
‘ಹೊಂಬಾಳೆ ಫಿಲ್ಮ್ಸ್’ (Hombale Films) ಚಿತ್ರರಂಗದಲ್ಲಿ ದೊಡ್ಡದೊಡ್ಡ ಹೆಜ್ಜೆಗಳನ್ನು ಇಟ್ಟು ಸಾಗುತ್ತಿದೆ. ‘ನಿನ್ನಿಂದಲೇ’ ಚಿತ್ರದ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದ ಈ ಸಂಸ್ಥೆ ಈಗ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಕನ್ನಡದ ನಿರ್ಮಾಣ ಸಂಸ್ಥೆಯೊಂದು ತೆಲುಗಿನ ಸ್ಟಾರ್ ನಟ ಪ್ರಭಾಸ್ (Prabhas) ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ಇದೇ ಮೊದಲು. ಇನ್ನು, ‘ಕೆಜಿಎಫ್ 2’ ಚಿತ್ರವನ್ನು (KGF Chapter 2) ವಿಶ್ವಮಟ್ಟದಲ್ಲಿ ದೊಡ್ಡದಾಗಿ ರಿಲೀಸ್ ಮಾಡುವ ಕೆಲಸವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡಿದೆ. ಇಷ್ಟು ಎತ್ತರಕ್ಕೆ ಬೆಳೆದು ನಿಂತಿರುವ ಹೊಂಬಾಳೆ ಫಿಲ್ಮ್ಸ್’ ಈಗ ಮತ್ತೊಂದು ದೊಡ್ಡ ಹೆಜ್ಜೆ ಇಡುತ್ತಿದೆ. ಈ ಬಗ್ಗೆ ಭಾನುವಾರ (ಏಪ್ರಿಲ್ 10) 11:45ಕ್ಕೆ ಘೋಷಣೆ ಮಾಡುವುದಾಗಿ ಸಂಸ್ಥೆ ತಿಳಿಸಿದೆ.
ವಿಜಯ್ ಕಿರಗಂದೂರು ಅವರು ‘ಹೊಂಬಾಳೆ ಫಿಲ್ಮ್ಸ್’ ಹುಟ್ಟು ಹಾಕಿದರು. 2014ರಲ್ಲಿ ತೆರೆಗೆ ಬಂದ ‘ನಿನ್ನಿಂದಲೇ’ ಈ ಸಂಸ್ಥೆಯ ಮೊದಲ ಸಿನಿಮಾ. ಇದಾದ ನಂತರ 2015ರಲ್ಲಿ ಅವರ ನಿರ್ಮಾಣದ ‘ಮಾಸ್ಟರ್ಪೀಸ್’ ತೆರೆಗೆ ಬಂತು. 2017ರಲ್ಲಿ ‘ರಾಜಕುಮಾರ’ ಸಿನಿಮಾ ರಿಲೀಸ್ ಆಯಿತು. ‘ಕೆಜಿಎಫ್: ಚಾಪ್ಟರ್ 1’ ನಿರ್ಮಾಣ ಮಾಡಿ 2018ರಲ್ಲಿ ಅದನ್ನು ರಿಲೀಸ್ ಮಾಡಿತು ಹೊಂಬಾಳೆ ಫಿಲ್ಮ್ಸ್. ಈ ಸಿನಿಮಾ ದೊಡ್ಡ ಯಶಸ್ಸು ಪಡೆಯಿತು. ಆ ಬಳಿಕ ‘ಯುವರತ್ನ’ ಸಿನಿಮಾ ರಿಲೀಸ್ ಆಯಿತು. ಈಗ ‘ಕೆಜಿಎಫ್ 2’ ತೆರೆಗೆ ಬರೋಕೆ ರೆಡಿ ಆಗಿದೆ. ಇವುಗಳ ಬೆನ್ನಲ್ಲೇ ‘ಹೊಂಬಾಳೆ ಫಿಲ್ಮ್ಸ್’ ಹೊಸ ಘೋಷಣೆ ಮಾಡೋಕೆ ರೆಡಿ ಆಗಿದೆ
‘ಎರಡು ದೊಡ್ಡ ಕನಸುಗಳ ಸಮ್ಮಿಲನ. ಮನರಂಜನೆಯ ಹೊಸ ಯುಗಕ್ಕೆ ನಾಂದಿ’ ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದ್ದು, ಈ ಬಗ್ಗೆ ಭಾನುವಾರ ಬೆಳಗ್ಗೆ 11:15ಕ್ಕೆ ಘೋಷಣೆ ಆಗಲಿದೆ. ವಿಶೇಷ ಎಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಇದೇ ಮಾದರಿಯ ಘೋಷಣೆ ಮಾಡಿದೆ. ‘ಎರಡು ಕನಸುಗಳ ಸಮ್ಮಿಲನ’ ಎನ್ನುವ ಕ್ಯಾಪ್ಶನ್ ನೀಡಿ, ಭಾನುವಾರ ಬೆಳಗ್ಗೆ 11:15ಕ್ಕೆ ಘೋಷಣೆ ಎಂದು ಹೇಳಿದೆ. ಇದರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
‘ಕೆಜಿಎಫ್ 2’ ರಿಲೀಸ್ ದಿನಾಂಕ ಹತ್ತಿರವಾಗಿದೆ. ಹೀಗಾಗಿ, ಸಿನಿಮಾ ಪ್ರಚಾರಕ್ಕೆ ನಿರ್ಮಾಣ ಸಂಸ್ಥೆ ಈ ರೀತಿಯ ಪ್ಲ್ಯಾನ್ ರೂಪಿಸಿರಬಹುದು ಎಂಬುದು ಕೆಲವರ ಊಹೆ. ಆದರೆ, ಭಾನುವಾರ ಆಗುತ್ತಿರುವ ಘೋಷಣೆ ಸಿನಿಮಾಗೆ ಸಂಬಂಧಿಸಿದ್ದಲ್ಲ, ಬದಲಿಗೆ ಇಡೀ ಇಂಡಸ್ಟ್ರಿಗೆ ಸಂಬಂಧಿಸಿದ್ದು ಎನ್ನುತ್ತಿವೆ ಮೂಲಗಳು. ಈ ಎಲ್ಲಾ ಕುತೂಹಲಕ್ಕೆ ಭಾನುವಾರ ತೆರೆ ಬೀಳಲಿದೆ.
ಇದನ್ನೂ ಓದಿ: ಭಾನುವಾರದಿಂದ ಕರ್ನಾಟಕದಲ್ಲಿ ‘ಕೆಜಿಎಫ್ ಚಾಪ್ಟರ್ 2’ ಟಿಕೆಟ್ ಬುಕಿಂಗ್ ಓಪನ್; ಎಷ್ಟು ಗಂಟೆಗೆ ಶೋ ಶುರು?
ಪುನೀತ್ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್ಕುಮಾರ್? ‘ಹೊಂಬಾಳೆ ಫಿಲ್ಮ್ಸ್’ ಬಗ್ಗೆ ಹಬ್ಬಿದೆ ಗುಸುಗುಸು
Published On - 5:59 pm, Sat, 9 April 22