
ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಭಾರತದಲ್ಲಿ ಸಿನಿಮಾ ಹಂಚಿಕೆ ಮಾಡುವುದರ ಜೊತೆಗೆ ವಿದೇಶಿ ಹಂಚಿಕೆಯ ಜವಾಬ್ದಾರಿಯನ್ನು ಪಡೆದುಕೊಂಡಿದೆ. ಈಗ ಭಕ್ತಿಪ್ರಧಾನ ಸಿನಿಮಾ ‘ಹನುಮಾನ್ ಅಂಶ್’ ಚಿತ್ರದ ವಿದೇಶಿ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಭಾರತದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಸೆಪ್ಟೆಂಬರ್ 11ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ರಿಲೀಸ್ ಆಗಲಿದೆ.
ವಿಶಾಲ್ ಚತುರ್ವೇದಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹನುಮಾನ್ ಅಂಶ್’, ಹನುಮಂತನ ಅವತಾರವೆಂದೇ ಕೋಟ್ಯಂತರ ಭಕ್ತರಿಂದ ಪೂಜಿಸಲ್ಪಡುವ ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ (ಮಹಾರಾಜ್-ಜೀ) ಅವರ ಜೀವನ ಆಧಾರಿತ ಸಿನಿಮಾವಾಗಿದೆ. ಪ್ರೀತಿ, ಭಕ್ತಿ, ಸೇವೆ ಮತ್ತು ಆಧ್ಯಾತ್ಮಿಕತೆಯ ಸಂದೇಶ ಸಾರಿದ ಅವರ ಪ್ರಭಾವ ಜಗತ್ತಿನಾದ್ಯಂತ ಹರಡಿದೆ.
ಇದನ್ನೂ ಓದಿ: ‘ಹನುಮಾನ್ ಅಂಶ್’ ಮೆಚ್ಚಿದ ಕಂಗನಾ: ಆದರೆ ಚಿತ್ರತಂಡಕ್ಕೆ ಪ್ರೇಮಾನಂದ್ ಮಹಾರಾಜ್ ಎಚ್ಚರಿಕೆ
ಭಾರತೀಯ ಚಿತ್ರಮಂದಿರಗಳಲ್ಲಿ ಕೇವಲ 10 ಲಕ್ಷದ ಆರಂಭಿಕ ಗಳಿಕೆ ಕಂಡಿದ್ದ ಈ ಚಿತ್ರ, ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆಯಿಂದಾಗಿ 26ನೇ ದಿನದ ವೇಳೆಗೆ ಬರೋಬ್ಬರಿ 63.82 ಕೋಟಿ ರೂಪಾಯಿಗೂ ಅಧಿಕ ಬಾಕ್ಸ್ ಆಫೀಸ್ ಗಳಿಕೆ ಮಾಡಿ ದಾಖಲೆ ಬರೆದಿದೆ. ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್, ಜೂಲಿಯಾ ರಾಬರ್ಟ್ಸ್, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸೇರಿದಂತೆ ಹಲವು ಜಾಗತಿಕ ಗಣ್ಯರು ಮಹಾರಾಜ್-ಜೀ ಅವರ ಕೈಂಚಿ ಧಾಮ್‌ಗೆ ಭೇಟಿ ನೀಡಿ ಆಧ್ಯಾತ್ಮಿಕ ಪ್ರೇರಣೆ ಪಡೆದಿದ್ದರು. ಇದೀಗ ಕೈಂಚಿ ಧಾಮ್‌ನಿಂದ ಜಗತ್ತಿನಾದ್ಯಂತ ಮಹಾರಾಜ್-ಜೀ ಅವರ ಮಹಿಮೆ ತಲುಪಿಸಲು ಹೊಂಬಾಳೆ ಫಿಲ್ಮ್ಸ್ ಸಜ್ಜಾಗಿದೆ.
ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಮಹಾರಾಜ್ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಂತರ ಜೀವನ ಆಧಾರಿತ ಸಿನಿಮಾಗಳು ಕೇವಲ ಮನರಂಜನೆಯ ಮಾಧ್ಯಮವಾಗಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ಸಿನಿಮಾಗಳು ಪ್ರೇಕ್ಷಕರಲ್ಲಿ ಭಕ್ತಿ, ವೈರಾಗ್ಯ ಹಾಗೂ ಜ್ಞಾನದ ದೀವಿಗೆಯನ್ನು ಬೆಳಗಿಸುವಂತಿರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಸಿನಿಮೀಯ ಸೃಜನಶೀಲತೆ ಅಥವಾ ಕಮರ್ಷಿಯಲ್ ಯಶಸ್ಸಿನ ನೆಪದಲ್ಲಿ ಮಹಾತ್ಮರ ನೈಜ ಜೀವನದ ಘಟನೆಗಳನ್ನು ತಿದ್ದುವುದು ಮತ್ತು ಕಾಲ್ಪನಿಕ ದೃಶ್ಯಗಳನ್ನು ತುರುಕುವುದು ತೀರಾ ತಪ್ಪು. ಸಂತರ ಪವಿತ್ರ ಚರಿತ್ರೆಗೆ ಕುಂದು ತರುವಂತಹ ಯಾವುದೇ ಪ್ರಯತ್ನವೂ ಮಹಾಪರಾಧಕ್ಕೆ ಸಮಾನ ಎಂದು ಪ್ರೇಮಾನಂದ್ ಮಹಾರಾಜ್ ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.