ಹಾಲಿವುಡ್ ಚಿತ್ರದ ಸಿದ್ಧತೆಗೆ ಭಗದ್ಗೀತೆ ಓದಿಕೊಂಡ ಐರಿಷ್ ನಟ ಕಿಲಿಯನ್ ಮರ್ಫಿ

|

Updated on: Jul 18, 2023 | 8:40 AM

ಕೇವಲ ಭಾರತ ಮಾತ್ರವಲ್ಲದೆ ವಿದೇಶದವರೂ ಕೂಡ ಭಗವದ್ಗೀತೆಯಿಂದ ಪ್ರಭಾವಿತರಾಗಿದ್ದಾರೆ ಎಂಬುದಕ್ಕೆ ಹೊಸ ಉದಾಹರಣೆಯೊಂದು ಸಿಕ್ಕಿದೆ.  

ಹಾಲಿವುಡ್ ಚಿತ್ರದ ಸಿದ್ಧತೆಗೆ ಭಗದ್ಗೀತೆ ಓದಿಕೊಂಡ ಐರಿಷ್ ನಟ ಕಿಲಿಯನ್ ಮರ್ಫಿ
ಕಿಲಿಯನ್ ಮರ್ಫಿ
Follow us on

ಹಾಲಿವುಡ್​ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan)​ ನಿರ್ದೇಶನ ಮಾಡಿರುವ ‘ಆಪನ್​ಹೈಮರ್​’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಜುಲೈ 21ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಭರ್ಜರಿಯಾಗಿ ಪ್ರಚಾರ ನೀಡಲಾಗುತ್ತಿದೆ. ಅಣು ಬಾಂಬ್​ ಕಂಡು ಹಿಡಿದ ಜೆ. ರಾಬರ್ಟ್​ ಆಪನ್​ಹೈಮರ್ ಅವರ ಬದುಕನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ ಅನ್ನೋದು ವಿಶೇಷ. ಈ ಚಿತ್ರದಲ್ಲಿ ಬಣ್ಣ ಹಚ್ಚಿರುವ ಐರಿಷ್ ನಟ ಕಿಲಿಯನ್ ಮರ್ಫಿ (Cillian Murphy) ಅವರು ಅಚ್ಚರಿಯ ವಿಚಾರ ಒಂದನ್ನು ರಿವೀಲ್ ಮಾಡಿದ್ದಾರೆ. ಅವರು ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳಲು ಭಗವದ್ಗೀತೆ ಓದಿದ್ದರಂತೆ.

ಭಗವದ್ಗೀತೆಯಲ್ಲಿ ಒಟ್ಟೂ 18 ಅಧ್ಯಾಯಗಳು ಇವೆ. ಮಹಾಭಾರತದ ಕುರುಕ್ಷೇತ್ರ ಯುಧ್ಧದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶವೇ ಭಗವದ್ಗೀತೆ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಇದೂ ಒಂದು. ಇದು ಅನೇಕರಿಗೆ ಸ್ಫೂರ್ತಿ ನೀಡಿದೆ. ಕೇವಲ ಭಾರತ ಮಾತ್ರವಲ್ಲದೆ ವಿದೇಶದವರೂ ಕೂಡ ಇದರಿಂದ ಪ್ರಭಾವಿತರಾಗಿದ್ದಾರೆ ಎಂಬುದಕ್ಕ ಹೊಸ ಉದಾಹರಣೆಯೊಂದು ಸಿಕ್ಕಿದೆ.

ರಾಬರ್ಟ್​ ಆಪನ್​ಹೈಮರ್​ ಪಾತ್ರಕ್ಕೆ ಕಿಲಿಯನ್​ ಮರ್ಫಿ ಬಣ್ಣ ಹಚ್ಚಿದ್ದಾರೆ. ಇದೊಂದು ಚಾಲೆಂಜಿಂಗ್ ಪಾತ್ರ. ಈ ಪಾತ್ರವನ್ನು ನಿರ್ವಹಿಸಲು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ‘ನಾನು ಸಿದ್ಧತೆ ವೇಳೆ ಭಗವದ್ಗೀತೆ ಓದುತ್ತಿದ್ದೆ. ನಿಜಕ್ಕೂ ಸ್ಫೂರ್ತಿದಾಯಕವಾಗಿತ್ತು. ಇದು ಅವರಿಗೆ (ಆಪನ್​ಹೈಮರ್​) ಒಂದು ಸಾಂತ್ವನ ಎಂದು ನಾನು ಭಾವಿಸುತ್ತೇನೆ. ಅವರಿಗೆ ಇದು ಒಂದು ರೀತಿಯಲ್ಲಿ ಅಗತ್ಯವಾಗಿತ್ತು. ಇದು ಅವರ ಜೀವನದುದ್ದಕ್ಕೂ ಬಹಳಷ್ಟು ಸಾಂತ್ವನವನ್ನು ನೀಡಿತು’ ಎಂದಿದ್ದಾರೆ ಕಿಲಿಯನ್.

ಇದನ್ನೂ ಓದಿ: ಕ್ರಿಸ್ಟೋಫರ್ ನೋಲನ್​ ನಿರ್ದೇಶನದ ‘ಆಪನ್​ಹೈಮರ್​’ ಸಿನಿಮಾ ಮೇಲೆ ಇಷ್ಟೊಂದು ಕ್ರೇಜ್​ ಹೆಚ್ಚಲು ಕಾರಣ ಏನು? ಇಲ್ಲಿದೆ ವಿವರ..

ಅಚ್ಚರಿಯ ವಿಷಯ ಎಂದರೆ ಆಪನ್ ​ಹೈಮರ್ ಸಂಸ್ಕೃತ ಕಲಿತಿದ್ದರು. ಅವರು ಕೂಡ ಭಗವದ್ಗೀತೆ ಓದಿದ್ದರು. ಅಣು ಬಾಂಬ್ ಪರೀಕ್ಷೆ ಮಾಡಿದ ನಂತರದಲ್ಲಿ ಆಪನ್​ ಹೈಮರ್ ಅವರು ಭಗವದ್ಗೀತೆಯಲ್ಲಿ ಬರುವ ಸಾಲನ್ನು ಉಲ್ಲೇಖಿಸಿದ್ದರು. ‘ನಾನು ಈಗ ಮೃತ್ಯು ಆಗಿದ್ದೇನೆ. ಪ್ರಪಂಚವನ್ನು ನಾಶ ಮಾಡುವವನು’ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ