ಹೊಂಬಾಳೆ ಫಿಲ್ಮ್ಸ್ ಮತ್ತೆ ತನ್ನ ಪೋಸ್ಟರ್ ಮೂಲಕ ರಾಷ್ಟ್ರಾದ್ಯಂತ ಕುತೂಹಲವನ್ನು ಕೆರಳಿಸಿದೆ. ಈಗಾಗಲೇ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣದ ತಯಾರಿಯಲ್ಲಿ ತೊಡಗಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಫ್ಯಾನ್ಸ್ಗಳಿಗೆ ಭರ್ಜರಿ ನ್ಯೂಸ್ ಅನ್ನು ನೀಡಿದೆ. ತನ್ನ ನಿರ್ಮಾಣದ ಹತ್ತನೇ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ ಹೊಂಬಾಳೆ ಫಿಲ್ಮ್ಸ್, ಚಿತ್ರದ ಟೈಟಲ್ ಅನ್ನು ಜುಲೈ11ರಂದು ಮಧ್ಯಾಹ್ನ 12.51 ಕ್ಕೆ ಬಿಡುಗಡೆ ಮಾಡಲಾಗುವುದು ಎಂಬ ಸುದ್ದಿಯನ್ನು ನೀಡಿದೆ.
ಚಿತ್ರದಲ್ಲಿ ಏನಿರಬಹುದೆಂದು ಸುಳಿವು ನೀಡಿದ ಪೋಸ್ಟರ್:
‘(ಸಮುದ್ರದ) ಉಬ್ಬರವಿಳಿತವು ದೇಹವನ್ನು ಮರಳಿ ಹೊತ್ತು ತಂದಾಗ, ಇಡಿಯ ತೀರವೇ ರಕ್ತಮಯವಾಗುತ್ತದೆ’ ಎಂಬರ್ಥದಲ್ಲಿ ‘When tgetide brings back the DEAD, the shores bleed RED’ ಎಂದು ಚಿತ್ರಕ್ಕೆ ಅಡಿಬರಹವನ್ನು ನೀಡಲಾಗಿದೆ. ಚಿತ್ರದಲ್ಲಿ ದಡಕ್ಕೆ ಬಡಿಯುತ್ತಿರುವ ಸಮುದ್ರದ ಅಲೆಗಳು, ಕೆಂಪಾದ ಬಂಡೆ ಹಾಗೂ ಮರಳಿನ ಮೇಲೆ ನಡೆದು ಹೋದ ಒಬ್ಬ ಮನುಷ್ಯನ ರಕ್ತಸಿಕ್ತ ಹೆಜ್ಜೆ ಗುರುತುಗಳನ್ನು ಪೋಸ್ಟರ್ನಲ್ಲಿ ಕಾಣಬಹುದು. ಇದನ್ನು ಗಮನಿಸಿದಾಗ ಚಿತ್ರವು ಮತ್ತೊಂದು ಬೃಹತ್ ಮಾಸ್ ಚಿತ್ರವಾಗಲಿದೆ ಎಂಬ ಸೂಚನೆಯಂತೂ ಸಿಗುತ್ತದೆ. ಕತೆಯು ಸಮುದ್ರದಲ್ಲಿ ನಡೆಯಲಿದೆಯೇ ಎಂಬ ಕುತೂಹಲವನ್ನೂ ಚಿತ್ರದ ಪೋಸ್ಟರ್ ಹಾಗೂ ಚಿತ್ರದ ಅಡಿ ಬರಹವು ಮೂಡಿಸುತ್ತಿದೆ. ಹಾಗೆಯೇ ಈ ಚಿತ್ರವು ಪ್ಯಾನ್ ಇಂಡಿಯಾ ಚಿತ್ರವೇ ಎಂಬ ಚರ್ಚೆಯೂ ಆರಂಭವಾಗಿದೆ. ಅದು ನಿಜವಾಗಿದ್ದಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆಯಂತೂ ಖಂಡಿತ.
When the tide brings back the dead, the shores bleed red.
Catch the Glimpse of #Hombale10 on July 11th at 12:51 PM.
@hombalefilms @VKiragandur @HombaleGroupSubscribe and Stay Tuned: https://t.co/QxtFZcv8dy pic.twitter.com/1y06JbBwK9
— Hombale Films (@hombalefilms) July 8, 2021
ಈಗಾಗಲೇ ಹೊಂಬಾಳೆಯ ಫಿಲ್ಮ್ಸ್ನ ಈ ಚಿತ್ರಕ್ಕೆ ಯಾವ ನಿರ್ದೇಶಕ, ನಟ ಜೋಡಿ ಒಂದಾಗಲಿದೆ ಎಂಬ ಚರ್ಚೆಯು ಗಾಂಧಿನಗರದ ಪಡಸಾಲೆಯಲ್ಲಿ ಪ್ರಾರಂಭವಾಗಿದೆ. ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಕೆಜಿಎಫ್ ಚಾಪ್ಟರ್ 2 ಹಾಗೂ ಸಲಾರ್ ಚಿತ್ರಗಳು ನಿರ್ಮಾಣವಾಗುತ್ತಿವೆ. ಎರಡನ್ನೂ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಶ್ರೀಮುರುಳಿ ಮುಖ್ಯಭೂಮಿಕೆಯಲ್ಲಿ ಭಗೀರ ಚಿತ್ರವನ್ನೂ ಹೊಂಬಾಳೆ ಪ್ರಕಟಿಸಿದೆ. ಕಳೆದ ವಾರವಷ್ಟೇ ಲೂಸಿಯಾ ಪವನ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ದ್ವಿತ್ವ ಚಿತ್ರವನ್ನು ಅನೌನ್ಸ್ ಮಾಡಲಾಗಿತ್ತು. ಅದು ಹೊಂಬಾಳೆ ನಿರ್ಮಾಣದ ಒಂಬತ್ತನೇ ಚಿತ್ರವಾಗಲಿದೆ. ಈಗ ಹತ್ತನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಹತ್ತನೇ ಚಿತ್ರಕ್ಕೆ ಹೊಂಬಾಳೆಯೊಂದಿಗೆ ಯಾರ ಕಾಂಬಿನೇಷನ್ ಸೆಟ್ಟೇರಬಹುದು?
ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ಜನ್ಮದಿನದಂದು ನಿರ್ಮಾಪಕ ವಿಜಯ್ ಕಿರಗಂದೂರು ಹಂಚಿಕೊಂಡ ಚಿತ್ರ ಎಲ್ಲರ ಗಮನಸೆಳೆದಿತ್ತು. ಈಗ ಹೊಸ ಚಿತ್ರಕ್ಕೆ ಇವರೀರ್ವರು ಕೈಜೋಡಿಸಲಿದ್ದಾರಾ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಖಾಸಗಿ ಚಾನೆಲ್ ಹಾಗೂ ರಕ್ಷಿತ್ ಶೆಟ್ಟಿ ನಡುವಿನ ವಿವಾದದಲ್ಲಿ ರಕ್ಚಿತ್ ಅವರು ಜುಲೈ ಹನ್ನೊಂದಕ್ಕೆ ಉತ್ತರ ನೀಡುವುದಾಗಿ ತಿಳಿಸಿದ್ದರು. ಅದೇ ಇರಬಹುದಾ ಇದು ಎಂಬ ಅನುಮಾನವೂ ಅಭಿಮಾನಿಗಳಲ್ಲಿ ಮೂಡುತ್ತಿದೆ. ಇದಲ್ಲದೇ ಉಳಿದವರು ಕಂಡಂತೆ ಚಿತ್ರದ ಸಮುದ್ರದ ನೆನಪು ಇನ್ನೂ ಯಾವ ಅಭಿಮಾನಿಯೂ ಮರೆತಿಲ್ಲ. ಹಾಗಿರುವಾಗ ಸಮುದ್ರದ ಭೂಮಿಕೆಯಲ್ಲಿ ಹೊಸ ಚಿತ್ರ ಈ ಈರ್ವರ ಕಾಂಬಿನೇಷನ್ನಲ್ಲಿ ಬರಬಹುದೇ ಎಂಬ ನಿರೀಕ್ಷೆ ಅಭಿಮಾನಿಗಳಿಗಿದೆ.
ಇದಲ್ಲದೇ ಮುಖ್ಯವಾಗಿ ಕೇಳಿಬರುತ್ತಿರುವ ಮತ್ತೊಂದು ಹೆಸರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಜುಲೈ ಹನ್ನೆರಡಕ್ಕೆ ಶಿವಣ್ಣನ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಅಭಿಮಾನಿಗಳಿಗೆ ಏನಾದರು ಸಿಹಿಸುದ್ದಿ ನೀಡಲಿದೆಯೇ ಎಂಬ ಚರ್ಚೆಯೂ ಪ್ರಾರಂಭವಾಗಿದೆ. ಹಾಗೆಯೇ ಪುನೀತ್ ರಾಜ್ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ರಾಮ್ ಮತ್ತೆಒಂದಾಗಿ ಚಿತ್ರ ಮಾಡುವುದನ್ನು ತಿಳಿಸಿದ್ದರು. ಅದೇ ಚಿತ್ರ ಇದಾಗಿರಬಹುದು ಎಂಬ ಅನುಮಾನವೂ ಅಭಿಮಾನಿಗಳಲ್ಲಿದೆ. ಸೂರರೈ ಪೊಟ್ರು ಚಿತ್ರದ ನಿರ್ದೇಶಕಿ ಸುಧಾ ಕೊಂಗರಾ ಅವರೊಂದಿಗೆ ಅಥವಾ ನಟ ಯಶ್ ಅವರೊಂದಿಗೆ ಹೊಸ ಚಿತ್ರ ನಿರ್ಮಾಣದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಅಭಿಮಾನಿಗಳ ಚರ್ಚೆ ಆರಂಭವಾಗಿದೆ. ಹತ್ತನೇ ಚಿತ್ರಕ್ಕೆ ಯಾರು ನಾಯಕರಾಗಬಹುದು? ಚಿತ್ರದ ಗಾತ್ರ ಹೇಗಿರಬಹುದು ಮೊದಲಾದ ಅನಿಸಿಕೆಗಳನ್ನು ಈಗಾಗಲೇ ಹಂಚಿಕೊಳ್ಳುತ್ತಿದ್ದಾರೆ. ಏನೇ ಆದರೂ ಹೊಂಬಾಳೆಯ ಈ ವಿಶೇಷ ಸರ್ಪ್ರೈಸ್ಗಾಗಿ ಜುಲೈ 11ರ ಮಧ್ಯಾಹ್ನ 12.51ರವರೆಗೆ ಅಭಿಮಾನಿಗಳು ಕಾಯಲೇ ಬೇಕು!
(Hombale films announces its tenth film title will launch on july 11th afternoon twelve fifty one pm)
Published On - 1:01 pm, Thu, 8 July 21