ಪಾಶ್ಚಾತ್ಯ ದೇಶಗಳ ಕಲಾವಿದರು ಕೆಲವೊಮ್ಮೆ ವಿಚಿತ್ರ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಅಂಥದ್ದೇ ಒಂದು ಪ್ರಕರಣ ಇತ್ತೀಚೆಗೆ ವರದಿಯಾಗಿದೆ. ಅಲ್ಲಿ ಬಹಳಷ್ಟು ಜನ ಖ್ಯಾತನಾಮರಿಗೆ ಸಾಕು ಪ್ರಾಣಿಗಳೆಂದರೆ ಪ್ರಾಣ. ಅವುಗಳಿಗೆ ಉಡುಗೆ ತೊಡುಗೆ ತೊಡಿಸಿ, ತಾವು ಹೋದಲ್ಲೆಲ್ಲಾ ಕರೆದೊಯ್ಯುತ್ತಾರೆ; ಅದು ವಿಮಾನವೇ ಆಗಿರಲಿ ಅಥವಾ ಚಿತ್ರೀಕರಣದ ಸ್ಥಳವೇ ಆಗಿರಲಿ. ಇದರೊಂದಿಗೆ ಅವುಗಳಿಗೆ ಆರೈಕೆ ಮತ್ತು ಇತರ ಸವಲತ್ತುಗಳೂ ದೊರೆಯುತ್ತವೆ. ಈ ಎಲ್ಲವುಗಳನ್ನೂ ಮೀರಿ ತಮ್ಮ ನೆಚ್ಚಿನ ಸಾಕು ಪ್ರಾಣಿಗೆ ಪ್ರೀತಿ ಹಂಚಲು ಮುಂದಾದ ರೂಪದರ್ಶಿಯೋರ್ವರು ಈಗ ಸಖತ್ ಸುದ್ದಿಯಲ್ಲಿದ್ಧಾರೆ. ಅದೇನು ಸಮಾಚಾರ ಅಂತೀರಾ? ಮುಂದೆ ಓದಿ.
ಪ್ಲೇಬಾಯ್ ನಿಯತಕಾಲಿಕೆಯ ರೂಪದರ್ಶಿಯಾದ ಜೂ ಐಸೆನ್ ತಮ್ಮ ಎಲ್ಲಾ ಆಸ್ತಿಯನ್ನು ಪ್ರೀತಿಯ ನಾಯಿಗೆ ಬರೆಯಲು ಮುಂದಾಗಿದ್ದಾರೆ. ಮಕ್ಕಳಿಲ್ಲದ ಕಾರಣ, ಸುಮಾರು 2 ಮಿಲಿಯನ್ ಡಾಲರ್ (ಸುಮಾರು ₹ 15 ಕೋಟಿ) ಆಸ್ತಿಯನ್ನು ಸಾಕುನಾಯಿ ಫ್ರಾನ್ಸಿಸ್ಕೋಗೆ ಬರೆಯಲು ಐಸೆನ್ ಮುಂದಾಗಿದ್ದಾರೆ. ಜೊತೆಗೆ ಈ ಕುರಿತು ವಿಲ್ ಮಾಡಲು ವಕೀಲರನ್ನೂ ಸಂಪರ್ಕಿಸಿದ್ದಾರೆ. ಐಸೆನ್ ಪ್ರಕಾರ ಆಸ್ತಿಯು ನಾಯಿಗೆ ಒಳ್ಳೆಯ ಸ್ಥಾನಮಾನ ನೀಡುವುದಲ್ಲದೇ, ಆಕೆ ಸತ್ತಾಗ ನಾಯಿಯನ್ನು ನೋಡಿಕೊಳ್ಳುವವರಿಗೆ ಉಪಯೋಗವಾಗಲಿದೆಯಂತೆ.
ಈ ಕುರಿತು ಐಸೆನ್ ಹೇಳಿಕೆಯನ್ನೂ ನೀಡಿದ್ದಾರೆ. ‘‘ನಾನು ಬೆಳೆಯಲು ಇದುವರೆಗೆ ಬಹಳ ಕಷ್ಟಪಟ್ಟಿದ್ದೇನೆ. ಇನ್ನು ಮುಂದಾದರೂ ಭವಿಷ್ಯದ ಕುರಿತು ಯೋಚಿಸಬೇಕು’’ ಎಂದಿದ್ಧಾರೆ. ಸಾಮಾಜಿಕ ಜಾಲತಾಣಗಳಲ್ಲಿ ಐಸೆನ್ ತಮ್ಮ ಪ್ರಿಯ ಫ್ರಾನಿಸ್ಕೋ ಜೊತೆಯಿರುವ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆ ಶ್ವಾನಕ್ಕೆ ವಿವಿಧ ಮಾದರಿಯ ಉಡುಪುಗಳನ್ನು ಧರಿಸಿ ಅಲಂಕರಿಸಿದ ಚಿತ್ರಗಳನ್ನೂ ಐಸೆನ್ ಹಂಚಿಕೊಳ್ಳುತ್ತಾರೆ. ಇಷ್ಟೇ ಅಲ್ಲದೇ ಅವರೊಂದಿಗೆ ಖಾಸಗಿ ವಿಮಾನದಲ್ಲೂ ಫ್ರಾನ್ಸಿಸ್ಕೋ ಪ್ರಯಾಣಿಸುತ್ತದೆ.
ಈ ಹೇಳಿಕೆಗಳೊಂದಿಗೆ ಐಸೆನ್, ತಾವು ಸ್ವತಃ ಕುಟುಂಬವನ್ನು ಹೊಂದುವುದಕ್ಕೆ ಇನ್ನೂ ಸಮಯ ಬಂದಿಲ್ಲ ಎಂದಿದ್ದಾರೆ. ಇತ್ತೀಚೆಗಷ್ಟೇ ಜೂ ಐಸೆನ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಆ ಮೂಲಕ ಹಳೆಯದನ್ನೆಲ್ಲಾ ತ್ಯಜಿಸಿ ತಾವು ಸಂಪೂರ್ಣ ಹೊಸ ವ್ಯಕ್ತಿಯಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಪ್ರಸ್ತುತ ಐಸೆನ್ ತಮ್ಮೆಲ್ಲಾ ಆಸ್ತಿಯನ್ನು ಪ್ರಿಯ ಶ್ವಾನಕ್ಕೆ ಬರೆಯಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿರುವುದಲ್ಲದೇ, ಸಾಕಷ್ಟು ಚರ್ಚೆಯನ್ನೂ ಹುಟ್ಟುಹಾಕಿದೆ.
ಇದನ್ನೂ ಓದಿ:
ತಡವಾದರೂ ಕುಗ್ಗಲಿಲ್ಲ ‘ಕೋಟಿಗೊಬ್ಬ 3’ ಕಲೆಕ್ಷನ್; ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಸುದೀಪ್ ಸಿನಿಮಾ
Kriti Sanon: ‘ಆದಿಪುರುಷ್’ ಚಿತ್ರದ ಶೂಟಿಂಗ್ ಮುಗಿಸಿದ ಕೃತಿ; ನಿರ್ದೇಶಕ ಓಂ ರಾವುತ್ ಹೇಳಿದ್ದೇನು?
Published On - 7:37 pm, Sun, 17 October 21