
ಸೂಪರ್ ಸ್ಟಾರ್ ನಟರುಗಳು ಮದುವೆ ಆಗುವುದು ವಿಚ್ಛೇದನ ನೀಡಿ ಮರು ಮದುವೆ ಆಗುವುದು ಭಾರತದಲ್ಲೇ ಈಗ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಹಾಲಿವುಡ್ನಲ್ಲಂತೂ ಈ ಸಂಪ್ರದಾಯ ತುಸು ಹೆಚ್ಚಾಗಿಯೇ ಇದೆ. ಇದೀಗ ಹಾಲಿವುಡ್ನ ಸೂಪರ್ ಸ್ಟಾರ್ ನಟರೊಬ್ಬರು ನಾಲ್ಕನೇ ಬಾರಿ ಮದುವೆ ಆಗಲು ತಯಾರಾಗಿದ್ದಾರೆ. ಈ ಮದುವೆ ನಡೆಯಲಿರುವುದು ಭೂಮಿಯಲ್ಲಲ್ಲ ಬದಲಿಗೆ ಅಂತರಿಕ್ಷದಲ್ಲಿ ಎನ್ನಲಾಗುತ್ತಿದೆ. ಅಷ್ಟಕ್ಕೂ ಯಾರು ಆ ಹಾಲಿವುಡ್ ಸೂಪರ್ ಸ್ಟಾರ್ ನಟ?
ಅತ್ಯದ್ಭುತ ಸಾಹಸಮಯ ಸಿನಿಮಾಗಳಿಂದ, ರಿಯಲ್ ಸ್ಟಂಟ್ಗಳಿಂದ ದಶಕಗಳಿಂದಲೂ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ನಟ ಟಾಮ್ ಕ್ರೂಸ್ ಅವರು ಹಾಲಿವುಡ್ ನಟಿ ಅನ್ನಾ ಡೆ ಅರ್ಮ್ಸ್ ಅವರನ್ನು ವಿವಾಹ ಆಗಲಿದ್ದಾರೆ. 67 ವರ್ಷದ ಟಾಮ್ ಕ್ರೂಸ್ ಮತ್ತು 37 ವರ್ಷದ ಅನ್ನಾ ಡೆ ಅರ್ಮ್ಸ್ ಅವರು ಕೆಲ ವರ್ಷಗಳಿಂದಲೂ ಡೇಟಿಂಗ್ನಲ್ಲಿದ್ದು ಕೈ-ಕೈ ಹಿಡಿದು ಸುತ್ತಾಡುತ್ತಿದ್ದಾರೆ. ಪ್ರಸ್ತುತ ಲಿವಿನ್ ರಿಲೇಷನ್ಶಿಪ್ನಲ್ಲಿರುವ ಈ ಜೊಡಿ ಶೀಘ್ರವೇ ಮದುವೆ ಆಗಲಿದೆ ಎಂದು ಹಾಲಿವುಡ್ ಪತ್ರಿಕೆಗಳು ವರದಿ ಮಾಡಿವೆ.
ಟಾಮ್ ಕ್ರೂಸ್, ತಮ್ಮ ಅತ್ಯದ್ಭುತ ಸಾಹಸ ದೃಶ್ಯಗಳಿಂದಾಗಿ ವಿಶ್ವ ವಿಖ್ಯಾತರು. ಅದರಲ್ಲೂ ಸ್ಟಂಟ್ಗಳನ್ನು ಯಾವುದೇ ಡ್ಯೂಪ್ ಇಲ್ಲದೇ ತಾವೇ ಮಾಡುತ್ತಾರೆ ಟಾಮ್ ಕ್ರೂಸ್. ಅದರಲ್ಲೂ ಅವರ ಜನಪ್ರಿಯ ‘ಮಿಷನ್ ಇಂಪಾಸಿಬಲ್’ ಸರಣಿಯಂತೂ ವಿಶ್ವ ಪ್ರಸಿದ್ಧ. ‘ಆಕ್ಷನ್ ಜಂಕಿ’ ಆಗಿರುವ ಟಾಮ್ ಕ್ರೂಸ್ ತಮ್ಮ ಮದುವೆಯನ್ನೂ ಸಹ ‘ಆಕ್ಷನ್’ ರೀತಿಯೇ ಆಗಲು ನಿಶ್ಚಯಿಸಿದ್ದು, ಅಂತರಿಕ್ಷದಲ್ಲಿ ಮದುವೆ ಆಗುವ ನಿರ್ಧಾರ ಮಾಡಿದ್ದಾರಂತೆ. ನಟಿ ಅನ್ನಾ ಡೆ ಅರ್ಮ್ಸ್ ಸಹ ಆಕ್ಷನ್ ಪ್ರಿಯೆ ಆಗಿದ್ದು, ‘ಜಾನ್ ವಿಕ್’ ಸೇರಿದಂತೆ ಇನ್ನೂ ಕೆಲವು ಆಕ್ಷನ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹಾಗಾಗಿ ಅನ್ನಾ ಸಹ ಅಂತರಿಕ್ಷದಲ್ಲಿ ಮದುವೆ ಆಗಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:‘ಬ್ಯಾಡ್ಸ್ ಆಫ್ ಬಾಲಿವುಡ್’ ಹಾಡು ಹಾಡಿದ ಅನಿರುದ್ಧ್ ರವಿಚಂದ್ರನ್
ಅಂದಹಾಗೆ ಟಾಮ್ ಕ್ರೂಸ್ ಅವರಿಗೆ ಇದು ನಾಲ್ಕನೇ ಮದುವೆ. 1987 ರಲ್ಲಿ ಅವರು ಆಗಿನ ಖ್ಯಾತ ನಟಿ ಮಿಮಿ ರೋಗ್ರಸ್ ಅವರನ್ನು ಮದುವೆ ಆದರು. ಆ ಬಳಿಕ 1990 ರಲ್ಲಿ ನಿಕೋಲ್ ಕಿಡ್ಮ್ಯಾನ್ ಅನ್ನು ವಿವಾಹವಾದರು. 2001 ರಲ್ಲಿ ನಿಕೋಲ್ಗೆ ವಿಚ್ಛೇದನ ನೀಡಿದರು. ಬಳಿಕ 2006 ರಲ್ಲಿ ಕೇಟಿ ಹೋಲ್ಮ್ಸ್ ಅವರನ್ನು ವಿವಾಹವಾದರು. ಈ ಜೋಡಿ 2012 ರಲ್ಲಿ ವಿಚ್ಛೇದನ ಪಡೆದುಕೊಂಡರು. ಈಗ ಮೂರನೇ ವಿಚ್ಛೇದನದ ಹದಿಮೂರು ವರ್ಷಗಳ ಬಳಿಕ ಮತ್ತೆ ಮದುವೆ ಆಗುವ ಮನಸ್ಸು ಮಾಡಿದ್ದಾರೆ. ಟಾಮ್ ಕ್ರೂಸ್ ಮತ್ತು ಅನ್ನಾ ನಡುವೆ ಬರೋಬ್ಬರಿ 30 ವರ್ಷದ ವಯಸ್ಸಿನ ಅಂತರವಿದೆ.
ಟಾಮ್ ಕ್ರೂಸ್ ಈಗ ಮದುವೆ ಆಗಲಿರುವ ಅನ್ನಾ ಸಹ ಜನಪ್ರಿಯ ನಟಿಯಾಗಿದ್ದು, ‘ಸೆಕ್ಸ್ ಪಾರ್ಟಿ, ಲೈಸ್’, ‘ವಾರ್ ಡಾಗ್ಸ್’, ‘ಬ್ಲೇಡ್ ರನ್ನರ್’, ‘ನೈವ್ಸ್ ಔಟ್’, ‘ಸೆರ್ಜಿಯೊ’, ಬಾಂಡ್ ಸಿನಿಮಾ ‘ನೋ ಟೈಮ್ ಟು ಡೈ’, ತಮಿಳು ನಟ ಧನುಶ್ ನಟಿಸಿದ್ದ ಹಾಲಿವುಡ್ ಸಿನಿಮಾ ‘ದಿ ಗ್ರೇ ಮ್ಯಾನ್’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ