ ಜೈಲಿನ ಒಳಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅನಾರೋಗ್ಯದ ಕಾರಣದಿಂದ ಹಾರ್ವಿ ವೈನ್​ಸ್ಟೀನ್ ಸುದ್ದಿ ಆಗಿರುವುದು ಇದೇ ಮೊದಲೇನೂ ಅಲ್ಲ. ಈ ಮೊದಲು ಆತನಿಗೆ ಕೊವಿಡ್-19 ಸೋಕು ತಗುಲಿತ್ತು. ಇದಲ್ಲದೇ, ಡಯಾಬಿಟಿಸ್​, ಅಧಿಕ ರಕ್ತದೊತ್ತಡ, ಬೆನ್ನು ನೋವು ಕಾಣಿಸಿಕೊಂಡಿದೆ. ಅದೂ ಸಾಲದೆಂಬಂತೆ, ಹೃದಯ ಮತ್ತು ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಹೀಗೆ ಹಾರ್ವಿ ವೈನ್​ಸ್ಟೀನ್​ಗೆ ಮೈತುಂಬ ಕಾಯಿಲೆಗಳು ಅಂಟಿಕೊಂಡಿವೆ.

ಇದನ್ನೂ ಓದಿ: ಅತ್ಯಾಚಾರ ಆರೋಪಿ ಹಾರ್ವಿ ವೈನ್​ಸ್ಟೀನ್​ಗೆ ವಿಧಿಸಿದ್ದ ಶಿಕ್ಷೆ ರದ್ದು; ಮಿಟೂ ಅಭಿಯಾನಕ್ಕೆ ಹಿನ್ನಡೆ

ಈಗಾಗಲೇ ಕೆಲವು ಆರೋಪಗಳಲ್ಲಿ ಹಾರ್ವಿ ವೈನ್​ಸ್ಟೀನ್​ಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ವಿಚಾರಣೆ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂಬ ಕಾರಣಕ್ಕೆ ನ್ಯೂಯಾರ್ಕ್​ ನ್ಯಾಯಾಲಯವು ಆ ಶಿಕ್ಷೆಯನ್ನು ರದ್ದುಗೊಳಿಸಿತ್ತು. ಸಂಬಂಧವೇ ಇಲ್ಲದ ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ ಎಂಬ ಕಾರಣ ನೀಡಿ ನ್ಯಾಯಾಲಯ ಈ ಆದೇಶ ನೀಡಿತು. ಬಳಿಕ ಹೊಸದಾಗಿ ವಿಚಾರಣೆ ನಡೆಸುವಂತೆ ಆದೇಶಿಸಲಾಯಿತು. ಸದ್ಯಕ್ಕಂತೂ ಹಾರ್ವಿ ವೈನ್​ಸ್ಟೀನ್​ ಜೈಲಿನಲ್ಲಿ ಇದ್ದಾನೆ. ಜೈಲು ಶಿಕ್ಷೆಯ ಜೊತೆ ಕಾಯಿಲೆಗಳು ಅಂಟಿಕೊಂಡಿರುವುದರಿಂದ ಆತನ ಜೀವನ ನರಕ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.