ಗಂಭೀರ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹಾಲಿವುಡ್ನ (Hollywood) ಹಿರಿಯ ನಿರ್ಮಾಪಕ ಹಾರ್ವಿ ವೈನ್ಸ್ಟೀನ್ಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ನ್ಯೂಯಾರ್ಕ್ನ ಮೇಲ್ಮನವಿ ನ್ಯಾಯಾಲಯವು ಹಾರ್ವಿ ವೈನ್ಸ್ಟೀನ್ (Harvey Weinstein) ಪರವಾಗಿ ತೀರ್ಪು ನೀಡಿದೆ. ಈ ಮೊದಲು ಅತ್ಯಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯ (ವಿಚಾರಣಾ ನ್ಯಾಯಾಲಯ) ನೀಡಿದ್ದ ತೀರ್ಪನ್ನು ನ್ಯೂಯಾರ್ಕ್ ಮೇಲ್ಮನವಿ ನ್ಯಾಯಾಲಯ ರದ್ದು ಮಾಡಿದೆ. ಅಲ್ಲದೇ, ಹಾರ್ವಿ ವೈನ್ಸ್ಟೀನ್ ಮೇಲಿರುವ ಆರೋಪಗಳ ಕುರಿತಂತೆ ಹೊಸದಾಗಿ ವಿಚಾರಣೆ ನಡೆಸಲು ಆದೇಶಿಸಿದೆ. ಇದರಿಂದಾಗಿ ಮಿಟೂ ಅಭಿಯಾನಕ್ಕೆ (Me Too Movement) ದೊಡ್ಡ ಹಿನ್ನಡೆ ಆದಂತಾಗಿದೆ.
ಚಿತ್ರರಂಗದಲ್ಲಿ ಸುಮಾರು 80ಕ್ಕೂ ಅಧಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಕೆಲವರ ಮೇಲೆ ಅತ್ಯಾಚಾರ ಎಸೆಗಿದ ಆರೋಪ ಹಾರ್ವಿ ವೈನ್ಸ್ಟೀನ್ ಮೇಲಿದೆ. 2017ರಲ್ಲಿ ಆತನ ವಿರುದ್ಧ ಆರೋಪಗಳು ಕೇಳಿಬಂದವು. ಹಲವು ವರ್ಷಗಳ ಹಿಂದೆ ಹಾರ್ವಿ ವೈನ್ಸ್ಟೀನ್ ಮಾಡಿದ್ದ ಕೃತ್ಯಗಳನ್ನು ಮಹಿಳೆಯರು ಬಹಿರಂಗಪಡಿಸಿದರು. ಇದರಿಂದ ಹಾಲಿವುಡ್ನಲ್ಲಿ ಮಿಟೂ ಅಭಿಯಾನ ಶುರುವಾಯಿತು. ಬಳಿಕ ಅದು ಜಗತ್ತಿದಾದ್ಯಂತ ಹಬ್ಬಿತ್ತು. ಕನ್ನಡ ಚಿತ್ರರಂಗದಲ್ಲೂ ಮಿಟೂ ಅಭಿಮಾನ ಆರಂಭ ಆಗಿತ್ತು. ನಟಿ ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದರು. ಬಾಲಿವುಡ್ ನಟಿ ತನುಶ್ರೀ ದತ್ತಾ ಕೂಡ ಹಲವರ ಮೇಲೆ ಆರೋಪ ಹೊರಿಸಿದ್ದರು.
2018ರಲ್ಲಿ ಅತ್ಯಾಚಾರ ಆರೋಪದ ಮೇಲೆ ಹಾರ್ವಿ ವೈನ್ಸ್ಟೀನ್ ಬಂಧನವಾಗಿತ್ತು. ಆಗ ವಿಚಾರಣೆ ನಡೆಸಿದ ನ್ಯಾಯಾಲಯವು ಆತನಿಗೆ 23 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆ ವಿಚಾರಣೆ ಸೂಕ್ತ ರೀತಿಯಲ್ಲಿ ಆಗಿರಲಿಲ್ಲ ಎಂದು ನ್ಯೂಯಾರ್ಕ್ನ ಮೇಲ್ಮನವಿ ನ್ಯಾಯಾಲಯ ಈಗ ಅಭಿಪ್ರಾಯಪಟ್ಟಿದೆ. ಈ ಮೊದಲು ತೀರ್ಪು ನೀಡಿದ್ದ ನ್ಯಾಯಾಧೀಶರು ಹಾರ್ವಿ ವೈನ್ಸ್ಟೀನ್ ಬಗ್ಗೆ ಪೂರ್ವಾಗ್ರಹ ಹೊಂದಿದ್ದರು ಹಾಗೂ ಸಂಬಂಧವೇ ಇಲ್ಲದ ಸಾಕ್ಷಿಗಳನ್ನು ಪರಿಗಣಿಸಿದ್ದರು ಎಂದು ಹೊಸ ತೀರ್ಪಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ನಿರ್ದೇಶಕ ಸುಸಿ ಗಣೇಶನ್ ವಿರುದ್ಧ ಮಿಟೂ ಆರೋಪ ಮಾಡಿದ್ದ ಲೀನಾ ಮಣಿಮೆಕಲೈ
ಸದ್ಯಕ್ಕೆ ಹಾರ್ವಿ ವೈನ್ಸ್ಟೀನ್ಗೆ ಒಂದು ಕೇಸ್ನಲ್ಲಿ ರಿಲೀಫ್ ಸಿಕ್ಕಿದೆಯಾದರೂ ಮತ್ತೊಂದು ಲೈಂಗಿಕ ಅಪರಾಧಕ್ಕೆ ಸಂಬಂಧಿಸಿದಂತೆ ಆತ 16 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ. ಹಾಗಾಗಿ ಆ ತೀರ್ಪಿನ ಅನುಸಾರ ಆತ ಜೈಲಿನಲ್ಲಿ ಮುಂದುವರಿಯುದು ಅನಿವಾರ್ಯ ಆಗಿದೆ. ಈಗ ಹಾರ್ವಿ ವೈನ್ಸ್ಟೀನ್ಗೆ 72 ವರ್ಷ ವಯಸ್ಸು. ಹಾಲಿವುಡ್ನಲ್ಲಿ ಆತ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾನೆ. ಆಸ್ಕರ್ ಪ್ರಶಸ್ತಿ ಕೂಡ ಆತನಿಗೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.