ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಸಿದವರಿಗೆ ಸೋನು ನಿಗಮ್ ಛೀಮಾರಿ? ಅಸಲಿಯತ್ತು ಏನು?

|

Updated on: Jun 06, 2024 | 10:55 AM

ಸೋನು ನಿಗಮ್ ಅವರು ಅಯೋಧ್ಯೆ ಜನರಿಗೆ ಛೀಮಾರಿ ಹಾಕಿದ್ದಾರೆ ಎನ್ನಲಾಗಿತ್ತು. ಈ ವಿಚಾರದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ಆ ರೀತಿ ಹೇಳಿಯೇ ಇಲ್ಲ. ಈ ಕಾರಣದಿಂದಲೇ ನಾನು ಸೋಶಿಯಲ್ ಮೀಡಿಯಾವನ್ನು ಏಳು ವರ್ಷದ ಹಿಂದೆ ತೊರೆದೆ’ ಎಂದಿದ್ದಾರೆ ಸೋನು.  

ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಸಿದವರಿಗೆ ಸೋನು ನಿಗಮ್ ಛೀಮಾರಿ? ಅಸಲಿಯತ್ತು ಏನು?
ಸೋನು ನಿಗಮ್
Follow us on

ಸೋನು ನಿಗಮ್ (Sonu Nigam) ಅವರು ಸೋಶಿಯಲ್ ಮೀಡಿಯಾದಿಂದ ದೂರವೇ ಇದ್ದಾರೆ. ಅವರ ಈ ನಿರ್ಧಾರಕ್ಕೆ ಒಂದು ಕಾರಣ ಇದೆ. ಅದುವೇ ಸುಳ್ಳು ಸುದ್ದಿ. ಸೋನು ನಿಗಮ್ ಹೆಸರಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸೋ ಕೆಲಸ ಆಗುತ್ತಿದೆ. ಈಗ ಅವರು ಸೋಶಿಯಲ್ ಮೀಡಿಯಾ ಬಿಟ್ಟರೂ ಕೆಲವು ಕಿಡಿಗೇಡಿಗಳು ಸೋನು ನಿಗಮ್ ಹೆಸರನ್ನು ಕೆಡಿಸೋ ಕೆಲಸ ಮುಂದುವರಿಸಿದ್ದಾರೆ. ಉತ್ತರ ಪ್ರದೇಶದ ಮಂದಿ ಬಿಜೆಪಿಯನ್ನು ಬೆಂಬಲಿಸದ್ದಕ್ಕೆ ಸೋನು ಛೀಮಾರಿ ಹಾಕಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿದೆ. ಆದರೆ, ಸೋನು ಈ ರೀತಿ ಹೇಳಿಯೇ ಇಲ್ಲವಂತೆ.

ಸೋನು ನಿಗಮ್ ಸಿಂಗ್ ಹೆಸರಿನ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ. ‘ಇಡೀ ಅಯೋಧ್ಯೆಯನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ಹೊಸ ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ಸರ್ಕಾರ ನೀಡಿದೆ. 500 ವರ್ಷಗಳ ನಂತರ ರಾಮ ಮಂದಿರವನ್ನು ನಿರ್ಮಿಸಿದೆ. ದೇವಾಲಯವನ್ನು ಸುಂದರವಾಗಿ ನಿರ್ಮಿಸುತ್ತಿದೆ. ಅಂಥ ಪಕ್ಷವು ಅಯೋಧ್ಯೆಯಲ್ಲಿ ಗೆಲ್ಲಲಾಗಿಲ್ಲ. ಅಯೋಧ್ಯೆಯ ಜನರು ನಾಚಿಕೆಪಡಬೇಕು’ ಎಂದು ಸೋನು ನಿಗಮ್ ಸಿಂಗ್ ಹೆಸರಿನ ಖಾತೆ ಮೂಲಕ ಪೋಸ್ಟ್ ಮಾಡಲಾಗಿದೆ.

ಸೋನು ನಿಗಮ್ ಅವರೇ ಈ ರೀತಿ ಹೇಳಿದ್ದಾರೆ ಎಂದು ಕೆಲವರು ತಪ್ಪಾಗಿ ಭಾವಿಸಿದರು. ಈ ಬಗ್ಗೆ ವರದಿ ಕೂಡ ಮಾಡಿದರು. ಈ ವಿಚಾರದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ಆ ರೀತಿ ಹೇಳಿಯೇ ಇಲ್ಲ. ಈ ಕಾರಣದಿಂದಲೇ ನಾನು ಸೋಶಿಯಲ್ ಮೀಡಿಯಾವನ್ನು ಏಳು ವರ್ಷದ ಹಿಂದೆ ತೊರೆದೆ’ ಎಂದಿದ್ದಾರೆ ಸೋನು.

‘ಜನರು ಹಾಗೂ ಸುದ್ದಿ ವಾಹಿನಿಗಳು ಈ ಬಗ್ಗೆ ಸ್ವಲ್ಪವೂ ಯೋಚಿಸದೇ ಹೇಗೆ ಸುದ್ದಿ ಮಾಡುತ್ತಾರೆ ಎಂದು ನನಗೆ ಆಶ್ಚರ್ಯ ಆಗುತ್ತದೆ. ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಸೋನು ನಿಗಮ್ ಸಿಂಗ್ ಎಂದು ಬರೆದಿದೆ. ಅವರ ಖಾತೆಯಲ್ಲಿ ಅವರು ಬಿಹಾರದ ಕ್ರಿಮಿನಲ್ ವಕೀಲ ಎಂದು ಸ್ಪಷ್ಟವಾಗಿ ಬರೆಯಲಾಗಿದೆ’ ಎಂದು ಸೋನು ಹೇಳಿದ್ದಾರೆ.

ಇದನ್ನೂ ಓದಿ: ಗಾಯಕ ಸೋನು ನಿಗಮ್ ತಂದೆಯ ಮನೆಯಲ್ಲಿ 72 ಲಕ್ಷ ರೂ. ಕಳ್ಳತನ

‘ಈ ರೀತಿಯ ವಿಚಾರಕ್ಕೆ ನಾನು ಟ್ವಿಟರ್ ಬಿಟ್ಟೆ. ಆ ರೀತಿಯ ರಾಜಕೀಯ ಹೇಳಿಕೆ ಕೊಡುವುದರಲ್ಲಿ ಅರ್ಥವಿಲ್ಲ. ನನ್ನ ಗಮನ ಏನಿದ್ದರೂ ಕೆಲಸದ ಮೇಲೆ. ಈ ಘಟನೆ ಎಚ್ಚರಿಕೆಯ ಘಂಟೆ. ನನಗೆ ಮಾತ್ರವಲ್ಲ, ನನ್ನ ಕುಟುಂಬಕ್ಕೂ’ ಎಂದು ಸೋನು ಬೇಸರ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:54 am, Thu, 6 June 24