ಪುನೀತ್​ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್​ಕುಮಾರ್​? ‘ಹೊಂಬಾಳೆ ಫಿಲ್ಮ್ಸ್​’ ಬಗ್ಗೆ ಹಬ್ಬಿದೆ ಗುಸುಗುಸು

ಪುನೀತ್​ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್​ಕುಮಾರ್​? ‘ಹೊಂಬಾಳೆ ಫಿಲ್ಮ್ಸ್​’ ಬಗ್ಗೆ ಹಬ್ಬಿದೆ ಗುಸುಗುಸು
ಪುನೀತ್​ ರಾಜ್​ಕುಮಾರ್​, ಯುವ ರಾಜ್​ಕುಮಾರ್​, ಸಂತೋಷ್​ ಆನಂದ್​ರಾಮ್​

Yuva Rajkumar | Santhosh Ananddram: ಸಂತೋಷ್​ ಆನಂದ್​ರಾಮ್​ ಅವರ ಮುಂದಿನ ಪ್ರಾಜೆಕ್ಟ್​ ಬಗ್ಗೆ ಗಾಂಧಿನಗರದಲ್ಲಿ ಗುಸುಗುಸು ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

TV9kannada Web Team

| Edited By: Madan Kumar

Apr 06, 2022 | 10:17 AM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರಿಗೆ ಸರಿಸಾಟಿ ಆಗಬಲ್ಲಂತಹ ಬೇರೊಬ್ಬ ನಟ ಇಲ್ಲ. ಚಿತ್ರರಂಗದಲ್ಲಿ ಇನ್ನೂ ಅನೇಕ ಸಾಧನೆಗಳನ್ನು ಮಾಡಬೇಕಾಗಿದ್ದ ಅವರು ಅಕಾಲಿಕ ಮರಣ ಹೊಂದಿದ್ದು ತೀವ್ರ ನೋವಿನ ಸಂಗತಿ. 2021ರ ಅ.29ರಂದು ಪುನೀತ್​ ರಾಜ್​ಕುಮಾರ್​ ಅವರು ಹೃದಯಾಘಾತದಿಂದ ನಿಧನರಾದರು. ಆಗ ಅವರ ಕೆಲವು ಸಿನಿಮಾಗಳು ಮಾತುಕಥೆಯ ಹಂತದಲ್ಲಿ ಇದ್ದವು. ಅಂತ ಅನೇಕ ಪ್ರಾಜೆಕ್ಟ್​​ಗಳು ಅರ್ಧಕ್ಕೆ ನಿಲ್ಲುವಂತಾಯಿತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ. ನಿರ್ದೇಶಕ ಸಂತೋಷ್​ ಆನಂದ್​ ರಾಮ್​ (Santhosh Ananddram) ಜೊತೆ ಪುನೀತ್​ ರಾಜ್​ಕುಮಾರ್​ ಅವರು ಇನ್ನೊಂದು ಹೊಸ ಸಿನಿಮಾ ಮಾಡಬೇಕಿತ್ತು. ಆದರೆ ಆ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದರು. ಅಪ್ಪು ಮಾಡಬೇಕಿದ್ದ ಆ ಸಿನಿಮಾ ಬಗ್ಗೆ ಈಗ ಹೊಸ ಮಾಹಿತಿ ಹರಿದಾಡುತ್ತಿದೆ. ಅದೇ ಕಥೆಯನ್ನು ಇಟ್ಟುಕೊಂಡು ಯುವ ರಾಜ್​ಕುಮಾರ್​ (Yuva Rajkumar) ಅವರಿಗೆ ಸಂತೋಷ್​ ಆನಂದ್​ ರಾಮ್​ ಆ್ಯಕ್ಷನ್​-ಕಟ್​ ಹೇಳುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಪುನೀತ್ ರಾಜ್​ಕುಮಾರ್​ ಮತ್ತು ಸಂತೋಷ್​ ಆನಂದ್ ರಾಮ್​ ಅವರು ಕಾಂಬಿನೇಷನ್​ನಲ್ಲಿ ‘ರಾಜಕುಮಾರ’ ಮತ್ತು ‘ಯುವರತ್ನ’ ಸಿನಿಮಾ ಮೂಡಿಬಂದಿದ್ದವು. ಆ ಎರಡೂ ಸಿನಿಮಾಗಳಿಗೆ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿತ್ತು. ಅದೇ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಬೇಕಿತ್ತು. ಅದು ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ ಆಗಿರಲಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿತ್ತು. ಇನ್ನೇನು ಆ ಚಿತ್ರ ಸೆಟ್ಟೇರಬೇಕು ಅನ್ನೋದಕ್ಕೂ ಮುನ್ನವೇ ಪುನೀತ್ ರಾಜ್​ಕುಮಾರ್​ ನಿಧನರಾದರು. ಹಾಗಾದರೆ ಮುಂದೇನು ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡಿತ್ತು.

ಪುನೀತ್​ ರಾಜ್​ಕುಮಾರ್​ ಅವರಿಗಾಗಿ ಸಿದ್ಧಪಡಿಸಿದ್ದ ಕಥೆಯನ್ನು ಸ್ವಲ್ಪ ಬದಲಾವಣೆ ಮಾಡಿ, ಆ ಚಿತ್ರಕ್ಕೆ ಯುವ ರಾಜ್​ಕುಮಾರ್​ ಅವರನ್ನು ಹೀರೋ ಆಗಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ರಾಘವೇಂದ್ರ ರಾಜ್​ಕುಮಾರ್​ ಅವರ ಎರಡನೇ ಪುತ್ರನಾದ ಯುವ ರಾಜ್​ಕುಮಾರ್​ ಅವರು ಈ ಸಿನಿಮಾದಲ್ಲಿ ನಟಿಸಿದರೆ ಸೂಕ್ತ ಎಂಬ ಅಭಿಪ್ರಾಯ ಅಪ್ಪು ಅಭಿಮಾನಿಗಳ ವಲಯದಲ್ಲೂ ಕೇಳಿಬಂದಿದೆ. ಹಾಗಾಗಿ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ದಟ್ಟವಾಗಿದೆ. ಆ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ನಿರ್ಮಾಣ ಮಾಡಲಿದೆ ಎನ್ನಲಾಗುತ್ತಿದೆ.

ಈ ಬೆಳವಣಿಗೆಗಳ ಕುರಿತಂತೆ ಸಂತೋಷ್​ ಆನಂದ್​ ರಾಮ್​ ಅವರಾಗಲಿ, ಯುವ ರಾಜ್​ಕುಮಾರ್​ ಅವರಾಗಲಿ ಅಥವಾ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯವರಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸದ್ಯಕ್ಕಂತೂ ಇದು ಗಾಂಧಿನಗರದ ಗುಸುಗುಸು ಸುದ್ದಿ ಮಾತ್ರ. ಶೀಘ್ರದಲ್ಲೇ ಈ ಬಗ್ಗೆ ಸೂಕ್ತ ಘೋಷಣೆ ಆದರೆ ಅಭಿಮಾನಿಗಳು ಖುಷಿ ಪಡಲಿದ್ದಾರೆ.

ಏ.24ರಂದು ಡಾ. ರಾಜ್​ಕುಮಾರ್​ ಜನ್ಮದಿನ. ಆ ಪ್ರಯಕ್ತ ಹೊಸ ಹೊಸ ಸಿನಿಮಾಗಳು ಅನೌನ್ಸ್​ ಆಗುತ್ತವೆ. ಅದೇ ಸಂದರ್ಭದಲ್ಲೇ ಸಂತೋಷ್​ ಆನಂದ್​ರಾಮ್​ ಮತ್ತು ಯುವ ರಾಜ್​ಕುಮಾರ್​ ಕಾಂಬಿನೇಷನ್​ನ ಚಿತ್ರದ ಬಗ್ಗೆ ಅಧಿಕೃತವಾಗಿ ಬ್ರೇಕಿಂಗ್​ ನ್ಯೂಸ್​ ಸಿಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಎಲ್ಲವೂ ಪ್ಲ್ಯಾನ್​ ಪ್ರಕಾರವೇ ನಡೆದಿದ್ದರೆ ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ‘ಯುವ ರಣಧೀರ ಕಂಠೀರವ’ ಚಿತ್ರ ಸಿದ್ಧವಾಗಿರಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ಕೆಲಸಗಳು ವಿಳಂಬ ಆಗಿವೆ. ಇನ್ನು ನಿರ್ದೇಶಕ ಪವನ್​ ಕುಮಾರ್​ ಅವರ ಜೊತೆ ಪುನೀತ್​ ರಾಜ್​ಕುಮಾರ್​ ಅವರು ಅನೌನ್ಸ್​ ಮಾಡಿದ್ದ ‘ದ್ವಿತ್ವ’ ಸಿನಿಮಾ ಏನಾಗಲಿದೆ ಎಂಬ ಕೌತುಕ ಕೂಡ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್​ ಫೋಟೋ ಹಿಡಿದು ಕೆಂಡ ಹಾಯ್ದ ಅಭಿಮಾನಿ; ಎಲ್ಲೆಲ್ಲೂ ಅಪ್ಪು ಸ್ಮರಣೆ

ಶಾಲೆಯ ಪರೀಕ್ಷೆಯಲ್ಲಿ ಪುನೀತ್​ ಬಗ್ಗೆ ಪ್ರಶ್ನೆ; ಸಖತ್​ ವೈರಲ್​ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ

Follow us on

Related Stories

Most Read Stories

Click on your DTH Provider to Add TV9 Kannada