Ram Gopal Varma: ‘ಆಪನ್​ಹೈಮರ್​’ ಚಿತ್ರದಲ್ಲಿನ ಭಗವದ್ಗೀತೆ ಕುರಿತ ವಿವಾದಾತ್ಮಕ ದೃಶ್ಯದ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಪ್ರತಿಕ್ರಿಯೆ

|

Updated on: Jul 24, 2023 | 9:12 PM

Oppenheimer Movie: ರಾಮ್​ ಗೋಪಾಲ್​ ವರ್ಮಾ ಅವರ ಟ್ವೀಟ್​ ಬಗ್ಗೆ ನೆಟ್ಟಿಗರು ಪರ-ವಿರೋಧ ಚರ್ಚೆ ಮಾಡಿದ್ದಾರೆ. ಆರ್​ಜಿವಿ ಅಭಿಪ್ರಾಯವನ್ನು ಕೆಲವರು ಬೆಂಬಲಿಸಿದ್ದಾರೆ. ಇನ್ನೊಂದು ವರ್ಗದವರು ಟೀಕಿಸಿದ್ದಾರೆ.

Ram Gopal Varma: ‘ಆಪನ್​ಹೈಮರ್​’ ಚಿತ್ರದಲ್ಲಿನ ಭಗವದ್ಗೀತೆ ಕುರಿತ ವಿವಾದಾತ್ಮಕ ದೃಶ್ಯದ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಪ್ರತಿಕ್ರಿಯೆ
ರಾಮ್​ ಗೋಪಾಲ್​ ವರ್ಮಾ, ಕಿಲಿಯನ್​ ಮರ್ಫಿ
Follow us on

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಅವರು ಹಲವು ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಅವರ ಮಾತುಗಳಿಂದ ಅನೇಕ ಬಾರಿ ವಿವಾದಗಳು ಆಗಿದ್ದುಂಟು. ಇತ್ತೀಚೆಗೆ ಬಹುತೇಕರು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹಾಗಿದ್ದರೂ ಕೂಡ ಸೋಶಿಯಲ್​ ಮೀಡಿಯಾದಲ್ಲಿ ರಾಮ್​ ಗೋಪಾಲ್​ ವರ್ಮಾ ಮಾಡುವ ಪೋಸ್ಟ್​ಗಳು ವೈರಲ್​ ಆಗುತ್ತವೆ. ಈಗ ಅವರು ‘ಆಪನ್​ಹೈಮರ್​’ (Oppenheimer) ಸಿನಿಮಾದಲ್ಲಿನ ಒಂದು ವಿವಾದಾತ್ಮಕ ದೃಶ್ಯದ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಕ್ರಿಸ್ಟೋಫರ್​ ನೋಲನ್​ ನಿರ್ದೇಶನದ ಈ ಸಿನಿಮಾ ಭಾರತದಲ್ಲಿ ಉತ್ತಮ ಕಲೆಕ್ಷನ್​ ಮಾಡುತ್ತಿದೆ. ಆದರೆ ಈ ಚಿತ್ರದಲ್ಲಿ ಭಗವದ್ಗೀತೆಗೆ (Bhagavad Gita) ಅವಮಾನ ಆಗುವಂತಹ ದೃಶ್ಯ ಇದೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಆ ಬಗ್ಗೆ ರಾಮ್​ ಗೋಪಾಲ್​ ವರ್ಮಾ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ವಿವಾದ ಏನು?

ಅಣುಬಾಂಬ್​ ಕಂಡುಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ಹೈಮರ್​ ಅವರ ಜೀವನದ ಕುರಿತು ‘ಆಪನ್​ಹೈಮರ್​’ ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ಒಂದು ದೃಶ್ಯ ಇದೆ. ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಆಪನ್​ಹೈಮರ್​ ಅವರ ಪ್ರೇಯಸಿಗೆ ಹಲವು ಪುಸ್ತಕಗಳು ಕಾಣಿಸುತ್ತವೆ. ಅವುಗಳಲ್ಲಿ ಒಂದು ಪುಸ್ತಕವನ್ನು ಹಿಡಿದುಕೊಂಡು ‘ಇದು ಏನು’ ಎಂದು ಆಕೆ ಪ್ರಶ್ನಿಸುತ್ತಾಳೆ. ‘ಇದು ಭಗವದ್ಗೀತೆ’ ಅಂತ ಆಪನ್​ಹೈಮರ್​ ಉತ್ತರಿಸುತ್ತಾರೆ ಹಾಗೂ ಅದರಲ್ಲಿ ಇರುವ ಕೆಲವು ಸಾಲುಗಳನ್ನು ವಿವರಿಸಿ ಹೇಳುತ್ತಾರೆ. ಈ ದೃಶ್ಯಕ್ಕೆ ಭಾರತದ ಸೆನ್ಸಾರ್​ ಮಂಡಳಿ ಸದಸ್ಯರು ಹೇಗೆ ಅನುಮತಿ ಕೊಟ್ಟರು ಎಂದು ಅನೇಕರು  ಕ್ಯಾತೆ ತೆಗೆದಿದ್ದಾರೆ.

ಇದನ್ನೂ ಓದಿ: ಮೂರೇ ದಿನಕ್ಕೆ ಭಾರತದಲ್ಲಿ 50 ಕೋಟಿ ರೂಪಾಯಿ ಕಮಾಯಿ ಮಾಡಿದ ‘ಆಪನ್​ಹೈಮರ್’; ‘ಬಾರ್ಬಿ’ ಕಥೆ ಏನು?

ರಾಮ್​ ಗೋಪಾಲ್​ ವರ್ಮಾ ಹೇಳಿದ್ದೇನು?

‘ಆಪನ್​ಹೈಮರ್​’ ಸಿನಿಮಾದಲ್ಲಿ ಭಗವದ್ಗೀತೆಗೆ ಅವಮಾನ ಆಗಿದೆ ಎಂದು ಕೆಲವರು ಹೇಳಿರುವುದಕ್ಕೆ ರಾಮ್​ ಗೋಪಾಲ್​ ವರ್ಮಾ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಅಮರಿಕದ ನ್ಯೂಕ್ಲಿಯರ್​ ವಿಜ್ಞಾನಿ ಆಪನ್​ಹೈಮರ್​ ಅವರು ಭಗವದ್ಗೀತೆ ಓದಿದ್ದರು. ವಿಪರ್ಯಾಸ ಏನೆಂದರೆ, ಭಾರತದ ಶೇಕಡ 0.0000001ರಷ್ಟು ಮಂದಿ ಕೂಡ ಭಗವದ್ಗೀತೆ ಓದಿದ್ದಾರೆ ಎಂಬ ಬಗ್ಗೆ ನನಗೆ ಅನುಮಾನ ಇದೆ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

ನೆಟ್ಟಿಗರ ಪರ-ವಿರೋಧ:

ರಾಮ್​ ಗೋಪಾಲ್​ ವರ್ಮಾ ಅವರ ಈ ಟ್ವೀಟ್​ ಬಗ್ಗೆ ನೆಟ್ಟಿಗರು ಪರ-ವಿರೋಧ ಚರ್ಚೆ ಮಾಡಿದ್ದಾರೆ. ಕೆಲವರು ರಾಮ್ ಗೋಪಾಲ್​ ವರ್ಮಾ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ‘ನಾವು ನೇರವಾಗಿ ಓದಿ ತಿಳಿದುಕೊಳ್ಳುವ ಬದಲು ಬೇರೆಯವರು ತಮಗೆ ಬೇಕಾದಂತೆ ಅರ್ಥೈಸಿ ಬರೆದ ಭಗವದ್ಗೀತೆಯನ್ನು ಓದಿದ್ದೇನೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಇನ್ನೊಂದು ವರ್ಗದ ಜನರು ರಾಮ್​ ಗೋಪಾಲ್​ ವರ್ಮಾರ ಹೇಳಿಕೆಯನ್ನು ವಿರೋಧಿಸಿದ್ದಾರೆ. ‘ಭಾರತದ ಹಲವರು ಬೈಬಲ್​ ಓದಿದ್ದಾರೆ. ಆದರೆ ಅಮೆರಿಕದ ಶೇಕಡ 0.0000001ರಷ್ಟು ಜನರು ಬೈಬಲ್​ ಓದುವ ಧೈರ್ಯ ತೋರಿಸಿಲ್ಲ’ ಎಂಬ ಕಮೆಂಟ್​ ಕೂಡ ಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.