ನಟಿ ಕಂಗನಾ ರಣಾವತ್ (Kangana Ranaut) ಅವರು ಯಾವಾಗ, ಯಾವ ರೀತಿಯ ಹೇಳಿಕೆ ನೀಡುತ್ತಾರೆ ಎಂಬುದೇ ಅರ್ಥವಾಗುವುದಿಲ್ಲ. ಒಂದಷ್ಟು ದಿನಗಳ ಕಾಲ ಅವರು ಹಾಲಿವುಡ್ ಸಿನಿಮಾಗಳ ವಿರುದ್ಧ ಮಾತನಾಡಿದ್ದರು. ಈಗ ಏಕಾಏಕಿ ಅವರು ‘ಆಪನ್ಹೈಮರ್’ (Oppenheimer) ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಈ ಸಿನಿಮಾವನ್ನು ಅವರು ವೀಕ್ಷಿಸಿದ್ದಾರೆ. ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರ ಸಿನಿಮಾಗಳಲ್ಲಿ ಇದೇ ಬೆಸ್ಟ್ ಚಿತ್ರ ಎಂದು ಕಂಗನಾ ರಣಾವತ್ ಹೊಗಳಿದ್ದಾರೆ. ಸಿನಿಮಾ ನೋಡಿದ ಬಳಿಕ ವಿಡಿಯೋ ಮೂಲಕ ತಮ್ಮ ಅನಿಸಿಕೆಯನ್ನು ಅವರು ಹಂಚಿಕೊಂಡಿದ್ದಾರೆ. ಒಂದಷ್ಟು ವಿವಾದ ಸೃಷ್ಟಿ ಮಾಡಿರುವ ಭಗವದ್ಗೀತೆಯ ದೃಶ್ಯದ ಬಗ್ಗೆಯೂ ಕಂಗನಾ ರಣಾವತ್ ಅವರು ಮಾತನಾಡಿದ್ದಾರೆ.
ಅಣು ಬಾಂಬ್ ಕಂಡುಹಿಡಿದ ವಿಜ್ಞಾನಿ ಜೆ. ರಾಬರ್ಟ್ ಆಪನ್ಹೈಮರ್ ಅವರ ಜೀವನದ ವಿವರಗಳನ್ನು ಆಧರಿಸಿ ‘ಆಪನ್ಹೈಮರ್’ ಸಿನಿಮಾ ಮೂಡಿಬಂದಿದೆ. ಆಪನ್ಹೈಮರ್ ಅವರ ಪಾತ್ರವನ್ನು ಕಿಲಿಯನ್ ಮರ್ಫಿ ನಿಭಾಯಿಸಿದ್ದಾರೆ. ವಿಶ್ವಾದ್ಯಂತ ಬಿಡುಗಡೆ ಆಗಿರುವ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಭಾರತದಲ್ಲೂ ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ‘ಆಪನ್ಹೈಮರ್’ ಉತ್ತಮವಾಗಿ ಕಮಾಯಿ ಮಾಡಿದೆ. ಕಂಗನಾ ರಣಾವತ್ ಅವರಿಗೂ ಈ ಸಿನಿಮಾ ಇಷ್ಟವಾಗಿದೆ. ಅದನ್ನು ಅವರು ವಿಡಿಯೋ ಮೂಲಕ ತಿಳಿಸಿದ್ದಾರೆ.
‘ಆಪನ್ಹೈಮರ್’ ಸಿನಿಮಾದ ಕಥೆ ಏನು? ಯಾವೆಲ್ಲ ಅಂಶಗಳ ಬಗ್ಗೆ ಈ ಸಿನಿಮಾದಲ್ಲಿ ಚರ್ಚೆ ಮಾಡಲಾಗಿದೆ? ತಮಗೆ ಯಾಕೆ ಈ ಸಿನಿಮಾ ಇಷ್ಟ ಆಯಿತು ಎಂಬಿತ್ಯಾದಿ ಅಂಶಗಳನ್ನು ಕಂಗನಾ ರಣಾವತ್ ಅವರು ವಿವರಿಸಿದ್ದಾರೆ. ‘ಭಗವದ್ಗೀತೆಯ ಉಲ್ಲೇಖ ಇರುವ ದೃಶ್ಯವೇ ನನ್ನ ಫೇವರಿಟ್’ ಎಂದು ಅವರು ಹೇಳಿದ್ದಾರೆ. ‘ಇದು ಒಳ್ಳೆಯ ಸಿನಿಮಾ. ಎಲ್ಲರೂ ಹೋಗಿ ನೋಡಿ’ ಎಂದು ಕೂಡ ಕಂಗನಾ ಶಿಫಾರಸು ಮಾಡಿದ್ದಾರೆ.
ಪ್ರೇಯಸಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವಾಗ ಆಪನ್ಹೈಮರ್ ಅವರು ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯ ಈ ಸಿನಿಮಾದಲ್ಲಿ ಇದೆ. ಅದಕ್ಕೆ ಭಾರತದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ಆಕ್ಷೇಪಿಸಲಾಗಿದೆ. ಈ ನಡುವೆ ಕಂಗನಾ ರಣಾವತ್ ಅವರು ಇಂಥ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣ ಆಗಿದೆ. ಕಂಗನಾ ಹೇಳಿಕೆಗೆ ಕೆಲವರು ಸಹಮತ ಸೂಚಿಸಿದ್ದಾರೆ. ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.