ಬಾಲಿವುಡ್ನ ಖ್ಯಾತ ನಟ ಇರ್ಫಾನ್ ಅವರು ಇಲ್ಲ ಎಂಬುದನ್ನು ಅವರ ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಸಿನಿಮಾಗಳಲ್ಲೂ ಮಿಂಚಿದ್ದ ಇರ್ಫಾನ್ ಖಾನ್ ನಿಧನರಾಗಿ ಇಂದಿಗೆ ಒಂದು ವರ್ಷ ಕಳೆದಿದೆ. 2020ರ ಏ.29ರಂದು ಅವರು ನಿಧನರಾದ ಸುದ್ದಿ ಕೇಳಿ ಇಡೀ ಭಾರತೀಯ ಚಿತ್ರರಂಗಕ್ಕೆ ಶಾಕ್ ಆಗಿತ್ತು. ಅವರ ಅಗಲಿಕೆಯಿಂದ ಆದ ನಷ್ಟವನ್ನು ಯಾರೂ ತುಂಬಲು ಸಾಧ್ಯವಿಲ್ಲ.
ಕ್ಯಾನ್ಸರ್ಗೆ ತುತ್ತಾಗಿದ್ದ ಇರ್ಫಾನ್ ಖಾನ್ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಪ್ರಾರ್ಥನೆ ಆಗಿತ್ತು. ಆದರೆ ಆ ಪ್ರಾರ್ಥನೆಗಳು ಫಲಿಸಲಿಲ್ಲ. ಇರ್ಫಾನ್ ನಿಧನರಾಗುವುದಕ್ಕೂ ಕೇವಲ 4 ದಿನ ಮುನ್ನ ಅವರ ತಾಯಿ ಸಯೀದಾ ಬೇಗಂ ಜೈಪುರದಲ್ಲಿ ಸಾವನ್ನಪ್ಪಿದ್ದರು. ತಾಯಿ ಮೃತರಾದ ಸುದ್ದಿ ಕೇಳಿದ ಅವರು ಸಂಪೂರ್ಣ ಕುಸಿದುಹೋಗಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಇರ್ಫಾನ್ ಅವರನ್ನು ಮಗ ಬಬಿಲ್ ಮತ್ತು ಇರ್ಫಾನ್ ಪತ್ನಿ ಸುತಾಪ ಸಿಕ್ದರ್ ನೋಡಿಕೊಳ್ಳುತ್ತಿದ್ದರು.
ತಾನು ಇನ್ನೇನು ಕೆಲವೇ ದಿನಗಳಲ್ಲಿ ಸಾಯುತ್ತೇನೆ ಎಂಬುದು ಇರ್ಫಾನ್ ಖಾನ್ಗೆ ಮೊದಲೇ ತಿಳಿದಂತಿತ್ತು. ಅದನ್ನು ಮಗನ ಬಳಿ ಅವರು ಹೇಳಿಕೊಂಡಿದ್ದರಂತೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಬಬಿಲ್ ಅದರ ಬಗ್ಗೆ ವಿವರಣೆ ನೀಡಿದ್ದಾರೆ. ‘ಅವರು ಸಾಯುವುದಕ್ಕೂ 2-3 ದಿನ ಮುಂಚೆ ನಾನು ಆಸ್ಪತ್ರೆಯಲ್ಲಿದ್ದೆ. ಅವರಿಗೆ ಪ್ರಜ್ಞೆ ಕಳೆದುಹೋಗುತ್ತಿತ್ತು. ಆ ದಿನ ನನ್ನ ಕಡೆಗೆ ನೋಡಿದರು. ಸುಮ್ಮನೆ ನಕ್ಕು ‘ನಾನು ಸಾಯುತ್ತಿದ್ದೇನೆ’ ಎಂದು ಹೇಳಿದರು. ಇಲ್ಲ, ನೀವು ಸಾಯುವುದಿಲ್ಲ ಅಂತ ನಾನು ಹೇಳಿದೆ. ಮತ್ತೆ ನಕ್ಕು, ನಿದ್ರೆ ಮಾಡಿದರು. ಅದು ಅವರು ಆಡಿದ ಕೊನೆ ಮಾತು’ ಎಂದು ಬಬಿಲ್ ಹೇಳಿದ್ದಾರೆ.
‘ಇರ್ಫಾನ್ ಯಾವತ್ತೂ ನಾಟಕ ಮಾಡುತ್ತಿರಲಿಲ್ಲ. ನಿಮ್ಮನ್ನು ಪ್ರೀತಿಸುತ್ತಿದ್ದರೆ ಅಥವಾ ನಿಮ್ಮ ಮೇಲೆ ಸಿಟ್ಟು ಮಾಡಿಕೊಂಡಿದ್ದರೆ ಅದನ್ನು ನೇರವಾಗಿ ಹೇಳುತ್ತಿದ್ದರು. ಸುಮ್ಮನೇ ಏನನ್ನೂ ಹೇಳುತ್ತಿರಲಿಲ್ಲ’ ಎಂದು ಅಗಲಿದ ಪತಿಯನ್ನು ನೆನಪಿಸಿಕೊಳ್ಳುತ್ತಾರೆ ಸುತಾಪಾ ಸಿಕ್ದರ್. ಇರ್ಫಾನ್ ಖಾನ್ ಅವರ ಪುತ್ರ ಬಬಿಲ್ ವೆಬ್ ಸಿರೀಸ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆ. ಆ ವೆಬ್ ಸರಣಿಗೆ ನಟಿ ಅನುಷ್ಕಾ ಶರ್ಮಾ ಬಂಡವಾಳ ಹೂಡುತ್ತಿದ್ದಾರೆ.
ಇದನ್ನೂ ಓದಿ: ತಂದೆಯ ಬಟ್ಟೆಯನ್ನೇ ತೊಟ್ಟು ಫಿಲ್ಮ್ ಫೇರ್ ಸ್ವೀಕರಿಸಿದ ಇರ್ಫಾನ್ ಖಾನ್ ಪುತ್ರ
ನಟ ಇರ್ಫಾನ್ ಖಾನ್ ಮತ್ತು ರಂಗಕರ್ಮಿ ಪ್ರಸನ್ನ ಒಡನಾಟದ ಇಣುಕು ನೋಟ..!