‘ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು..’; ಚೇತನ್ ಅಹಿಂಸಾ ಪರ ನಿಂತ ನಟ ಕಿಶೋರ್
ಚೇತನ್ ಅಹಿಂಸಾ ಅವರ ವೀಸಾ ಅನ್ನು ಕೇಂದ್ರ ಗೃಹ ಇಲಾಖೆ ರದ್ದು ಮಾಡಿತ್ತು. ಈ ಬಗ್ಗೆ ಚೇತನ್ ತೀವ್ರ ಅಸಮಾಧಾನ ಹೊರಹಾಕಿದ್ದರು. ಈಗ ಚೇತನ್ ಕುಮಾರ್ ಪರ ಕಿಶೋರ್ ಧ್ವನಿ ಎತ್ತಿದ್ದಾರೆ.

ನಟ ಚೇತನ್ ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುತ್ತಾರೆ. ಈಗಾಗಲೇ ಅವರು ಈ ರೀತಿಯ ಹೇಳಿಕೆಯಿಂದ ಬಂಧನಕ್ಕೆ ಒಳಗಾಗಿದ್ದಾರೆ. ಆದರೂ ಅವರು ತಮ್ಮ ಹೋರಾಟ ನಿಲ್ಲಿಸಿಲ್ಲ. ಅನೇಕ ವಿಚಾರಗಳ ಬಗ್ಗೆ ಅವರು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಚೇತನ್ ಕುಮಾರ್ (Chetan Kumar) ಪರವಾಗಿ ನಿಂತವರು ಕೆಲವೇ ಕೆಲವು ಮಂದಿ. ಆ ಪೈಕಿ ನಟ ಕಿಶೋರ್ (Actor Kishore) ಕೂಡ ಹೌದು. ಅವರು ಚೇತನ್ ಪರವಾಗಿ ನಿಂತಿದ್ದಾರೆ. ಈ ರೀತಿ ಗಡೀಪಾರು ಮಾಡೋದು ಸರಿ ಅಲ್ಲ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಚೇತನ್ ಅವರು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವಿರುದ್ಧ ಹೆಸರು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕಾರಣಕ್ಕೆ ಚೇತನ್ ಅಹಿಂಸಾ ಅವರ ವೀಸಾ ಅನ್ನು ಕೇಂದ್ರ ಗೃಹ ಇಲಾಖೆ ರದ್ದು ಮಾಡಿತ್ತು. ಈ ಬಗ್ಗೆ ಚೇತನ್ ತೀವ್ರ ಅಸಮಾಧಾನ ಹೊರಹಾಕಿದ್ದರು. ಈಗ ಚೇತನ್ ಕುಮಾರ್ ಪರ ಕಿಶೋರ್ ಧ್ವನಿ ಎತ್ತಿದ್ದಾರೆ. ಅವರು ಚೇತನ್ ಪರವಾಗಿ ಪೋಸ್ಟ್ ಹಾಕಿದ್ದಾರೆ.
ಚೇತನ್ ಕುಮಾರ್ ಅವರ ಓವರ್ಸೀಸ್ ಸಿಟಿಜನ್ಶಿಪ್ ಆಫ್ ಇಂಡಿಯಾ ರದ್ದು ಮಾಡಿ ಆದೇಶ ಬಂದಿತ್ತು. ಈ ಸುದ್ದಿಯ ಸ್ಕ್ರೀನ್ಶಾಟ್ ಹಂಚಿಕೊಂಡಿರುವ ಕಿಶೋರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಹಿಂದುತ್ವ ಎಂಬ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನೋಸ್ಥಿತಿ. ಆದರೆ ‘ಹಿಂದುತ್ವ’ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿ ಅಷ್ಟೇ’ ಎಂದು ಕಿಶೋರ್ ಪೋಸ್ಟ್ ಆರಂಭಿಸಿದ್ದಾರೆ.
ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಚಿತ್ರದ ಕೆಲವು ದೃಶ್ಯದ ಬಗ್ಗೆ ತಕರಾರು ತೆಗೆದ ನಟ ಚೇತನ್ ಕುಮಾರ್
‘ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ? ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡಿಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು, ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ