ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಸಾಥ್ ಕೊಟ್ಟ ಹಾಲಿವುಡ್ ಸ್ಟಾರ್ ನಿರ್ದೇಶಕ

SS Rajamouli-Mahesh Babu: ಎಸ್​ಎಸ್ ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾಕ್ಕಾಗಿ ಇಡೀ ವಿಶ್ವದ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಆದರೆ ರಾಜಮೌಳಿ ಈ ವರೆಗೆ ಸಿನಿಮಾ ಹೆಸರನ್ನು ಸಹ ಬಹಿರಂಗಪಡಿಸಿಲ್ಲ. ಇದೀಗ ಸಿನಿಮಾದ ಹೆಸರು ಮತ್ತು ಮೊದಲ ಪೋಸ್ಟರ್ ಅನ್ನು ಬಿಡುಗಡೆಗೆ ಯೋಜನೆ ರೂಪಿಸಿದ್ದು, ಜಗದ್ವಿಖ್ಯಾತ ಸಿನಿಮಾ ನಿರ್ದೇಶಕರೊಬ್ಬರು ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ.

ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಸಾಥ್ ಕೊಟ್ಟ ಹಾಲಿವುಡ್ ಸ್ಟಾರ್ ನಿರ್ದೇಶಕ
Mahesh Babu Rajamouli

Updated on: Aug 21, 2025 | 3:48 PM

ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಮಾತ್ರವೇ ಅಲ್ಲದೆ ವಿಶ್ವ ಸಿನಿಮಾ ಪ್ರಿಯರು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು (Mahesh Babu) ನಟಿಸುತ್ತಿರುವ ಇನ್ನೂ ಹೆಸರಿಡದ ಹೊಸ ಸಿನಿಮಾ. ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಿನಿಮಾದ ಒಂದು ಸಣ್ಣ ಪೋಸ್ಟರ್ ಮಾತ್ರವನ್ನು ಈ ವರೆಗೆ ಅಧಿಕೃತವಾಗಿ ರಾಜಮೌಳಿ ಹೊರಬಿಟ್ಟಿದ್ದಾರೆ. ಬಿಡುಗಡೆ ಆಗಿರುವ ಫೋಟೊನಲ್ಲಿ ನಂದಿ ಮತ್ತು ಶಿವನ ವಿಭೂತಿಯ ಹೊರತಾಗಿ ಹೆಚ್ಚಿನ ಮಾಹಿತಿ ಇಲ್ಲ.

ಆದರೆ ಸಿನಿಮಾದ ಮೊದಲ ಲುಕ್​ ಅನ್ನು ಬಿಡುಗಡೆ ಮಾಡಲು ರಾಜಮೌಳಿ ದೊಡ್ಡ ಯೋಜನೆಯನ್ನೇ ಹಾಕಿಕೊಂಡಿದ್ದಾರೆ. ಸಿನಿಮಾದ ಹೆಸರು ಮತ್ತು ಸಿನಿಮಾದ ಮೊದಲ ಲುಕ್ ಪೋಸ್ಟರ್ ಅನ್ನು ರಾಜಮೌಳಿ ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ. ಅದೂ ಜಗದ್ವಿಖ್ಯಾತ ಸಿನಿಮಾ ನಿರ್ದೇಶಕರೊಬ್ಬರು ರಾಜಮೌಳಿ-ಮಹೇಶ್ ಅವರ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಿದ್ದಾರೆ.

‘ಟೈಟ್ಯಾನಿಕ್’, ‘ಅವತಾರ್’ ಅಂಥಹಾ ಅತ್ಯದ್ಭುತ ಸಿನಿಮಾಗಳನ್ನು ನೀಡಿರುವ ಸೋಲೇ ಕಾಣದ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರನ್ ಅವರು ರಾಜಮೌಳಿ-ಮಹೇಶ್ ಬಾಬು ಅವರ ಹೊಸ ಸಿನಿಮಾದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಇದೇ ವರ್ಷ ನವೆಂಬರ್ ತಿಂಗಳಲ್ಲಿ ಈ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ:ಬಾಲಿವುಡ್​ ಮೇಲೆ ಮುನಿಸಿಕೊಂಡ ರಾಜಮೌಳಿ? ಕಾರಣ ಏನು?

ಜೇಮ್ಸ್ ಕ್ಯಾಮರನ್ ನಿರ್ದೇಶನದ ‘ಅವತಾರ್: ದಿ ಫೈರ್ ಆಂಡ್ ಆಶ್’ ಸಿನಿಮಾ ಡಿಸೆಂಬರ್ 19 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರಕ್ಕಾಗಿ ಜೇಮ್ಸ್ ಕ್ಯಾಮರನ್ ನವೆಂಬರ್ ತಿಂಗಳಲ್ಲಿ ಭಾರತಕ್ಕೆ ಬರಲಿದ್ದಾರೆ. ಆ ಸಮಯದಲ್ಲಿ ರಾಜಮೌಳಿ ಸಹ ಜೇಮ್ಸ್ ಕ್ಯಾಮರನ್ ಅವರ ಜೊತೆಗೂಡಲಿದ್ದಾರೆ. ರಾಜಮೌಳಿ ಸಹ ‘ಅವತಾರ್’ ಸಿನಿಮಾದ ಪ್ರಚಾರದಲ್ಲಿ ಭಾಗಿ ಆಗಲಿದ್ದು, ಇದೇ ಸಮಯದಲ್ಲಿ ಅವರು ತಮ್ಮ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆಯನ್ನು ಜೇಮ್ಸ್ ಅವರಿಂದ ಮಾಡಿಸಲಿದ್ದಾರೆ.

ಜೇಮ್ಸ್ ಕ್ಯಾಮರನ್, ರಾಜಮೌಳಿ ನಿರ್ದೇಶಿಸಿದ್ದ ‘ಆರ್​​ಆರ್​​ಆರ್’ ಸಿನಿಮಾ ಅನ್ನು ವೀಕ್ಷಿಸಿ ಬಹುವಾಗಿ ಮೆಚ್ಚಿಕೊಂಡಿದ್ದರು. ರಾಜಮೌಳಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದ ಜೇಮ್ಸ್ ಕ್ಯಾಮರನ್, ‘ನೀವು ಇಲ್ಲಿ (ಹಾಲಿವುಡ್) ಸಿನಿಮಾ ಮಾಡುವಿರಾದರೆ ಹೇಳಿ, ನಾವು ಮಾತನಾಡಿ ವ್ಯವಸ್ಥೆ ಮಾಡುತ್ತೇವೆ’ ಎಂದು ದೊಡ್ಡ ಆಫರ್ ಒಂದನ್ನು ನೀಡಿದ್ದರು. ಆ ಬಳಿಕವೂ ಸಹ ‘ಆರ್​​ಆರ್​​ಆರ್’ ಸಿನಿಮಾದ ಡಾಕ್ಯುಮೆಂಟರಿಯಲ್ಲಿಯೂ ಸಹ ಜೇಮ್ಸ್ ಕ್ಯಾಮರನ್ ಸಿನಿಮಾ ಅನ್ನು ಹಾಗೂ ರಾಜಮೌಳಿಯ ಪ್ರತಿಭೆಯನ್ನು ಕೊಂಡಾಡಿದ್ದರು. ರಾಜಮೌಳಿ ಹಾಗೂ ಜೇಮ್ಸ್ ಕ್ಯಾಮರನ್ ನಡುವೆ ಉತ್ತಮ ಗೆಳೆತನ ಹಾಗೂ ಪರಸ್ಪರ ಗೌರವ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ