ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರು ಪ್ರತಿ ಸಿನಿಮಾದಲ್ಲೂ ಅಭಿಮಾನಿಗಳಿಗೆ ಅಚ್ಚರಿ ನೀಡುತ್ತಾರೆ. ಇತ್ತೀಚೆಗೆ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಆಪನ್ಹೈಮರ್’ ಸಿನಿಮಾ (Oppenheimer) ಕೂಡ ಸೂಪರ್ ಹಿಟ್ ಆಗಿದೆ. ಅಣು ಬಾಂಬ್ ಕಂಡುಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಆಪನ್ಹೈಮರ್ ಅವರ ಜೀವನದ ಕುರಿತು ಈ ಸಿನಿಮಾ ಸಿದ್ಧವಾಗಿದೆ. ಕ್ರಿಸ್ಟೋಫರ್ ನೋಲನ್ ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅದರಲ್ಲೂ ಅಣು ಬಾಂಬ್ (Atom Bomb) ಪರೀಕ್ಷೆಯ ದೃಶ್ಯಗಳಿಗೆ ಹೆಚ್ಚು ಮೆಚ್ಚುಗೆ ಸಿಕ್ಕಿದೆ. ಅದು ತುಂಬ ವೈಭವದಿಂದ ಕೂಡಿದೆ ಎಂಬ ಕಾರಣಕ್ಕಾಗಿ ಅಲ್ಲ. ಬದಲಿಗೆ, ಹೆಚ್ಚು ನಿಖರವಾಗಿ ಆ ದೃಶ್ಯವನ್ನು ಚಿತ್ರಿಸಲಾಗಿದೆ ಎಂಬುದೇ ಪ್ರಶಂಸೆಗೆ ಕಾರಣ ಆಗಿದೆ. ಈ ನಡುವೆ, ಮೊಟ್ಟ ಮೊದಲ ಅಣು ಬಾಂಬ್ ಪರೀಕ್ಷೆಯ ರಿಯಲ್ ವಿಡಿಯೋ ವೈರಲ್ ಆಗಿದೆ.
ಅಮೆರಿಕದ ವಿಜ್ಞಾನಿಗಳು ಅಣು ಬಾಂಬ್ ಕಂಡು ಹಿಡಿದಾಗ ಅದನ್ನು 1945ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಮಾಡಲಾಗಿತ್ತು. ಜೆ. ರಾಬರ್ಟ್ ಆಪನ್ಹೈಮರ್ ಅವರು ಅದರ ಉಸ್ತುವಾರಿ ವಹಿಸಿದ್ದರು. ಅಂದು ಏನೆಲ್ಲ ನಡೆಯಿತು ಎಂಬುದನ್ನು ವಿವರಿಸುವ ರಿಯಲ್ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಹೇಗಿದೆಯೋ ಅದೇ ರೀತಿ ಸಿನಿಮಾದಲ್ಲೂ ತೋರಿಸಲಾಗಿದೆ. ಹೆಚ್ಚೇನೂ ವ್ಯತ್ಯಾಸ ಇಲ್ಲದೆ, ಎಷ್ಟು ಸಾಧ್ಯವೋ ಅಷ್ಟು ನಿಖರವಾಗಿ ಆ ದೃಶ್ಯವನ್ನು ಕ್ರಿಸ್ಟೋಫರ್ ನೋಲನ್ ಅವರು ಚಿತ್ರಿಸಿದ್ದಾರೆ. ಇದಕ್ಕಾಗಿ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದಾರೆ.
ಜೆ. ರಾಬರ್ಟ್ ಆಪನ್ಹೈಮರ್ ಅವರ ಪಾತ್ರವನ್ನು ಕಿಲಿಯನ್ ಮರ್ಫಿ ನಿಭಾಯಿಸಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಮ್ಯಾಟ್ ಡೇಮನ್, ಎಲಿಮಿ ಬ್ಲಂಟ್, ರಾಬರ್ಡ್ ಡೌನಿ ಜೂನಿಯರ್ ಮುಂತಾದವರು ನಟಿಸಿದ್ದಾರೆ. ವಿಶ್ವಾದ್ಯಂತ ರಿಲೀಸ್ ಆಗಿರುವ ಈ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಮಾಯಿ ಆಗಿದೆ. ಭಾರತದಲ್ಲಿ ಈ ಚಿತ್ರ 84 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆ ಮೂಲಕ ಚಿತ್ರತಂಡ ಗೆಲುವಿನ ನಗು ಬೀರಿದೆ. ಹೊಸ ಸಿನಿಮಾಗಳ ರಿಲೀಸ್ ನಡುವೆಯೂ ‘ಆಪನ್ಹೈಮರ್’ ಸಿನಿಮಾ ಪೈಪೋಟಿ ನೀಡುತ್ತಿದೆ.
ಜುಲೈ 21ರಂದು ‘ಆಪನ್ಹೈಮರ್’ ಸಿನಿಮಾ ಬಿಡುಗಡೆ ಆಯಿತು. ಅದೇ ದಿನ ಹಾಲಿವುಡ್ನ ಮತ್ತೊಂದು ಸಿನಿಮಾ ‘ಬಾರ್ಬಿ’ ಕೂಡ ತೆರೆಕಂಡಿತು. ಈ ಎರಡು ಸಿನಿಮಾಗಳ ನಡುವೆ ಸಖತ್ ಸ್ಪರ್ಧೆ ಏರ್ಪಟ್ಟಿತ್ತು. ಭಾರತದಲ್ಲಿ ‘ಬಾರ್ಬಿ’ ಚಿತ್ರಕ್ಕಿಂತಲೂ ‘ಆಪನ್ಹೈಮರ್’ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಭಗವದ್ಗೀತೆ ಕುರಿತು ಆಕ್ಷೇಪಾರ್ಹ ದೃಶ್ಯ ಇದೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಎದುರಾದ ಬಳಿಕ ಕಲೆಕ್ಷನ್ ಕೊಂಚ ತಗ್ಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.