Oppenheimer: ‘ಆಪನ್ಹೈಮರ್’ ಕಲೆಕ್ಷನ್ ಕುಸಿಯಲು ಭಗವದ್ಗೀತೆ ವಿವಾದವೇ ಕಾರಣವಾಯ್ತಾ? 6 ದಿನಕ್ಕೆ 67 ಕೋಟಿ ರೂ. ಗಳಿಕೆ
Oppenheimer Movie Collection: ಭಾರತದಲ್ಲಿ ‘ಆಪನ್ಹೈಮರ್’ ಸಿನಿಮಾ ಓಪನಿಂಗ್ ಪಡೆದುಕೊಂಡ ಪರಿ ಗಮನಿಸಿದರೆ ಬಹಳ ವೇಗವಾಗಿ 100 ಕೋಟಿ ರೂಪಾಯಿ ಗಳಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ.
ಹಾಲಿವುಡ್ನ ‘ಆಪನ್ಹೈಮರ್’ (Oppenheimer) ಸಿನಿಮಾಗೆ ಭಾರತದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿತು. ಜುಲೈ 21ರಂದು ತೆರೆಕಂಡ ಈ ಸಿನಿಮಾಗೆ ಮೊದಲ ದಿನ ಆಗಿದ್ದು 14.5 ಕೋಟಿ ರೂಪಾಯಿ ಕಲೆಕ್ಷನ್. ಭಾನುವಾರ ಬರೋಬ್ಬರಿ 17.25 ಕೋಟಿ ರೂಪಾಯಿ ಗಳಿಕೆ ಆಯಿತು. ಆದರೆ ಸೋಮವಾರದ (ಜುಲೈ 24) ವೇಳೆಗೆ ಈ ಚಿತ್ರದ ಕಲೆಕ್ಷನ್ ಶೇಕಡ 50ರಷ್ಟು ಕುಸಿಯಿತು. ಸೋಮವಾರ ಕಲೆಕ್ಟ್ ಆಗಿದ್ದು 7 ಕೋಟಿ ರೂಪಾಯಿ ಮಾತ್ರ. ಅಂದಿನಿಂದ ಈ ಚಿತ್ರದ ಕಲೆಕ್ಷನ್ (Oppenheimer Box Office Collection) ಕುಸಿಯುತ್ತಲೇ ಇದೆ. ಈ ಸಿನಿಮಾದಲ್ಲಿ ಇರುವ ಭಗವದ್ಗೀತೆ (Bhagavad Gita) ಕುರಿತ ದೃಶ್ಯಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕಲೆಕ್ಷನ್ ಕುಸಿಯಲು ಇದು ಕೂಡ ಕಾರಣ ಎಂದು ಹೇಳಲಾಗುತ್ತಿದೆ.
ಕ್ರಿಸ್ಟೋಫರ್ ನೋಲನ್ ಅವರು ‘ಆಪನ್ಹೈಮರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಿಲಿಯನ್ ಮರ್ಫಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ರಾಬರ್ಟ್ ಡೌನಿ ಜ್ಯೂನಿಯರ್, ಎಮಿಲಿ ಬ್ಲಂಟ್, ಮ್ಯಾಟ್ ಡೇಮನ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಓಪನಿಂಗ್ ಪಡೆದುಕೊಂಡ ಪರಿ ಗಮನಿಸಿದರೆ ಬಹಳ ವೇಗವಾಗಿ 100 ಕೋಟಿ ರೂಪಾಯಿ ಗಳಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. 6 ದಿನಕ್ಕೆ ಒಟ್ಟು 67.85 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.
‘ಆಪನ್ಹೈಮರ್’ ಸಿನಿಮಾದ ಕಥಾನಾಯಕ ಲೈಂಗಿಕ ಕ್ರಿಯೆ ವೇಳೆ ಭಗವದ್ಗೀತೆ ಓದುವ ದೃಶ್ಯ ಇದೆ. ಇದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಕಾರಣದಿಂದಲೇ ಈ ಚಿತ್ರದ ಕಲೆಕ್ಷನ್ ಕುಸಿಯುತ್ತಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ವಾರದ ದಿನಗಳಲ್ಲಿ ಈ ರೀತಿ ಕಲೆಕ್ಷನ್ ಕುಸಿಯುವುದು ಸಹಜ ಎಂದು ಕೂಡ ಹೇಳಲಾಗುತ್ತಿದೆ. ಎರಡನೇ ವೀಕೆಂಡ್ನಲ್ಲಿ ಮತ್ತೆ ‘ಆಪನ್ಹೈಮರ್’ ಸಿನಿಮಾದ ಗಳಿಕೆ ಹೆಚ್ಚುವ ಸಾಧ್ಯತೆ ಇದೆ.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಣು ಬಾಂಬ್ ಕಂಡುಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಆಪನ್ಹೈಮರ್ ಜೀವನದ ಕುರಿತು ಈ ಸಿನಿಮಾ ಮೂಡಿಬಂದಿದೆ. ವಿಶ್ವಾದ್ಯಂತ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೆ ಪ್ರೇಕ್ಷಕರು ‘ಆಪನ್ಹೈಮರ್’ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಮೊದಲ ಮೂರು ದಿನ ಭಾರತ ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.