‘ಜನ ನಾಯಗನ್’ ಬಾಕ್ಸ್ ಆಫೀಸ್‌ ಕಲೆಕ್ಷನ್; ಎರಡನೇ ದಿನ ದೊಡ್ಡ ಕುಸಿತ ಕಂಡ ವಿಜಯ್ ಸಿನಿಮಾ

ದಳಪತಿ ವಿಜಯ್ ನಟನೆಯ ಬಹುಕೋಟಿ ಬಜೆಟ್‌ನ ‘ಜನ ನಾಯಗನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ದಿನವೇ ಶೇಕಡಾ 50 ರಷ್ಟು ಭಾರಿ ಕುಸಿತ ಕಂಡಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ್ದ ಚಿತ್ರ, ಶುಕ್ರವಾರದ ಹೊತ್ತಿಗೆ ಸುಸ್ತಾಗಿದೆ. ಬರೋಬ್ಬರಿ 300 ರಿಂದ 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ವೀಕೆಂಡ್ ಕಲೆಕ್ಷನ್ ಈಗ ಅತ್ಯಂತ ನಿರ್ಣಾಯಕವಾಗಿದೆ.

‘ಜನ ನಾಯಗನ್’ ಬಾಕ್ಸ್ ಆಫೀಸ್‌ ಕಲೆಕ್ಷನ್; ಎರಡನೇ ದಿನ ದೊಡ್ಡ ಕುಸಿತ ಕಂಡ ವಿಜಯ್ ಸಿನಿಮಾ
ದಳಪತಿ ವಿಜಯ್

Updated on: Jul 25, 2026 | 6:35 AM

ಮುಖ್ಯಾಂಶಗಳು

  • ಜನ ನಾಯಗನ್ ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್ ವಿವರ
  • ಮೊದಲ ದಿನವೇ ಹಬ್ಬ, ಎರಡನೇ ದಿನವೇ ಸೆಮಿ-ಫ್ಲಾಪ್ ಭಯ
  • ಶೇ. 50ರಷ್ಟು ಕಡಿಮೆಯಾದ ಕಲೆಕ್ಷನ್

ಭಾರೀ ನಿರೀಕ್ಷೆ ಮೂಡಿಸಿ ತೆರೆಕಂಡಿದ್ದ ‘ಜನ ನಾಯಗನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ದಿನವೇ ಅತಿ ದೊಡ್ಡ ಹಿನ್ನಡೆ ಅನುಭವಿಸಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಗಳಿಕೆಯಲ್ಲಿ ದೊಡ್ಡ ಕುಸಿತ ಕಂಡಿದ್ದು, ಚಿತ್ರತಂಡಕ್ಕೆ ಭಾರೀ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಮೊದಲ ದಿನವಾದ ಗುರುವಾರ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಂಡು 42.70 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದ ‘ಜನ ನಾಯಗನ್’ ಸಿನಿಮಾ, ಎರಡನೇ ದಿನವಾದ ಶುಕ್ರವಾರ ಕೇವಲ 21.15 ಕೋಟಿ ರೂಪಾಯಿ ಮಾತ್ರ ಗಳಿಸಲು ಶಕ್ತವಾಗಿದೆ. ಅಂದರೆ ಕೇವಲ ಒಂದೇ ದಿನದಲ್ಲಿ ಚಿತ್ರದ ಗಳಿಕೆ ಶೇಕಡಾ 50 ಕ್ಕಿಂತಲೂ ಹೆಚ್ಚು ಕುಸಿದಂತಾಗಿದೆ. ಇದರೊಂದಿಗೆ ಚಿತ್ರದ ಶೋಗಳ ಸಂಖ್ಯೆಯೂ 13,067 ರಿಂದ 12,190 ಕ್ಕೆ ಇಳಿಕೆಯಾಗಿದೆ. ಥಿಯೇಟರ್‌ ಆಕ್ಯುಪೆನ್ಸಿ ಕೂಡ ಶೇ. 41.6 ರಿಂದ ಶೇ. 29.5 ಕ್ಕೆ ಪಲ್ಟಿಯಾಗಿದೆ.

ಸದ್ಯಕ್ಕೆ ಎರಡು ದಿನಗಳ ಪ್ರದರ್ಶನದಿಂದ ಭಾರತದಲ್ಲಿ ಒಟ್ಟು 63.85 ಕೋಟಿ ರೂಪಾಯಿ ನೆಟ್ ಹಾಗೂ 75.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿ ಎರಡನೇ ದಿನ 10.00 ಕೋಟಿ ರೂಪಾಯಿ ಗಳಿಸಿರುವ ಸಿನಿಮಾ, ಅಲ್ಲಿನ ಒಟ್ಟು ಗಳಿಕೆಯನ್ನು 37.50 ಕೋಟಿಗೆ ಕೊಂಡೊಯ್ದಿದೆ. ಈ ಮೂಲಕ ಜಾಗತಿಕವಾಗಿ ಚಿತ್ರದ ಗ್ರಾಸ್ ಕಲೆಕ್ಷನ್ 112.50 ಕೋಟಿ ರೂಪಾಯಿ ತಲುಪಿದಂತಾಗಿದೆ.

ಎರಡು ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರೋದು ಎಂದರೆ ಅದು ತಮಾಷೆಯ ವಿಷಯ ಅಲ್ಲ. ಆದರೆ, ಸಿನಿಮಾದ ಒಟ್ಟಾರೆ ಬಜೆಟ್​ಗೆ ಹೋಲಿಕೆ ಮಾಡಿದರೆ ಈ ಗಳಿಕೆ ತೀರಾ ಕಮ್ಮಿ ಎನಿಸುತ್ತಿದೆ. ಎರಡನೇ ದಿನವೂ ತಮಿಳು ಭಾಷೆಯಲ್ಲೇ ಹೆಚ್ಚಿನ ಗಳಿಕೆ ಆಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು

ಮೂಲಗಳ ಪ್ರಕಾರ ‘ಜನ ನಾಯಗನ್’ ಚಿತ್ರದ ಬಜೆಟ್ ಬರೋಬ್ಬರಿ 300 ರಿಂದ 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಷ್ಟು ಬೃಹತ್ ಮೊತ್ತವನ್ನು ಹೂಡಿಕೆ ಮಾಡಿರುವ ಕಾರಣ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅತಿ ದೊಡ್ಡ ಮಟ್ಟದ ಗಳಿಕೆ ಮಾಡುವುದು ಅನಿವಾರ್ಯವಾಗಿದೆ. ಶನಿವಾರ ಮತ್ತು ಭಾನುವಾರದ ರಜಾದಿನಗಳಲ್ಲಿ ಸಿನಿಮಾ ಭರ್ಜರಿ ಪಿಕ್‌ಅಪ್ ಕಾಣದೇ ಹೋದರೆ ನಿರ್ಮಾಪಕರಿಗೆ ತೊಂದರೆ ಆಗಬಹುದು.

ಪ್ರಶ್ನೆ:  ಜನ ನಾಯಗನ್ ಸಿನಿಮಾ ಯಾವಾಗ ಬಿಡುಗಡೆ ಆಗಿದೆ
ಉತ್ತರ:
ಜುಲೈ 23

ಪ್ರಶ್ನೆ: ಇದು ವಿಜಯ್ ಕೊನೆ ಚಿತ್ರವೇ? 
ಉತ್ತರ:
ಹೌದು

ಪ್ರಶ್ನೆ: ಎರಡು ದಿನಕ್ಕೆ ಜನ ನಾಯಗನ್ ಗಳಿಸಿದ್ದೆಷ್ಟು?
ಉತ್ತರ: 
112.50 ಕೋಟಿ ರೂಪಾಯಿ

 

Loading...
Unable to load recommendations.
Follow Us