Oppenheimer: ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್ಹೈಮರ್’ ಸಿನಿಮಾ ಮೇಲೆ ಇಷ್ಟೊಂದು ಕ್ರೇಜ್ ಹೆಚ್ಚಲು ಕಾರಣ ಏನು? ಇಲ್ಲಿದೆ ವಿವರ..
J. Robert Oppenheimer: ಅಣು ಬಾಂಬ್ ಕಂಡುಹಿಡಿದ ಜೆ. ರಾಬರ್ಟ್ ಆಪರ್ಹೈಮರ್ ಅವರ ಜೀವನದ ವಿವರಗಳನ್ನು ಆಧರಿಸಿ ‘ಆಪನ್ಹೈಮರ್’ ಸಿನಿಮಾ ಮೂಡಿಬಂದಿದೆ. ಕ್ರಿಸ್ಟೋಫರ್ ನೋಲನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಹಾಲಿವುಡ್ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರು ಪ್ರತಿ ಬಾರಿಯೂ ಅಭಿಮಾನಿಗಳಿಗೆ ಡಿಫರೆಂಟ್ ಸಿನಿಮಾ ನೀಡುತ್ತಾರೆ. ಈಗ ಅವರು ನಿರ್ದೇಶನ ಮಾಡಿರುವ ‘ಆಪನ್ಹೈಮರ್’ ಸಿನಿಮಾ (Oppenheimer Movie) ಬಿಡುಗಡೆಗೆ ಸಜ್ಜಾಗಿದೆ. ಜುಲೈ 21ರಂದು ವಿಶ್ವಾದ್ಯಂತ ರಿಲೀಸ್ ಆಗಲಿರುವ ಈ ಸಿನಿಮಾ ಬಗ್ಗೆ ಸಖತ್ ಕ್ರೇಜ್ ಸೃಷ್ಟಿ ಆಗಿದೆ. ಅನೇಕ ಕಡೆಗಳಲ್ಲಿ ಸಂದರ್ಶನ ನೀಡುವ ಮೂಲಕ ಚಿತ್ರತಂಡದವರು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಇದು ಐತಿಹಾಸಿಕ ಕಥೆಯನ್ನು ಹೊಂದಿರುವ ಸಿನಿಮಾ. ಅಲ್ಲದೇ, ಅಣು ಬಾಂಬ್ ಕಂಡು ಹಿಡಿದ ಜೆ. ರಾಬರ್ಟ್ ಆಪನ್ಹೈಮರ್ (J. Robert Oppenheimer) ಅವರ ಜೀವನವನ್ನು ಆಧರಿಸಿದ ಚಿತ್ರ ಇದು. ಒಟ್ಟಾರೆಯಾಗಿ ಈ ಸಿನಿಮಾ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳಲು ಅನೇಕ ಕಾರಣಗಳಿವೆ. ಟ್ರೇಲರ್ ಮೂಲಕ ಈ ಸಿನಿಮಾ ಸದ್ದು ಮಾಡಿದೆ.
ಪಾತ್ರವರ್ಗದ ಕಾರಣದಿಂದ ‘ಆಪನ್ಹೈಮರ್’ ಸಿನಿಮಾ ಗಮನ ಸೆಳೆಯುತ್ತಿದೆ. ರಾಬರ್ಟ್ ಡೌನಿ ಜೂನಿಯರ್, ಕಿಲಿಯನ್ ಮರ್ಫಿ, ಮ್ಯಾಟ್ ಡೇಮನ್ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಜೆ. ರಾಬರ್ಟ್ ಆಪನ್ಹೈಮರ್ ಪಾತ್ರಕ್ಕೆ ಕಿಲಿಯನ್ ಮರ್ಫಿ ಬಣ್ಣ ಹಚ್ಚಿದ್ದಾರೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದಾರೆ. ರಾಬರ್ಟ್ ಡೌನಿ ಜೂನಿಯರ್ ಅವರು ಬಹುತೇಕ ಗುರುತೇ ಸಿಗದಂತೆ ಬದಲಾಗಿದ್ದಾರೆ.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಮೇಲೆ ಅಮೆರಿಕ ಎರಡು ಬಾರಿ ಅಣು ಬಾಂಬ್ ಹಾಕಿತ್ತು. ಆ ಘಟನೆ ಇಡೀ ಮನುಕುಲದ ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿದೆ. ಒಂದೇ ಬಾರಿಗೆ ಲಕ್ಷಾಂತರ ಜನರನ್ನು ಕೊಲ್ಲುವಂತಹ, ಇಡೀ ಒಂದು ಮಹಾನಗರವನ್ನೇ ಕ್ಷಣಾರ್ಧದಲ್ಲಿ ನಿರ್ನಾಮ ಮಾಡುವಂತಹ ದೈತ್ಯ ಬಾಂಬ್ ಕಂಡು ಹಿಡಿದವರು ಜೆ. ರಾಬರ್ಟ್ ಆಪರ್ಹೈಮರ್. ಅವರ ಜೀವನದ ವಿವರಗಳನ್ನು ಈ ಸಿನಿಮಾದಲ್ಲಿ ನೋಡಬಹುದು.
ಕ್ರಿಸ್ಟೋಫರ್ ನೋಲನ್ ಅವರು ತಾಂತ್ರಿಕ ಅಂಶಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಐಮ್ಯಾಕ್ಸ್ ಕ್ಯಾಮೆರಾದಲ್ಲಿ ‘ಆಪರ್ಹೈಮರ್’ ಸಿನಿಮಾವನ್ನು ಚಿತ್ರಿಸಲಾಗಿದೆ. ಅಲ್ಲದೇ, ಈ ಕ್ಯಾಮೆರಾದ ಮೂಲಕ ಬ್ಲಾಕ್ ಆ್ಯಂಡ್ ವೈಟ್ ದೃಶ್ಯಗಳನ್ನು ಚಿತ್ರಿಸಲ್ಪಟ್ಟ ಮೊದಲ ಸಿನಿಮಾ ಎಂಬ ಖ್ಯಾತಿಗೂ ‘ಆಪರ್ಹೈಮರ್’ ಪಾತ್ರವಾಗಿದೆ. ಗ್ರಾಫಿಕ್ಸ್ ದೃಶ್ಯಗಳ ಬದಲಾಗಿ ಎಲ್ಲವನ್ನೂ ಈ ಸಿನಿಮಾದಲ್ಲಿ ನೈಜವಾಗಿ ಚಿತ್ರೀಕರಿಸಲಾಗಿದೆ. ಆ ಕಾರಣದಿಂದಲೂ ‘ಆಪನ್ಹೈಮರ್’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.
ಮಹಾಯುದ್ಧಗಳ ಬಗೆಬಗಿನ ಸರಿ-ತಪ್ಪುಗಳ ಚರ್ಚೆ ಎಂದಿಗೂ ಮುಗಿಯುವಂಥದ್ದಲ್ಲ. ಒಂದು ದೇಶಕ್ಕೆ ಸರಿ ಎನಿಸಿದ್ದು, ಇನ್ನೊಂದು ದೇಶಕ್ಕೆ ಸರಿ ಎನಿಸುವುದಿಲ್ಲ. ಅಣು ಬಾಂಬ್ ಕುರಿತಾದ ವಿಚಾರಗಳನ್ನು ಈ ಸಿನಿಮಾದಲ್ಲಿ ಸಮರ್ಥಿಸಿಕೊಳ್ಳಲಾಗಿದೆಯೇ? ನಿರ್ದೇಶಕರು ಯಾವ ಆಯಾಮವನ್ನು ಜನರ ಮುಂದೆ ಇಡುತ್ತಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಲುವಾಗಿ ‘ಆಪನ್ಹೈಮರ್’ ಸಿನಿಮಾವನ್ನು ನೋಡಲು ಜನರು ಕಾದಿದ್ದಾರೆ.
ಭಗವದ್ಗೀತೆ, ಆಪನ್ಹೈಮರ್ ಮತ್ತು ಹಿಂದೆಂದೂ ನೋಡಿರದಂಥಹಾ ಸಿನಿಮಾ
ಜುಲೈ 21ರಂದು ಹಾಲಿವುಡ್ನ ‘ಬಾರ್ಬಿ’ ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಖ್ಯಾತ ಕಲಾವಿದರಾದ ರಯನ್ ಗಾಸ್ಲಿಂಗ್ ಮತ್ತು ಮಾರ್ಗೋಟ್ ರಾಬಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ‘ಆಪನ್ಹೈಮರ್’ ಸಿನಿಮಾ ಜೊತೆ ‘ಬಾರ್ಬಿ’ ಚಿತ್ರ ಪೈಪೋಟಿ ನೀಡಲಿದೆ. ಬಾಕ್ಸ್ ಆಫೀಸ್ನಲ್ಲಿ ಈ ಎರಡು ಚಿತ್ರಗಳ ಪೈಕಿ ಯಾವ ಸಿನಿಮಾಗೆ ಹೆಚ್ಚು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:57 pm, Mon, 17 July 23