
ತಮಿಳುನಾಡಿನ (Tamil Nadu) ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಉತ್ತಮ ಶೇಕಡಾವಾರು ಮತದಾನ ಆಗಿದೆ. ಈ ಬಾರಿಯ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ಮತ್ತು ಅವರ ರಾಜಕೀಯ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಚುನಾವಣಾ ಫಲಿತಾಂಶಕ್ಕೆ ಇನ್ನೂ ಹತ್ತು ದಿನಗಳು ಬಾಕಿ ಇದೆ. ಮತದಾನ ಮುಗಿದ ಕಾರಣ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಇದ್ದ ಅಡ್ಡಿ ಆತಂಕ ತೊಲಗಿದೆ ಎನ್ನಲಾಗುತ್ತಿದ್ದು, ಶೀಘ್ರವೇ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ವಿಜಯ್ ರಾಜಕೀಯಕ್ಕೆ ಧುಮುಕಿದ್ದರಿಂದ ‘ಜನ ನಾಗಯನ್’ ಅವರ ಕೊನೆಯ ಸಿನಿಮಾ ಎನ್ನಲಾಗಿತ್ತು. ಆದರೆ ಕೆಲವು ರಾಜಕೀಯ ಪ್ರಭಾವಗಳಿಂದಾಗಿ ಅವರ ಸಿನಿಮಾ ಕಳೆದ ನಾಲ್ಕು ತಿಂಗಳಿಂದ ಬಿಡುಗಡೆ ಆಗದೆ ಡಬ್ಬದಲ್ಲೇ ಸಿಲುಕಿದೆ.
‘ಜನ ನಾಯಗನ್’ ಸಿನಿಮಾ ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್ಸಿಯು ಕೊನೆ ಕ್ಷಣದಲ್ಲಿ ಸಿನಿಮಾಕ್ಕೆ ಪ್ರಮಾಣ ಪತ್ರ ನಿರಾಕರಿಸಿತು. ನ್ಯಾಯಾಲಯದಲ್ಲಿ ಅನುಮತಿ ದೊರಕಿತಾದರೂ, ಸಿಬಿಎಫ್ಸಿ ಭಾರಿ ಪ್ರಯತ್ನ ನಡೆಸಿ ಸಿಕ್ಕ ಅನುಮತಿಯ ಮೇಲೆ ತಡೆ ಆದೇಶ ತಂದಿತು. ಕಳೆದ ನಾಲ್ಕು ತಿಂಗಳಿಂದಲೂ ಸಿನಿಮಾದ ನಿರ್ಮಾಪಕರು ಅವರ ಕಾನೂನು ತಂಡ ‘ಜನ ನಾಯಗನ್’ ಸಿನಿಮಾಕ್ಕೆ ಪ್ರಮಾಣ ಪತ್ರ ಕೊಡಿಸಲು ನಾನಾ ಪ್ರಯತ್ನ ಮಾಡುತ್ತಿದ್ದರೂ ಸಹ ಅದು ಯಶಸ್ವಿ ಆಗಿಲ್ಲ. ಆದರೆ ಈಗ ಮತದಾನ ಮುಗಿದಿರುವ ಕಾರಣ ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.
‘ಜನ ನಾಯಗನ್’ ಸಿನಿಮಾ ಮೊದಲು ಬಿಡುಗಡೆ ಆಗಿದ್ದರೆ ಅದು ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು, ವಿಜಯ್ಗೆ ಹೆಚ್ಚಿನ ಜನ ಬೆಂಬಲ ಲಭ್ಯವಾಗಬಹುದು ಎಂಬ ಕಾರಣದಿಂದಾಗಿಯೇ ಸಿನಿಮಾ ಬಿಡುಗಡೆ ಆಗದಂತೆ ಕೆಲ ರಾಜಕೀಯ ಶಕ್ತಿಗಳು ತಡೆದಿದ್ದವು ಎಂಬುದು ಗುಟ್ಟೇನೂ ಅಲ್ಲ. ಇದಕ್ಕೆ ಸಿಬಿಎಫ್ಸಿಯನ್ನು ದಾಳವನ್ನಾಗಿ ಬಳಸಿಕೊಳ್ಳಲಾಗಿತ್ತು. ಈಗ ವಿಜಯ್ ರಾಜಕೀಯ ಎದುರಾಳಿಗಳ ಉದ್ದೇಶ ಈಡೇರಿದ್ದು, ಈಗ ಸಿನಿಮಾ ಬಿಡುಗಡೆ ಆದರೂ ಸಹ ಎದುರಾಳಿಗಳಿಗೆ ಯಾವುದೇ ಹಾನಿ ಇಲ್ಲ.
ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾ ಸೋರಿಕೆ: ಮೂವರ ಬಂಧನ
ಆದರೆ ಚುನಾವಣಾ ಫಲಿತಾಂಶಗಳು ಹೊರಬೀಳುವ ಮೊದಲೇ ಈ ಚಿತ್ರ ಬಿಡುಗಡೆಯಾದರೆ ಚಿತ್ರತಂಡಕ್ಕೆ ಲಾಭವಾಗಲಿದೆ. ಒಂದು ವೇಳೆ ಫಲಿತಾಂಶದ ನಂತರ ಸಿನಿಮಾ ಬಿಡುಗಡೆಯಾಗಿ, ರಾಜಕೀಯವಾಗಿ ವಿಜಯ್ ಅವರಿಗೆ ಹಿನ್ನಡೆಯಾದರೆ ಅದು ಚಿತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಈ ಹಿಂದೆ ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ದೃಶ್ಯಗಳು ಸೋರಿಕೆಯಾಗಿ ಈಗಾಗಲೇ ಸಿನಿಮಾದ ನಿರ್ಮಾಪಕರಿಗೆ ಭಾರಿ ನಷ್ಟ ಉಂಟಾಗಿದೆ. ಈಗ ಈ ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದು, ಚಿತ್ರತಂಡ ಸೆನ್ಸಾರ್ ಕ್ಲಿಯರೆನ್ಸ್ ನಿರೀಕ್ಷೆಯಲ್ಲಿದೆ.
ವಿಜಯ್ ಅವರು ರಾಜಕೀಯ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಇದು ಅವರ ನಟನೆಯ ಕೊನೆಯ ಚಿತ್ರವೆಂದು ಪ್ರಚಾರ ಮಾಡಲಾಗಿತ್ತು, ಹೀಗಾಗಿ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿದೆ. ಎಚ್ ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ