‘ಪುಷ್ಪ’ ಸಿನಿಮಾ ನಿರ್ದೇಶಕ ಸುಕುಮಾರ್ (Sukumar) ಹಾಗೂ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಮೇಲೆ ಐಟಿ ಇಲಾಖೆ ದಾಳಿ ಮಾಡಿದೆ. ಇಂದು (ಏಪ್ರಿಲ್ 19) ಮುಂಜಾನೆಯೇ ಐಟಿ ಅಧಿಕಾರಿಗಳು ಪ್ರತ್ಯೇಕ ತಂಡ ಮಾಡಿಕೊಂಡು ಹೈದರಾಬಾದ್ ನಗರದ ವಿವಿಧ ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಸುಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಶೋಧ ಮಾಡಲಾಗಿದೆ. ‘ಮೈತ್ರಿ ಮೂವೀ ಮೇಕರ್ಸ್’ (Mythri Movie Makers ) ನಿರ್ಮಾಪಕರಾದ ನವೀನ್ ಯೆರ್ನೇನಿ ಹಾಗೂ ರವಿ ಯಲಮಂಚಿಲಿ ಅವರ ಮನೆ ಮೇಲೂ ದಾಳಿ ಆಗಿದೆ. ಸದ್ಯ ಶೋಧ ಕಾರ್ಯ ಮುಂದುವರಿದಿದ್ದು, ಮಹತ್ವದ ದಾಖಲೆಗಳು ಸಿಗಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸುಕುಮಾರ್ ಅವರು ನಿರ್ದೇಶಕರಾಗಿ ಫೇಮಸ್ ಆಗಿದ್ದಾರೆ. ಇದರ ಜೊತೆಗೆ ಅವರು ನಿರ್ಮಾಣ ಸಂಸ್ಥೆಯನ್ನೂ ಹೊಂದಿದ್ದಾರೆ. ಇದಕ್ಕೆ ‘ಸುಕುಮಾರ್ ರೈಟಿಂಗ್ಸ್’ ಎಂದು ಹೆಸರು ಇಟ್ಟಿದ್ದಾರೆ. ಅನೇಕ ನಿರ್ಮಾಣ ಸಂಸ್ಥೆಗಳ ಜೊತೆ ಕೈ ಜೋಡಿಸಿ ಇವರು ಸಿನಿಮಾ ನಿರ್ಮಾಣ ಮಾಡುತ್ತಾರೆ. ವರುಣ್ ತೇಜ್ ಮುಂದಿನ ಸಿನಿಮಾ ‘ವಿರೂಪಾಕ್ಷ’ಕ್ಕೆ ಸುಕುಮಾರ್ ಬಂಡವಾಳ ಹೂಡಿದ್ದಾರೆ. ಈ ಚಿತ್ರ ಏಪ್ರಿಲ್ 21ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ರಿಲೀಸ್ಗೆ ಕೆಲವೇ ದಿನ ಬಾಕಿ ಇರುವಾಗ ಐಟಿ ರೇಡ್ ನಡೆದಿದೆ.
ಇದನ್ನೂ ಓದಿ: Pushpa 2: ಪುಷ್ಪ 2 ಈ ವರ್ಷ ಬಿಡುಗಡೆ ಅನುಮಾನ, ಮರು ಚಿತ್ರೀಕರಣ ಮಾಡಲಿರುವ ಸುಕುಮಾರ್?
ಸದ್ಯ ಶೋಧಕಾರ್ಯ ಮುಂದುವರಿದಿದೆ. ಐಟಿ ದಾಳಿ ವೇಳೆ ಯಾವುದಾದರೂ ಮಹತ್ವದ ದಾಖಲೆ ಸಿಕ್ಕಿದೆಯೇ ಎನ್ನುವ ವಿಚಾರ ಇನ್ನಷ್ಟೇ ಅಧಿಕೃತ ಆಗಬೇಕಿದೆ. ಮೈತ್ರಿ ಮೂವೀ ಮೇಕರ್ಸ್ ‘ಪುಷ್ಪ 2’ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ದೊಡ್ಡ ಬಜೆಟ್ನಲ್ಲಿ ಸಿನಿಮಾ ಸಿದ್ಧ ಆಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾ ಶೂಟಿಂಗ್ ಆರಂಭ ಆಗಿತ್ತು. ಈ ಮಧ್ಯೆ ನಿರ್ಮಾಪಕರಿಗೆ ಐಟಿ ದಾಳಿಯ ಬಿಸಿ ತಟ್ಟಿದೆ.
ಸುಕುಮಾರ್ ಹಾಗೂ ಮೈತ್ರಿ ಮೂವೀ ಮೇಕರ್ಸ್ ಮೇಲೆ ದಾಳಿ ನಡೆಯಲು ಪ್ರಮುಖ ಕಾರಣ ಇದೆ. ಇವರು ಜಿಎಸ್ಟಿ ಪಾವತಿಯಲ್ಲಿ ವಂಚಿಸಿದ್ದಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಐಟಿ ರೇಡ್ ಆಗಿದೆ ಎನ್ನಲಾಗಿದೆ. ‘ಪುಷ್ಪ’ ಸಿನಿಮಾ 300 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಇದರಿಂದ ನಿರ್ಮಾಪಕರು ದೊಡ್ಡ ಲಾಭ ಕಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ